ನಾವು ಗೆಲ್ಲೋದಕ್ಕೆ ಅವರಿಬ್ಬರೇ ಕಾರಣ: ಅಚ್ಚರಿ ಹೇಳಿಕೆ​ ನೀಡಿದ ಸೂರ್ಯಕುಮಾರ್​ ಯಾದವ್! Suryakumar Yadav

Suryakumar Yadav
Published on

Suryakumar Yadav : ಟೀಮ್​ ಇಂಡಿಯಾ ಮತ್ತೊಂದು ಟಿ20 ಸರಣಿಯನ್ನು ತನ್ನ ಮಡಲಿಗೆ ಸೇರಿಸಿಕೊಂಡಿದೆ. ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ 15 ರನ್‌ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ಭಾರತ ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಲ್ಲಿ ವಶಪಡಿಸಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಹಾರ್ದಿಕ್ ಪಾಂಡ್ಯ (30 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 53 ರನ್​) ಮತ್ತು ಶಿವಂ ದುಬೆ (34 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 53 ರನ್​) ಅರ್ಧಶತಕ ಗಳಿಸಿ, ಅದ್ಭುತ ಪ್ರದರ್ಶನ ನೀಡಿದರು. ಗುರಿ ಬೆನ್ನತ್ತಿದ ಇಂಗ್ಲೆಂಡ್ 19.4 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟಾಯಿತು. ಭಾರತದ ಬೌಲರ್‌ಗಳ ಪೈಕಿ ಬದಲಿ ಆಟಗಾರನಾಗಿ ಬಂದ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯ್ ತಲಾ ಎರಡು ವಿಕೆಟ್ ಪಡೆದರು.

ಹ್ಯಾರಿ ಬ್ರೂಕ್ ಅವರ ಅರ್ಧಶತಕ (26 ಎಸೆತಗಳಲ್ಲಿ 51 ರನ್​, 5 ಬೌಂಡರಿ, 2 ಸಿಕ್ಸರ್) ಹೊರತಾಗಿಯೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್​ನಲ್ಲಿ ಪ್ರಾಬಲ್ಯ ಮೆರೆಯಲು ವಿಫಲರಾದರು. ಪಂದ್ಯದ ನಂತರ ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮಾತನಾಡಿದರು. ದುಬೆ ಮತ್ತು ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಇನ್ನಿಂಗ್ಸ್‌ಗಾಗಿ ಅವರನ್ನು ಹೊಗಳಿದರು.

ಈ ಗೆಲುವಿನಲ್ಲಿ ತಂಡದ ಎಲ್ಲರೂ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಅಂತೆಯೇ ಪಂದ್ಯದ ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರ ಬೆಂಬಲ ಅದ್ಭುತವಾಗಿತ್ತು. ನಮ್ಮ ಗೆಲುವಿನ ಹಿಂದೆ ಅವರ ಬೆಂಬಲ ಸದಾ ಇರುತ್ತದೆ. 10ಕ್ಕೆ ಮೂರು ವಿಕೆಟ್ ಕಳೆದುಕೊಂಡಾಗ ನಾವು ಬಿಟ್ಟುಕೊಡಲು ಮನಸ್ಸು ಮಾಡಲಿಲ್ಲ. ನಮ್ಮ ಹುಡುಗರಿಗೆ ಅವರ ಬ್ರಾಂಡ್ ಕ್ರಿಕೆಟ್ ಅನ್ನು ಹೇಗೆ ಆಡಬೇಕೆಂದು ತಿಳಿದಿದೆ. ಒಂದು ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಳ್ಳುವುದನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೆ ಅಲ್ಲಿಂದ ನಮ್ಮ ಬ್ಯಾಟ್ಸ್‌ಮನ್‌ಗಳು ಆಡಿದ ರೀತಿ ನಿಜಕ್ಕೂ ಅದ್ಭುತ. ಹಾರ್ದಿಕ್ ಪಾಂಡ್ಯ ಮತ್ತು ದುಬೆ ಅಸಾಧಾರಣವಾಗಿ ಬ್ಯಾಟಿಂಗ್ ಮಾಡಿದರು. ಇಬ್ಬರೂ ತಮ್ಮ ಅನುಭವವನ್ನು ತೋರಿಸಿದರು. ನಾವು ಯಾವಾಗಲೂ ಮಾತನಾಡುವುದು ಇದನ್ನೇ ನೆಟ್ಸ್​ನಲ್ಲಿ ಆಡುವ ರೀತಿ ಮ್ಯಾಚ್‌ನಲ್ಲಿ ಮುಕ್ತವಾಗಿ ಆಡಲು ನಮ್ಮ ಹುಡುಗರಿಗೆ ಹೇಳುತ್ತೇವೆ ಎಂದರು.

ನೆಟ್ ಸೆಷನ್‌ಗಳಲ್ಲಿ ನಮ್ಮ ಆಟಗಾರರು ಶ್ರಮಿಸುತ್ತಿದ್ದಾರೆ. ನೆಟ್ ಪ್ರಾಕ್ಟೀಸ್​ನಲ್ಲಿ ಆಡುತ್ತಿರುವಂತೆಯೇ ಆಟದಲ್ಲೂ ಆಡುತ್ತಿದ್ದಾರೆ. ಹಾಗಾಗಿ ನನಗೆ ತುಂಬಾ ಖುಷಿಯಾಗಿದೆ. ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಪವರ್ ಪ್ಲೇ ನಂತರ (7-10 ಓವರ್‌ಗಳ ನಡುವೆ) ರನ್ ಗಳಿಸುವುದು ಸುಲಭವಲ್ಲ. ಪವರ್ ಪ್ಲೇನಲ್ಲಿ ಇಂಗ್ಲೆಂಡ್ ಆಕ್ರಮಣಕಾರಿ ಆಟವಾಡಿತು. ಆನಂತರ ನಾವು ಕೆಲವು ವಿಕೆಟ್ ಪಡೆದು ಆಟದ ಮೇಲೆ ಹಿಡಿತ ಸಾಧಿಸಿದೆವು. ದುರಾದೃಷ್ಟವಶಾತ್, ಶಿವಂ ದುಬೆಗೆ ಫೀಲ್ಡಿಂಗ್​ ಮಾಡಲು ಸಾಧ್ಯವಾಗಲಿಲ್ಲ. ಹರ್ಷಿತ್ ರಾಣಾ ಮೂರನೇ ಸೀಮರ್ ಆಗಿ ಬಂದರು ಮತ್ತು ಅದ್ಭುತ ಪ್ರದರ್ಶನ ನೀಡಿದ್ದಾರೆ. ಮುಂಬೈನಲ್ಲಿ ನಡೆಯಲಿರುವ ಕೊನೆಯ ಟಿ20ಯಲ್ಲೂ ನಾವು ಧೂಳೆಬ್ಬಿಸುತ್ತೇವೆ ಎಂದು ಸೂರ್ಯಕುಮಾರ್​ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net