ಮುಂಬೈ ಇಂಡಿಯನ್ಸ್​ಗೆ 'ಸ್ಕೈ' ಆಸರೆ; ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ಬರೆದ ಭಾರತದ ಮಿ.360 | IPL 2025

ವಿಜಯವಾಣಿ (93)
Published on

IPL 2025: ಇಂದು (ಏ.27) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್​ ಮತ್ತು ಲಖನೌ ಸೂಪರ್​ ಜೈಂಟ್ಸ್​ ನಡುವಿನ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ ಭಾರೀ ಅಂತರದಲ್ಲಿ ಜಯ ಸಾಧಿಸಿತು.

54 ರನ್​ಗಳ ಅಂತರದಲ್ಲಿ ಲಖನೌ ಸೂಪರ್​ ಜೈಂಟ್ಸ್​ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್​ಗೆ ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್​ ಆಸರೆಯಾಯಿತು. 28 ಎಸೆತ ಎದುರಿಸಿದ ಸ್ಕೈ 54 ರನ್​ ಸಿಡಿಸುವುದರ ಜತೆಗೆ ಐಪಿಎಲ್​ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಬರೆದ ಭಾರತೀಯ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ.

ಐಪಿಎಲ್​ನಲ್ಲಿ ವೇಗವಾಗಿ 4 ಸಾವಿರ ರನ್​ಗಳನ್ನು ಕಲೆಹಾಕಿರುವ ಸೂರ್ಯಕುಮಾರ್​, ಟಿ20 ಲೀಗ್​ ಇತಿಹಾಸದ ಪುಟದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಐಪಿಎಲ್‌ನಲ್ಲಿ 4,000 ರನ್‌ ಪೂರ್ಣಗೊಳಿಸುವ ಮೂಲಕ ಸಾಧನೆಗೈದ ಸೂರ್ಯ, ಕೇವಲ 2714 ಎಸೆತಗಳಲ್ಲಿ ಈ ರೆಕಾರ್ಡ್​ ಮಾಡಿರುವುದು ಅಚ್ಚರಿಯ ಸಂಗತಿ. 2820 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಅವರ ದಾಖಲೆಯನ್ನು ಸ್ಕೈ ಮುರಿದಿದ್ದಾರೆ.

ವೆಸ್ಟ್​ ಇಂಡೀಸ್​ ದೈತ್ಯ ಬ್ಯಾಟರ್​ ಕ್ರೀಸ್​ ಗೇಲ್​ ಮತ್ತು ದಕ್ಷಿಣ ಆಫ್ರಿಕಾದ ಮಿ. 360 ಎಬಿ ಡಿವಿಲಿಯರ್ಸ್​ ನಂತರದಲ್ಲಿ ಸೂರ್ಯ ಸ್ಥಾನ ಪಡೆದಿದ್ದಾರೆ. ಕ್ರೀಸ್​ 2,653 ಮತ್ತು ಡಿವಿಲಿಯರ್ಸ್​ 2,658 ಎಸೆತಗಳಲ್ಲಿ ಈ ದಾಖಲೆ ಬರೆದಿದ್ದಾರೆ. ಇವರಿಬ್ಬರ ನಂತರದಲ್ಲಿ ಸ್ಕೈ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ವೇಗದ 4000 ರನ್​ ರೆಕಾರ್ಡ್ ಮುಖೇನ ಸೂರ್ಯ ಇದೀಗ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net