ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿ 'ಸ್ಕೈ' ಬಾಲ್ಯದ ಕೋಚ್​! ದೊಡ್ಡ ನೆರವು ನೀಡಲು ಮುಂದಾದ ಸೂರ್ಯಕುಮಾರ್​

ವಿಜಯವಾಣಿ - 2024-07-23T164902.973
Published on

ನವದೆಹಲಿ: ಬಾರ್ಬಡೋಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ, 2024ರ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಲ್ಲದೇ 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿಯನ್ನು ತಂದುಕೊಟ್ಟಿದ್ದು ಮರೆಯಲಾಗದ ಕ್ಷಣ. ವಿಶ್ವಕಪ್ ಗೆದ್ದ ಹೀರೋಗಳಿಗೆ ಮುಂಬೈನಲ್ಲಿ ವಿಶೇಷವಾಗಿ ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಕೂಡ ಮಾಡಲಾಯಿತು. ಫೈನಲ್​ನಲ್ಲಿ ಡೇವಿಡ್ ಮಿಲ್ಲರ್ ಕ್ಯಾಚ್ ಹಿಡಿಯುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿ, ಭಾರತದ ಗೆಲುವಿಗೆ ಕಾರಣರಾದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಅವರ ಬಾಲ್ಯದ ಕೋಚ್​ ಇದೀಗ ಕೆಲಸವಿಲ್ಲದೆ ಬೇರೇನೂ ಮಾಡಬೇಕು ಎಂದು ತೋಚದೆ ಕಂಗಲಾಗಿದ್ದಾರೆ.

ಮುಂಬರುವ ಶ್ರೀಲಂಕಾ ವಿರುದ್ಧದ ಮೂರು ಟಿ20 ಪಂದ್ಯಗಳ ಟೂರ್ನಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಸಕಲ ತಯಾರಿ ಮಾಡಿಕೊಳ್ಳುವುದರಲ್ಲಿ ಸದ್ಯ ಸಖತ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರ ಬಾಲ್ಯದ ಕೋಚ್ ಅಶೋಕ್ ಅಸ್ವಾಲ್ಕರ್ ತಮ್ಮ ಕೆಲಸವನ್ನು ಕಳೆದುಕೊಂಡು, ಯಾವುದೇ ಕೆಲಸ ಸಿಗದೆ ಅತ್ಯಂತ ಕಠಿಣ ಪರಿಸ್ಥಿತಿ ತಲುಪಿದ್ದು, ಮುಂದೆ ಏನು ಮಾಡಬೇಕು ಎಂಬುದು ತೋಚದೆ ಸೂರ್ಯರಿಗೆ ಕರೆ ಮಾಡಿ, ಕಷ್ಟ ಹೇಳಿಕೊಂಡ ವಿಷಯ ಇದೀಗ ಬೆಳಕಿಗೆ ಬಂದಿದೆ.

24 ವರ್ಷದಿಂದ ಕ್ರಿಕೆಟ್ ಕೋಚ್ ಹಾಗೂ ಪಿಚ್​ ಕ್ಯೂರೆಟರ್​ ಆಗಿಯೂ ಕೆಲಸ ಮಾಡುತ್ತಿದ್ದ ಅಶೋಕ್​, ತಮ್ಮ ಜಾಬ್ ಕಳೆದುಕೊಳ್ಳುವ ಮುನ್ನ ತಿಂಗಳಿಗೆ 41,000 ರೂ. ವೇತನ ಪಡೆಯುತ್ತಿದ್ದರು. ಎರಡು ಕಡೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಅಶೋಕ್​ ಅವರಿಗೆ ಇದೀಗ ಕೆಲಸ ಇಲ್ಲದೆ ಮುಂದೇನು ಮಾಡಬೇಕು ಎಂಬುದು ಗೊತ್ತಾಗದೆ ತೀವ್ರ ಸಂಕಷ್ಟದ ಪರಿಸ್ಥಿತಿ ತಲುಪಿದ್ದಾರೆ. ತನ್ನ ಕುಟುಂಬದವರಿಗೆ ಕೆಲಸ ಕಳೆದುಕೊಂಡ ವಿಷಯವನ್ನು ಹೇಳದೆ ಮುಚ್ಚಿಟ್ಟು, ಮತ್ತೊಂದು ಕಡೆ ಕ್ರಿಕೆಟ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು, ತಿಂಗಳಿಗೆ ಕೇವಲ 10 ಸಾವಿರ ರೂ. ಪಡೆಯುತ್ತಿದ್ದಾರೆ. ಈ ಕಠಿಣ ಪರಿಸ್ಥಿತಿಯನ್ನು ದೂರವಾಣಿ ಕರೆಯಲ್ಲಿ ವಿವರಿಸಿದ ಅಶೋಕ್​ಗೆ, ಸೂರ್ಯಕುಮಾರ್​ ಧೈರ್ಯ ಹೇಳಿ, ದೊಡ್ಡ ಭರವಸೆಯೊಂದನ್ನು ನೀಡಿದ್ದಾರೆ.

ವರದಿಗಳ ಪ್ರಕಾರ, ಕೆಲಸ ಕಳೆದುಕೊಂಡ ನಾನು​ ಭಾರೀ ಸಂಕಷ್ಟದಲ್ಲಿದ್ದೆ. ನನಗಾದ ಕಹಿ ಘಟನೆಯನ್ನು ಸೂರ್ಯಗೆ ವಿವರಿಸಿದೆ. ಆಗ ಅವರು ಯಾರು ನನ್ನ ಕೆಲಸ ಕಿತ್ತುಕೊಂಡು, ಮುಂದೆ ಕೆಲಸ ಇಲ್ಲದಂತೆ ಮಾಡಿದ್ರೋ ಅವರೊಂದಿಗೆ ಮಾತು ನಿಲ್ಲಿಸಿದ್ದಾರೆ. ಸದ್ಯ ನನ್ನನ್ನು ವಾಪಾಸ್ ಅದೇ ಹುದ್ದೆ ನಿರ್ವಹಿಸುವಂತೆ ಕರೆಯುತ್ತಿದ್ದಾರೆ. ಆದ್ರೆ, ನಾನು ಮಾಡುವುದಿಲ್ಲ. ಬದಲಿಗೆ ಸೂರ್ಯಕುಮಾರ್ ಕೊಟ್ಟಿರುವ ಧೈರ್ಯ, ಸಹಾಯದ ಮೇರೆಗೆ ನಮ್ಮದೇ ಒಂದು ಹೊಸ ಕ್ರಿಕೆಟ್ ಅಕಾಡೆಮಿ ತೆರೆಯುತ್ತೇವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net