ಗಾಯದಿಂದಾಗಿ ಸೂರ್ಯಕುಮಾರ್​ಗೆ ಅಲಭ್ಯ; ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಗೆ ನಾಯಕನಿಗಾಗಿ ಭಾರತ ಹುಡುಕಾಟ!

afghan web
Published on

ನವದೆಹಲಿ: ಇತ್ತೀಚೆಗೆ ಆಸೀಸ್​ ಮತ್ತು ದ. ಆಫ್ರಿಕಾ ವಿರುದ್ಧದ ಟಿ20 ಸರಣಿಗಳಲ್ಲಿ ಭಾರತ ತಂಡದ ಹಂಗಾಮಿ ನಾಯಕರಾಗಿದ್ದ ಸೂರ್ಯಕುಮಾರ್​ ಯಾದವ್​ ಜನವರಿ 11ರಿಂದ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕೊನೇ ಟಿ20 ಪಂದ್ಯದಲ್ಲಿ ಫೀಲ್ಡಿಂಗ್​ ವೇಳೆ ಪಾದದ ಗಾಯಕ್ಕೊಳಗಾಗಿರುವ ಸೂರ್ಯಕುಮಾರ್​ ಚೇತರಿಕೆಗೆ 6 ವಾರ ಬೇಕಾಗಿದೆ. ಹೀಗಾಗಿ ಅವರು ಫೆಬ್ರವರಿವರೆಗೆ ಫಿಟ್​ ಆಗುವುದಿಲ್ಲ. ಐಪಿಎಲ್​ಗೆ ಮುನ್ನ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಸೂರ್ಯ ಮರಳಿ ಕಣಕ್ಕಿಳಿಯಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಸೂರ್ಯ ಜತೆಗೆ ಹಾರ್ದಿಕ್​ ಪಾಂಡ್ಯ ಕೂಡ ಆಫ್ಘನ್​ ಸರಣಿಗೆ ಅಲಭ್ಯರಾಗಿರುವುದರಿಂದ ಬಿಸಿಸಿಐ, ರೋಹಿತ್​ಗೆ ಟಿ20ಯಲ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳುವಂತೆ ಕೇಳಿಕೊಳ್ಳಬಹುದು ಅಥವಾ ರವೀಂದ್ರ ಜಡೇಜಾರನ್ನು ಹಂಗಾಮಿ ನಾಯಕರಾಗಿ ಆರಿಸಬಹುದು ಎನ್ನಲಾಗಿದೆ. ಆದರೆ ಜಡೇಜಾ ಇಂಗ್ಲೆಂಡ್​ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲೂ ಆಡಬೇಕಾಗಿರುವುದರಿಂದ ಅವರ ಕಾರ್ಯದೊತ್ತಡ ತಗ್ಗಿಸಬೇಕಾಗುತ್ತದೆ.

ಇನ್ನು ಏಷ್ಯಾಡ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಋತುರಾಜ್​ ಗಾಯಕ್ವಾಡ್​ ಕೂಡ ದಣ ಆಫ್ರಿಕಾದಲ್ಲಿ ಕೈಬೆರಳು ಗಾಯಕ್ಕೊಳಗಾಗಿದ್ದಾರೆ. ಹೀಗಾಗಿ ಆಫ್ಘನ್​ ವಿರುದ್ಧ ಟಿ20 ಸರಣಿಯಲ್ಲಿ ಯಾರು ನಾಯಕರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net