

ಶ್ರೀನಗರ: ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಶನಿವಾರದಿಂದ ಆರಂಭಗೊಳ್ಳಲಿರುವ 13ನೇ ಐಪಿಎಲ್‌ನಿಂದ ದೂರ ಉಳಿದಿದ್ದಾರೆ. ವೈಯಕ್ತಿಕ ಕಾರಣ ನೀಡಿ ದುಬೈನಲ್ಲಿ ಕ್ವಾರಂಟೈನ್ ಅವಧಿಯಲ್ಲಿರುವಾಗಲೇ ರೈನಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರ ಬಂದಿದ್ದರು. ಮೂಲತಃ ಕಾಶ್ಮೀರಿ ಪಂಡಿತರಾಗಿರುವ ಸುರೇಶ್ ರೈನಾ ಸದ್ಯ ಜಮ್ಮು ಕಾಶ್ಮೀರ ಪ್ರವಾಸದಲ್ಲಿದ್ದಾರೆ. ರಾಜ್ಯದಲ್ಲಿರುವ ಯುವ ಕ್ರಿಕೆಟಿಗರಿಗೆ ಸಹಾಯ ಹಸ್ತ ನೀಡಲು ಸಹಕರಿಸುವಂತೆ ರೈನಾ ಕೇಳಿಕೊಂಡಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಯುವ ಕ್ರಿಕೆಟಿಗರನ್ನು ಭೇಟಿಯಾಗುವ ಉದ್ದೇಶ ಹೊಂದಿದ್ದಾರೆ ಎಂದರು.
ಸುರೇಶ್ ರೈನಾ ಸಹೋದರ ಸಂಬಂಧಿಕರು ಇತ್ತೀಚೆಗೆ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದರು. ಪ್ರಕರಣ ಭೇದಿಸಿದ ಪಂಜಾಬ್ ಪೊಲೀಸರು ಮೂವರನ್ನು ಬಂಧಿಸಿದ್ದರು. ರೈನಾ ದುಬೈನಿಂದ ವಾಪಸ್ ಆಗಲು ಇದು ಕೂಡ ಕಾರಣ ಎಂದು ಹೇಳಲಾಗಿತ್ತು. ಆಗಸ್ಟ್ 15 ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ರೈನಾ ಕೂಡ ನಿವೃತ್ತಿ ಹೇಳಿದ್ದರು. ರಾಷ್ಟ್ರೀಯ ತಂಡಕ್ಕೆ ರೈನಾ ನೀಡಿರುವ ಸೇವೆ ಪರಿಗಣಿಸಿ ಪ್ರಧಾನಿ ಮೋದಿ ಕೂಡ ಪತ್ರ ಬರೆದಿದ್ದರು.
ರೈನಾ ದುಬೈನಿಂದ ವಾಪಸಾದ ಹಿನ್ನೆಲೆಯಲ್ಲಿ ಇನ್ಮುಂದೆ ಚೆನ್ನೈ ತಂಡದ ಪರ ಆಡುವುದಿಲ್ಲ ಎಂದೆಲ್ಲಾ ಸುದ್ದಿಯಾಗಿತ್ತು. ಇದಕ್ಕೆ ಸ್ವತಃ ಸ್ಪಷ್ಟನೆ ನೀಡಿದ್ದ ರೈನಾ, ಮತ್ತಷ್ಟು ವರ್ಷಗಳ ಕಾಲ ಸಿಎಸ್‌ಕೆ ಪರ ಆಡುವುದಾಗಿ ಹೇಳಿದ್ದರು. ಸಿಎಸ್‌ಕೆ ನನಗೆ ಕುಟುಂಬ ಇದ್ದಂತೆ. ವೈಯಕ್ತಿಕ ಕಾರಣದಿಂದ ತಂಡ ತೊರೆದೆ, 12.5 ಕೋಟಿ ರೂಪಾಯಿಯನ್ನು ಯಾರು ಬಿಡಲು ಇಷ್ಟಪಡುವುದಿಲ್ಲ ಎಂದು ರೈನಾ ಇತ್ತೀಚೆಗಷ್ಟೇ ಹೇಳಿದ್ದರು.