

ನವದೆಹಲಿ: ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಐಪಿಎಲ್ 13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ಕಿಂಗ್ಸ್ ಪರ ಆಡಲು ವಿಶೇಷ ರೀತಿಯಲ್ಲಿ ಸಜ್ಜಾಗಿದ್ದಾರೆ. ಟೂರ್ನಿಗಾಗಿ ಯುಎಇಗೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ಸುರೇಶ್ ರೈನಾ ತಮ್ಮ ಕೈಗಳ ಮೇಲೆ ವಿಶೇಷವಾದ ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾರೆ. ಕ್ರಿಕೆಟ್ ತಾರೆಯರು ಹೆಚ್ಚೆ ಹಾಕಿಸಿಕೊಳ್ಳುವುದು ಹೊಸದಲ್ಲ. ಆದರೆ ಸುರೇಶ್ ರೈನಾ ಅವರ ಹಚ್ಚೆಯಲ್ಲೇ ವಿಶೇಷತೆಗಳಿವೆ.
'ಅವರು ನನ್ನ ಬದುಕಿಗೆ ಕಾರಣಗಳನ್ನು ನೀಡುತ್ತಾರೆ' ಎಂಬ ಬರಹದೊಂದಿಗೆ ಸುರೇಶ್ ರೈನಾ ಅವರು ಕೈಗಳ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಚಿತ್ರವನ್ನು ಟ್ವೀಟಿಸಿದ್ದಾರೆ. ಅವರು ಎಡಗೈ ತೊಳಿನ ಮೇಲೆ ಪತ್ನಿ ಪ್ರಿಯಾಂಕಾ ಅವರ ಹೆಸರನ್ನು ಹೆಚ್ಚೆ ಹಾಕಿಸಿಕೊಂಡಿದ್ದರೆ, ಎಡ ಮತ್ತು ಬಲಗೈ ಕೆಳಭಾಗದಲ್ಲಿ ಪುತ್ರಿ ಗ್ರೇಸಿಯಾ ಮತ್ತು ಪುತ್ರ ರಿಯೋ ಹೆಸರುಗಳನ್ನು ಬರೆಸಿಕೊಂಡಿದ್ದಾರೆ.
2008ರಿಂದಲೂ ಚೆನ್ನೈ ಸೂಪರ್ಕಿಂಗ್ಸ್ ತಂಡಕ್ಕೆ ಐಪಿಎಲ್ನಲ್ಲಿ ಆಧಾರಸ್ತಂಭವಾಗುತ್ತಲೇ ಬಂದಿರುವ ಸುರೇಶ್ ರೈನಾ, 2015ರ ಏಪ್ರಿಲ್ನಲ್ಲಿ ಪ್ರಿಯಾಂಕಾ ಅವರನ್ನು ವಿವಾಹವಾಗಿದ್ದರು. 2016ರಲ್ಲಿ ಪುತ್ರಿ ಗ್ರೇಸಿಯಾ ಜನಿಸಿದ್ದರೆ, ಈ ವರ್ಷ ಮಾರ್ಚ್ನಲ್ಲಿ ಪುತ್ರ ಜನಿಸಿದ್ದ. ರೈನಾ ಭಾರತ ಪರ 19 ಟೆಸ್ಟ್, 226 ಏಕದಿನ ಮತ್ತು 78 ಟಿ20 ಪಂದ್ಯಗಳನ್ನು ಆಡಿದ್ದಾರೆ.