ಇಂದಿನ ಈ ಸ್ಥಿತಿಗೆ ಅವರೇ ಕಾರಣ! CSK ಮಾಡಿದ ಎಡವಟ್ಟನ್ನು ಎತ್ತಿಹಿಡಿದ ಸುರೇಶ್ ರೈನಾ | IPL 2025

ವಿಜಯವಾಣಿ (83)
Published on

IPL 2025: ಐಪಿಎಲ್​ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್​ ಕಿಂಗ್ಸ್​, 18ನೇ ಆವೃತ್ತಿಯಲ್ಲಿ ಯಾರೂ ಊಹಿಸದ ಕಳಪೆ ಪ್ರದರ್ಶನವನ್ನು ನೀಡಿದೆ. ಇದು ಕ್ರಿಕೆಟ್​ ಪ್ರಿಯರನ್ನು ಭಾರೀ ಅಚ್ಚರಿಗೆ ದೂಡಿದ್ದು, ಫ್ರಾಂಚೈಸಿಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಸೀಸನ್​ನಲ್ಲಿ ಆಡಿರುವ ಒಟ್ಟು 9 ಪಂದ್ಯಗಳಲ್ಲಿ 7 ಹೀನಾಯ ಸೋಲು ದಾಖಲಿಸಿರುವ ಚೆನ್ನೈ ಪಡೆ, ಕೇವಲ ಎರಡೇ ಎರಡು ಪಂದ್ಯವನ್ನು ಮಾತ್ರ ಗೆದ್ದು ಬೀಗಿದೆ. ಈಗಾಗಲೇ ಪ್ಲೇಆಫ್ ಆಸೆಗೆ ಎಳ್ಳು-ನೀರು ಬಿಟ್ಟಿರುವ ಸಿಎಸ್​ಕೆ, ಇನ್ನೂ ಐದು ಪಂದ್ಯಗಳನ್ನು ಆಡಲು ಎದುರುನೋಡುತ್ತಿದೆ. ಈ ಮಧ್ಯೆ ಸಿಎಸ್​ಕೆ ವಿಫಲ ಕುರಿತು ಸುರೇಶ್​ ರೈನಾ ಮೌನ ಮುರಿದಿದ್ದಾರೆ.

ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗಿರುವ ರುತುರಾಜ್ ಸ್ಥಾನವನ್ನು ತುಂಬಿರುವ ಮಹೇಂದ್ರ ಸಿಂಗ್ ಧೋನಿ, ಎರಡು ವರ್ಷಗಳ ನಂತರ ಮತ್ತೊಮ್ಮೆ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರಂಭದಲ್ಲಿ ಸೋಲು ಕಂಡ ಸಿಎಸ್​ಕೆ, ಧೋನಿ ಕ್ಯಾಪ್ಟನ್ಸಿಯಲ್ಲಿಯೂ ಸತತ ಸೋಲು ನೋಡುತ್ತಿರುವುದು ಮಾಜಿ ಕ್ರಿಕೆಟಿಗರ ಬೇಸರಕ್ಕೆ ಕಾರಣವಾಗಿದೆ. ಇನ್ನು ಇಷ್ಟಕ್ಕೆಲ್ಲ ಕಾರಣ ಫ್ರಾಂಚೈಸಿ ಎಂದು ದೂರಿರುವ ರೈನಾ, ಹರಾಜಿನಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಿಎಸ್​ಕೆ ಕೈಚೆಲ್ಲಿತು ಎಂದಿದ್ದಾರೆ.

"ಸಿಎಸ್​ಕೆ ಆಟಗಾರರು ಮುಂದೆ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣ ಅತ್ಯಂತ ಕಳಪೆ ಪ್ರದರ್ಶನ. ಈ ಹಿಂದೆ ತಂಡದಲ್ಲಿದ್ದ ಆಟಗಾರರು ಸಿಎಸ್​ಕೆ ಪ್ಲೇಆಫ್​ಗೆ ತಲುಪುವ ಹಾಗೇ ಮಾಡುತ್ತಿದ್ದರು. ಆ ಮಟ್ಟಿಗಿನ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಒಳ್ಳೆಯ ಆಯ್ಕೆ ಫ್ರಾಂಚೈಸಿ ಮಾಡಿಕೊಳ್ಳಲಿಲ್ಲ. ಇಶಾನ್ ಕಿಶನ್​ ಮತ್ತು ರಿಷಭ್ ಪಂತ್​ರನ್ನು ಅಂದೇ ತಂಡಕ್ಕೆ ಖರೀದಿ ಮಾಡಬೇಕಿತ್ತು. ಆದರೆ, ಇವರು ಮಾಡಲಿಲ್ಲ" ಎಂದರು.

"ಧೋನಿ ನಂತರ ಸಿಎಸ್​ಕೆಗೆ ಮುಂದಿನ ವಿಕೆಟ್​ ಕೀಪರ್​ ಯಾರು? ಈ ಪ್ರಶ್ನೆಗೆ ಅವರಲ್ಲಿ ಉತ್ತರವೇ ಇಲ್ಲ. ಬ್ಯಾಟರ್​ಗಳು ಸಿಕ್ಕಾಪಟ್ಟೆ ಡಾಟ್ ಬಾಲ್ ಆಡುತ್ತಿದ್ದಾರೆ. ಅಸಲಿಗೆ ಈ ಸೀಸನ್​ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಆಡಿರುವ ತಂಡ ಸಿಎಸ್​ಕೆ ಆಗಿದೆ. ಪವರ್​ಪ್ಲೇನಲ್ಲಿ ಬ್ಯಾಟಿಂಗ್​ ಮಾಡಲು ತೀರ ಹೆಣಗಾಡುತ್ತಿದ್ದಾರೆ. ಏಕಂದರೆ, ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಹೆಚ್ಚು ಕಾಲ ಕ್ರೀಸ್​ನಲ್ಲಿ ನಿಲ್ಲುತ್ತಿಲ್ಲ. ಡೇವಾನ್ ಕಾನ್ವೆ ಉತ್ತಮ ಓಪನಿಂಗ್ ನೀಡುತ್ತಿದ್ದರು. ಆದ್ರೆ, ತಂದೆಯ ಅಗಲಿಕೆಯಿಂದ ಅವರು ತಂಡದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ" ಎಂದು ರೈನಾ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net