

ಹೈದರಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್-17ರಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಯಾಟ್ ಕಮ್ಮಿನ್ಸ್ ಬಳಗ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಸತತ ಎರಡನೇ ಸೋಲು ಅನುಭವಿಸಿದ ಋತುರಾಜ್ ಗಾಯಕ್ವಾಡ್ ಪಡೆ ಮೂರನೇ ಸ್ಥಾನದಲ್ಲಿ ಉಳಿದಿದೆ.
ಆರ್‌ಜಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ,ದೊಡ್ಡ ಜತೆಯಾಟದ ಕೊರತೆ ಹಾಗೂ ಸ್ಲಾಗ್ ಓವರ್‌ಗಳಲ್ಲಿ ರನ್‌ಬರ ಎದುರಿಸಿ ಆಲ್ರೌಂಡರ್ ಶಿವಂ ದುಬೆ (45 ರನ್, 24 ಎಸೆತ, 2 ಬೌಂಡರಿ, 4 ಸಿಕ್ಸರ್) ಆಸರೆಯಲ್ಲಿ 5 ವಿಕೆಟ್‌ಗೆ 165 ರನ್ ಪೇರಿಸಿತು. ಪ್ರತಿಯಾಗಿ ಏಡನ್ ಮಾರ್ಕ್ರಮ್ (50 ರನ್, 36 ಎಸೆತ, 4 ಬೌಂಡರಿ, 1 ಸಿಕ್ಸರ್)ಅರ್ಧಶತಕದ ನೆರವಿನಿಂದ 18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 166 ರನ್‌ಗಳಿಸಿ ಸುಲಭ ಗೆಲುವು ದಾಖಲಿಸಿತು.
ಮಾರ್ಕ್ರಮ್ ಅರ್ಧಶತಕದಾಟ: ಅಭಿಷೇಕ್ ಶರ್ಮ (37) ಸನ್‌ರೈಸರ್ಸ್‌ಗೆ ಬಿರುಸಿನ ಆರಂಭ ಒದಗಿಸಿದರು. ಮುಕೇಶ್ ಚೌಧರಿ ಎಸೆದ ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಅಭಿಷೇಕ್ 3 ಸಿಕ್ಸರ್, 2 ಬೌಂಡರಿ ಸಹಿತ 27 ರನ್ ಕಸಿದರು. ಇಂಪ್ಯಾಕ್ಟ್ ಆಟಗಾರ ಟ್ರಾವಿಸ್ ಹೆಡ್ (31) ಹಾಗೂ ಅಭಿಷೇಕ್ ಮೊದಲ ವಿಕೆಟ್‌ಗೆ 17 ಎಸೆತದಲ್ಲಿ 46 ರನ್‌ಗಳಿಸಿದರು. ನಂತರ ಟ್ರಾವಿಸ್ ಹೆಡ್ ಹಾಗೂ ಏಡನ್ ಮಾರ್ಕಮ್ ಜೋಡಿ ಬಲ ತುಂಬಿತು. 2ನೇ ವಿಕೆಟ್‌ಗೆ 42 ಎಸೆತದಲ್ಲಿ 60 ರನ್‌ಗಳಿಸಿ ಚೇಸಿಂಗ್ ಸುಲಭಗೊಳಿಸಿದರು. 35 ಎಸೆತದಲ್ಲಿ ಅರ್ಧಶತಕ ಸಿಡಿಸಿದ ಬೆನ್ನಲ್ಲೆ ಮಾರ್ಕ್ರಮ್ ಔಟಾದರು. ಶಾಬಾಜ್ ಅಹ್ಮದ್ (18) ಉಪಯುಕ್ತ ಕೊಡುಗೆ ನೀಡಿದರು. ಹೆನ್ರಿಕ್ ಕ್ಲಾಸೆನ್ (10*) ಹಾಗೂ ನಿತೀಶ್ ಕುಮಾರ್ ರೆಡ್ಡಿ (14*) ಜೋಡಿ 11 ಎಸೆತ ಬಾಕಿಯಿರುವಂತೆ ದಡ ಸೇರಿಸಿದರು.