ಸನ್​ರೈಸರ್ಸ್​ಗೆ ವಾರ್ನರ್ ನಾಯಕ

Warner
Published on

ನವದೆಹಲಿ: ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್ ಮುಂಬರುವ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.

‘ನಾಯಕತ್ವ ವಹಿಸಿರುವುದರಿಂದ ನಾನು ಥ್ರಿಲ್ ಆಗಿದ್ದೇನೆ. ಮತ್ತೊಮ್ಮೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿದ್ದಕ್ಕೆ ಕೃತಜ್ಞನಾಗಿದ್ದೇನೆ. ಮತ್ತೊಮ್ಮೆ ಟ್ರೋಫಿ ಎತ್ತಲು ನನ್ನಿಂದ ಸಾಧ್ಯವಾದ ಪ್ರಯತ್ನ ನಡೆಸಲಿದ್ದೇನೆ’ ಎಂದು 33 ವರ್ಷದ ವಾರ್ನರ್, ಸನ್​ರೈಸರ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ವಾರ್ನರ್ ಈ ಹಿಂದೆ 2016ರಲ್ಲಿ ಸನ್​ರೈಸರ್ಸ್ ತಂಡದ ನಾಯಕರಾಗಿ ಐಪಿಎಲ್ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಬಳಿಕ 2018ರಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ 1 ವರ್ಷ ನಿಷೇಧಕ್ಕೊಳಗಾದಾಗ ನಾಯಕತ್ವ ತ್ಯಜಿಸಿದ್ದರು. ಕಳೆದ ವರ್ಷ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಿದ್ದರು.

2014ರಿಂದ ಸನ್​ರೈಸರ್ಸ್ ತಂಡದಲ್ಲಿರುವ ವಾರ್ನರ್, ಕಳೆದ ಆವೃತ್ತಿಯಲ್ಲಿ 692 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಅವರು ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿರುವ ವಿದೇಶಿ ಬ್ಯಾಟ್ಸ್​ಮನ್ ಕೂಡ ಆಗಿದ್ದಾರೆ. ಮಾರ್ಚ್ 29ರಂದು ಆರಂಭವಾಗಲಿರುವ ಐಪಿಎಲ್​ನಲ್ಲಿ ಸನ್​ರೈಸರ್ಸ್ ತಂಡ ಏಪ್ರಿಲ್ 1ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಅಭಿಯಾನ ಆರಂಭಿಸಲಿದೆ.

ವಾರ್ನರ್ ಈ ಹಿಂದೆ 45 ಪಂದ್ಯಗಳಲ್ಲಿ ಸನ್​ರೈಸರ್ಸ್ ತಂಡವನ್ನು ಮುನ್ನಡೆಸಿದ್ದು, 26 ಜಯ ಮತ್ತು 19 ಸೋಲು ಕಂಡಿದ್ದಾರೆ. -ಪಿಟಿಐ/ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net