ಇಂದು ಡೆಲ್ಲಿ ಕ್ಯಾಪಿಟಲ್ಸ್-ಸನ್‌ರೈಸರ್ಸ್‌ ಹೈದರಾಬಾದ್ ಮುಖಾಮುಖಿ

srh and punjab kings for web
Published on

ದುಬೈ: ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಆಗಮನದಿಂದಾಗಿ ಬ್ಯಾಟಿಂಗ್ ವಿಭಾಗದಲ್ಲಿ ಬಲ ವೃದ್ಧಿಸಿಕೊಂಡಿರುವ ಹಾಲಿ ರನ್ನರ್‌ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-14ರ ಎರಡನೇ ಚರಣದ ತನ್ನ ಮೊದಲ ಹಣಾಹಣಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಬುಧವಾರ ಎದುರಿಸಲಿದೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೇರ್‌ಸ್ಟೋ ಕಡೇ ಕ್ಷಣದಲ್ಲಿ ಹಿಂದೆ ಸರಿದ ಹಿನ್ನೆಲೆಯಲ್ಲಿ ಹಿನ್ನಡೆ ಅನುಭವಿಸಿರುವ ಸನ್‌ರೈಸರ್ಸ್‌ ತಂಡ, ಪ್ಲೇಆಫ್ ಹಂತಕ್ಕೇರಲು ಮಾಡು ಇಲ್ಲವೆ ಮಡಿ ಹೋರಾಟ ನಡೆಸಬೇಕಾದ ಒತ್ತಡದಲ್ಲಿದೆ. ಮೊದಲ ಭಾಗದ ಅಂತ್ಯಕ್ಕೆ ಅಂಕಪಟ್ಟಿಯಲ್ಲಿ ನಂ. 1 ಪಟ್ಟದಲ್ಲಿದ್ದ ಡೆಲ್ಲಿ ತಂಡ ಸದ್ಯ 2ನೇ ಸ್ಥಾನದಲ್ಲಿದ್ದು, ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ. ದುಬೈ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ವೇಗಿಗಳ ದರ್ಬಾರ್ ನಡೆಯುವ ಸಾಧ್ಯತೆಗಳಿವೆ.

*ಸನ್‌ರೈಸರ್ಸ್‌ಗೆ ಗೆದ್ದರಷ್ಟೇ ಉಳಿಗಾಲ

ಲೀಗ್ ಹಂತದಲ್ಲಿ ಇದುವರೆಗೂ ಆಡಿರುವ 7 ಪಂದ್ಯಗಳಲ್ಲಿ 6 ಸೋಲು, ಏಕೈಕ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಕಡೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ತಂಡ, ಮುಂದಿನ 7 ಪಂದ್ಯಗಳಲ್ಲೂ ಮಾಡು ಇಲ್ಲವೇ ಮಡಿಯಂತೆ ಹೋರಾಡಬೇಕಿದೆ. ಮೊದಲ ಚರಣದ ಪಂದ್ಯಗಳಲ್ಲಿ ನೀರಸ ನಿರ್ವಹಣೆಯಿಂದಾಗಿ ನಾಯಕತ್ವವನ್ನೇ ತ್ಯಜಿಸಿದ್ದ ಡೇವಿಡ್ ವಾರ್ನರ್ (193ರನ್) ಆರಂಭಿಕ ಹಂತದಲ್ಲಿ ಬ್ಯಾಟಿಂಗ್ ಜವಾಬ್ದಾರಿ ಹೊರಬೇಕಿದೆ. ನಾಯಕ ಕೇನ್ ವಿಲಿಯಮ್ಸನ್, ಕರ್ನಾಟಕದ ಮನೀಷ್ ಪಾಂಡೆ, ಕೇದಾರ್ ಜಾಧವ್, ಅಬ್ದುಲ್ ಸಮದ್, ವಿಜಯ್ ಶಂಕರ್ ಒಳಗೊಂಡ ಬ್ಯಾಟಿಂಗ್ ಪಡೆ ಸುಧಾರಿತ ನಿರ್ವಹಣೆ ತೋರಬೇಕಿದೆ. ವೇಗಿಗಳಾದ ಭುವನೇಶ್ವರ್ ಕುಮಾರ್, ಟಿ.ನಟರಾಜನ್, ರಶೀದ್ ಖಾನ್ ಮೋಡಿ ಮಾಡಬೇಕಿದೆ.

* ಡೆಲ್ಲಿಗೆ ಶ್ರೇಯಸ್ ಬಲ

ಬಲ ಭುಜದ ಶಸಚಿಕಿತ್ಸೆಗೆ ಒಳಗಾಗಿ ಮೊದಲ ಚರಣದ ಪಂದ್ಯಗಳಿಗೆ ಅಲಭ್ಯರಾಗಿದ್ದ ಶ್ರೇಯಸ್ ಅಯ್ಯರ್ ಇದೀಗ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡು, ತಂಡಕೂಡಿಕೊಂಡಿದ್ದಾರೆ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಶಿಖರ್ ಧವನ್, ಯುವ ಬ್ಯಾಟ್ಸ್‌ಮನ್ ಪೃಥ್ವಿ ಷಾ ಇನಿಂಗ್ಸ್ ಆರಂಭಿಸಲಿದ್ದಾರೆ. ಇವರಿಗೆ ರಿಷಭ್ ಪಂತ್, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೋಯಿನಿಸ್, ಶಿಮ್ರೋನ್ ಹೆಟ್ಮೆಯೆರ್ ಒಳಗೊಂಡ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಮೊದಲ ಚರಣದಲ್ಲಿ ಮಿಂಚಿದ್ದ ಅವೇಶ್ ಖಾನ್ (14 ವಿಕೆಟ್), ಕಗಿಸೊ ರಬಾಡ (8) ಮುಂಚೂಣಿಯಲ್ಲಿದ್ದರೆ, ಅನುಭವಿಗಳಾದ ಆರ್.ಅಶ್ವಿನ್, ಅಮಿತ್ ಮಿಶ್ರಾ, ಅಕ್ಷರ್ ಪಟೇಲ್, ಲಲಿತ್ ಯಾಧವ್, ಕರ್ನಾಟಕದ ಪ್ರವೀಣ್ ದುಬೆ ನಡುವಿನ ಪೈಪೋಟಿ ಏರ್ಪಟ್ಟಿದೆ. ಮೊದಲ ಚರಣದ ಅಂತ್ಯಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸದ್ಯ ಎರಡನೇ ಸ್ಥಾನದಲ್ಲಿದ್ದು, ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ.

ಸಂಭಾವ್ಯ ತಂಡಗಳು:

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಷಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ವಿಕೀ), ಮಾರ್ಕಸ್ ಸ್ಟೋಯಿನಿಸ್, ಶಿಮ್ರೋನ್ ಹೆಟ್ಮೆಯೆರ್, ಅಕ್ಷರ್ ಪಟೇಲ್, ಆರ್.ಅಶ್ವಿನ್, ಕಗಿಸೊ ರಬಾಡ, ಅನ್ರಿಚ್ ನೋಕಿಯಾ, ಆವೇಶ್ ಖಾನ್.

ಸನ್‌ರೈಸರ್ಸ್‌ ಹೈದಾರಾಬಾದ್: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹ (ವಿಕೀ), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್ (ನಾಯಕ), ಕೇದಾರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್/ಮೊಹಮದ್ ನಬಿ, ರಶೀದ್ ಖಾನ್, ಭುವನೇಶ್ವರ್, ಟಿ.ನಟರಾಜನ್, ಸಂದೀಪ್ ಶರ್ಮ.

ಮುಖಾಮುಖಿ: 19

ಡೆಲ್ಲಿ ಕ್ಯಾಪಿಟಲ್ಸ್: 8

ಸನ್‌ರೈಸರ್ಸ್‌: 11

ಮೊದಲ ಮುಖಾಮುಖಿ: ಸೂಪರ್ ಓವರ್‌ನಲ್ಲಿ ಡೆಲ್ಲಿಗೆ ಜಯ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

1: ಆರ್.ಅಶ್ವಿನ್ ಒಂದು ವಿಕೆಟ್ ಪಡೆದರೆ ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್ ಕಬಳಿಸಿದ ಭಾರತದ 3ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಪೀಯುಷ್ ಚಾವ್ಲಾ ಹಾಗೂ ಅಮಿತ್ ಮಿಶ್ರಾ ತಲಾ 262 ವಿಕೆಟ್ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net