ಜೇಸನ್ ಹೋಲ್ಡರ್ ಹೋರಾಟ ವ್ಯರ್ಥ; ಪಂಜಾಬ್ ಎದುರು ಸೋತು ಲೀಗ್‌ನಿಂದ ಹೊರಬಿದ್ದ ಸನ್‌ರೈಸರ್ಸ್‌

sunrisers and punjab for we
Published on

ಶಾರ್ಜಾ: ಜೇಸನ್ ಹೋಲ್ಡರ್ (19ಕ್ಕೆ 3 ವಿಕೆಟ್, 47*ರನ್, 29 ಎಸೆತ, 5 ಸಿಕ್ಸರ್) ಆಲ್ರೌಂಡ್ ನಿರ್ವಹಣೆ ನಡುವೆಯೂ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-14ರ ಎರಡನೇ ಭಾಗದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ 5 ರನ್‌ಗಳಿಂದ ಶರಣಾಯಿತು. ಕಡೇ ಓವರ್‌ನಲ್ಲಿ ಸನ್‌ರೈಸರ್ಸ್‌ ಜಯ ದಾಖಲಿಸಲು 17 ರನ್ ಅವಶ್ಯಕತೆಯಿದ್ದಾಗ ಹೋಲ್ಡರ್, 11 ರನ್ ಕಸಿಯಲಷ್ಟೇ ಶಕ್ತರಾದರು. ಇದರಿಂದ 8ನೇ ಸೋಲನುಭವಿಸಿದ ಕೇನ್ ವಿಲಿಯಮ್ಸನ್ ಬಳಗ ಲೀಗ್‌ನಿಂದ ಅಧಿಕೃತವಾಗಿ ಹೊರಬಿದ್ದಿತು. ಮತ್ತೊಂದೆಡೆ, ರೋಚಕ ಜಯ ದಾಖಲಿಸಿದ ಕನ್ನಡಿಗ ಕೆಎಲ್ ರಾಹುಲ್ ಬಳಗ ಪ್ಲೇಆಫ್ ರೇಸ್‌ನಲ್ಲಿ ಉಳಿಯಿತು.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 7 ವಿಕೆಟ್‌ಗೆ 125 ರನ್‌ಗಳಿಸಿತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಮೊಹಮದ್ ಶಮಿ (14ಕ್ಕೆ 2) ಹಾಗೂ ರವಿ ಬಿಷ್ಣೋಯಿ (24ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿ 7 ವಿಕೆಟ್‌ಗೆ 120 ರನ್ ಪೇರಿಸಲಷ್ಟೇ ಶಕ್ತವಾಯಿತು.

ಪಂಜಾಬ್ ಕಿಂಗ್ಸ್: 7 ವಿಕೆಟ್‌ಗೆ 125 (ಕೆಎಲ್ ರಾಹುಲ್ 21, ಏಡನ್ ಮಾರ್ಕ್ರಮ್ 27, ಹರ್‌ಪ್ರೀತ್ ಬ್ರಾರ್ 18*, 19ಕ್ಕೆ 3, ಸಂದೀಪ್ ಶರ್ಮ 20ಕ್ಕೆ 1, ಭುವನೇಶ್ವರ್ ಕುಮಾರ್ 34ಕ್ಕೆ 1, ರಶೀದ್ ಖಾನ್ 17ಕ್ಕೆ 1, ಅಬ್ದುಲ್ ಸಮದ್ 9ಕ್ಕೆ 1), ಸನ್‌ರೈಸರ್ಸ್‌ ಹೈದರಾಬಾದ್: 7 ವಿಕೆಟ್‌ಗೆ 120 (ಜೇಸನ್ ಹೋಲ್ಡರ್ 47*, ವೃದ್ಧಿಮಾನ್ ಸಾಹ 31, ಮನೀಷ್ ಪಾಂಡೆ 13, ಕೇದಾರ್ ಜಾಧವ್ 12, ರವಿ ಬಿಷ್ಣೋಯಿ 24ಕ್ಕೆ 3, ಮೊಹಮದ್ ಶಮಿ 14ಕ್ಕೆ 2, ಅರ್ಷದೀಪ್ ಸಿಂಗ್ 22ಕ್ಕೆ 1)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net