

ಚೆನ್ನೈ: ಹರ್ಷಲ್ ಪಟೇಲ್ (28ಕ್ಕೆ 4) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ 5 ವಿಕೆಟ್ಗಳಿಂದ ಗೆದ್ದು ಪ್ಲೇಆಫ್ ಆಸೆ ಜೀವಂತ ಉಳಿಸಿಕೊಂಡಿದೆ. ಪ್ಯಾಟ್ ಕಮ್ಮಿನ್ಸ್ ಪಡೆಗೆ ಕಳೆದ 8 ಪಂದ್ಯಗಳಲ್ಲಿ ಇದು ಕೇವಲ 2ನೇ ಗೆಲುವಾಗಿದೆ. ಟೂರ್ನಿಯಲ್ಲಿ 7ನೇ ಸೋಲು ಅನುಭವಿಸಿದ ಎಂಎಸ್ ಧೋನಿ ಪಡೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲೇ ಉಳಿದು, ಪ್ಲೇಆಫ್ ಆಸೆಯನ್ನು ಬಹುತೇಕ ಕೈಚೆಲ್ಲಿದೆ. ಸನ್ರೈಸರ್ಸ್ಗೆ ಇದು ಚೆಪಾಕ್ನಲ್ಲಿ ಮೊಟ್ಟಮೊದಲ ಗೆಲುವಿನ ಸಂಭ್ರಮವಾಗಿದೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಸಿಎಸ್ಕೆ, ಡಿವಾಲ್ಡ್ ಬ್ರೆವಿಸ್ 42 ರನ್ (25 ಎಸೆತ, 1 ಬೌಂಡರಿ, 4 ಸಿಕ್ಸರ್) ದಿಟ್ಟ ಆಟದ ನಡುವೆ ಹರ್ಷಲ್ ಪಟೇಲ್ ಮತ್ತು ಇನ್ನಿಬ್ಬರುವ ವೇಗಿಗಳಾದ ಪ್ಯಾಟ್ ಕಮ್ಮಿನ್ಸ್ (21ಕ್ಕೆ 2) ಮತ್ತು ಜೈದೇವ್ ಉನಾದ್ಕತ್ (21ಕ್ಕೆ 2) ದಾಳಿಗೆ ಕುಸಿದು 19.5 ಓವರ್ಗಳಲ್ಲಿ 154 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಸನ್ರೈಸರ್ಸ್ ಇಶಾನ್ ಕಿಶನ್ (44 ರನ್, 34 ಎಸೆತ, 5 ಬೌಂಡರಿ, 1 ಸಿಕ್ಸರ್) ಮತ್ತು ಹೋರಾಟದಿಂದ 18.4 ಓವರ್ಗಳಲ್ಲಿ 5 ವಿಕೆಟ್ಗೆ 155 ರನ್ ಗಳಿಸಿ ಗೆಲುವು ಸಾಧಿಸಿತು.
ಸನ್ರೈಸರ್ಸ್ ಯಶಸ್ವಿ ಚೇಸಿಂಗ್: ಅಭಿಷೇಕ್ ಶರ್ಮ (0) ಮತ್ತು ಟ್ರಾವಿಸ್ ಹೆಡ್ (19) ಸನ್ರೈಸರ್ಸ್ಗೆ ಈ ಸಲವೂ ಉತ್ತಮ ಆರಂಭ ಒದಗಿಸಲು ವಿಲರಾದರು. ಇದರಿಂದ ಸನ್ರೈಸರ್ಸ್ ಪವರ್ಪ್ಲೇನಲ್ಲಿ 2 ವಿಕೆಟ್ಗೆ 37 ರನ್ ಗಳಿಸಲಷ್ಟೇ ಶಕ್ತವಾಯಿತು. ನಂತರ ಹೆನ್ರಿಕ್ ಕ್ಲಾಸೆನ್ (7) ಕೂಡ ನಿರಾಸೆ ಮೂಡಿಸಿದರೆ, ಇಶಾನ್ ಕಿಶನ್ ಚೇಸಿಂಗ್ಗೆ ಬಲ ತುಂಬಿದರು. ಕೊನೆಯಲ್ಲಿ ಕಮಿಂದು ಮೆಂಡಿಸ್ (32*ರನ್, 22 ಎಸೆತ, 3 ಬೌಂಡರಿ) ಮತ್ತು ನಿತೀಶ್ ಕುಮಾರ್ ರೆಡ್ಡಿ (19*) ಮುರಿಯದ 6ನೇ ವಿಕೆಟ್ಗೆ 31 ಎಸೆತಗಳಲ್ಲಿ 49 ರನ್ ಸೇರಿಸುವ ಮೂಲಕ ಇನ್ನೂ 8 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು. ನೂರ್ ಅಹ್ಮದ್ (42ಕ್ಕೆ 2) ಶ್ರಮ ವ್ಯರ್ಥಗೊಂಡಿತು.