ಗೆಲುವಿಗಾಗಿ ಕೆಕೆಆರ್ - ಸನ್‌ರೈಸರ್ಸ್‌ ಹೋರಾಟ

sunrisers and kkr for web
Published on

ಅಬುಧಾಬಿ: ಆರಂಭಿಕ ಪಂದ್ಯಗಳಲ್ಲಿ ಸೋಲನುಭವಿಸಿರುವ ಮಾಜಿ ಚಾಂಪಿಯನ್‌ಗಳಾದ ಕೋಲ್ಕತ ನೈಟ್‌ರೈಡರ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಐಪಿಎಲ್-13ರ ಪಂದ್ಯದಲ್ಲಿ ಶನಿವಾರ ಎದುರಾಗಲಿವೆ. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಸೋತವರ ಕದನದಲ್ಲಿ ಮೊದಲ ಗೆಲುವಿಗಾಗಿ ಉಭಯ ತಂಡಗಳಿಂದ ನಿಕಟ ಪೈಪೋಟಿ ನಿರೀಕ್ಷಿಸಲಾಗಿದೆ.

ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡ ಮುಂಬೈ ಇಂಡಿಯನ್ಸ್ ಎದುರು ಹೀನಾಯ ಸೋಲು ಕಂಡಿದ್ದರೆ, ಸನ್‌ರೈಸರ್ ತಂಡ 10 ರನ್‌ಗಳಿಂದ ಆರ್‌ಸಿಬಿಗೆ ಶರಣಾಗಿತ್ತು. ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್‌ಸ್ಟೋ ಅವರಂಥ ವಿಶ್ವ ಶ್ರೇಷ್ಠ ಆರಂಭಿಕರನ್ನು ಹೊಂದಿರುವ ಸನ್‌ರೈಸರ್ಸ್‌ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ನಂಬಿಕಸ್ತ ಬ್ಯಾಟ್ಸ್‌ಮನ್‌ಗಳಿಲ್ಲ. ಮನೀಷ್ ಪಾಂಡೆಗೆ ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಜತೆಗೆ ಮಿಚೆಲ್ ಮಾರ್ಷ್ ಆರ್‌ಸಿಬಿ ವಿರುದ್ಧ ಗಾಯಕ್ಕೆ ತುತ್ತಾಗಿ ಇದೀಗ ಲೀಗ್‌ನಿಂದಲೇ ಹೊರಬಿದ್ದಿದ್ದಾರೆ. ಇದು ಕೂಡ ಸನ್‌ರೈಸರ್ಸ್‌ ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ. ಬೌಲರ್‌ಗಳು ಹಾಗೂ ಆರಂಭಿಕರ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಸನ್‌ರೈಸರ್ಸ್‌ ಬಲಿಷ್ಠವಾಗಬೇಕಿದೆ. ಮಾರ್ಷ್ ಬದಲಿಗೆ ಮೊಹಮದ್ ನಬಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಮತ್ತೊಂದೆಡೆ, ಮೊದಲ ಪಂದ್ಯದಲ್ಲೇ ಐಪಿಎಲ್‌ನ ದುಬಾರಿ ಆಟಗಾರ ಪ್ಯಾಟ್ ಕಮ್ಮಿನ್ಸ್ ದುಬಾರಿಯಾಗುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಸರ್ವಾಂಗೀಣ ವೈಫಲ್ಯದ ಫಲವಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೆಕೆಆರ್ ಹೀನಾಯವಾಗಿ ಶರಣಾಗಿತ್ತು. ಕನ್ನಡಿಗ ಪ್ರಸಿದ್ಧ್ ಕೃಷ್ಣ ಹನ್ನೊಂದರ ಬಳಗದಲ್ಲಿ ಆಡುವ ಸಾಧ್ಯತೆಗಳಿವೆ. ಸಂದೀಪ್ ವಾರಿಯರ್ ಬದಲಿಗೆ ಪ್ರಸಿದ್ಧ್ ಆಯ್ಕೆ ಸೂಕ್ತವೂ ಹೌದು. ಮೊದಲ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದ ಪಾಠ ಕಲಿತಿರುವ ದಿನೇಶ್ ಕಾರ್ತಿಕ್ ಬಳಗ ಪುಟಿದೇಳುವ ವಿಶ್ವಾಸದಲ್ಲಿದೆ.

ಟೀಮ್ ನ್ಯೂಸ್:

ಕೆಕೆಆರ್: ಮುಂಬೈ ಇಂಡಿಯನ್ಸ್ ಎದುರು ದುಬಾರಿಯಾಗಿದ್ದ ಲೀಗ್‌ನ ದುಬಾರಿ ಮೌಲ್ಯದ ಬೌಲರ್ ಪ್ಯಾಟ್ ಕಮ್ಮಿನ್ಸ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಕೇರಳದ ವೇಗಿ ಸಂದೀಪ್ ವಾರಿಯರ್ ಬದಲಿಗೆ ಕರ್ನಾಟಕದ ಪ್ರಸಿದ್ಧ್ ಕೃಷ್ಣ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತರೂ ಒಂದೇ ಪಂದ್ಯದಲ್ಲಿ ಆಟಗಾರರ ನಿರ್ವಹಣೆ ಅಳೆಯುವಂತಿಲ್ಲ. ಹೀಗಾಗಿ ಹೆಚ್ಚಿನ ಬದಲಾವಣೆ ಕಡಿಮೆಯೇ ಎನ್ನಬಹುದು.

ಸಂಭಾವ್ಯ ತಂಡ: ಶುಭಮಾನ್ ಗಿಲ್, ಸುನೀಲ್ ನಾರಾಯಣ್, ದಿನೇಶ್ ಕಾರ್ತಿಕ್ (ನಾಯಕ, ವಿಕೀ), ನಿತೀಶ್ ರಾಣಾ, ಇವೊಯಿನ್ ಮಾರ್ಗನ್, ಆಂಡ್ರೆ ರಸೆಲ್, ನಿತೀನ್ ನಾಯ್ಕ, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಕುಲದೀಪ್ ಯಾದವ್, ಸಂದೀಪ್ ವಾರಿಯರ್/ಪ್ರಸಿದ್ಧ್ ಕೃಷ್ಣ.

ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು 49 ರನ್ ಸೋಲು.

ಸನ್‌ರೈಸರ್ಸ್‌: ಆರ್‌ಸಿಬಿ ವಿರುದ್ಧ ಪಂದ್ಯದ ವೇಳೆ ಗಾಯಗೊಂಡ ಮಿಚೆಲ್ ಮಾರ್ಷ್ ಲೀಗ್‌ನಿಂದಲೇ ಹೊರಬಿದ್ದಿದ್ದು, ಅವರ ಸ್ಥಾನವನ್ನು ಅಫ್ಘಾನಿಸ್ತಾನದ ಆಲ್ರೌಂಡರ್ ಮೊಹಮದ್ ನಬಿ ತುಂಬುವ ನಿರೀಕ್ಷೆ ಇದೆ. ಜತೆಗೆ ಕೇನ್ ವಿಲಿಯಮ್ಸನ್ ಕೂಡ ಚೇತರಿಕೆ ಕಂಡಿದ್ದು, ಆಯ್ಕೆಗೆ ಲಭ್ಯವಾಗಿದ್ದಾರೆ. ನಬಿಗೆ ಮಣೆ ಹಾಕಿದರೆ ವಿಲಿಯಮ್ಸನ್ ಹೊರಗುಳಿಯುವುದು ಅನಿವಾರ್ಯ. ಆರಂಭಿಕ ಜಾನಿ ಬೇರ್‌ಸ್ಟೋ ಉತ್ತಮ ಫಾರ್ಮ್‌ನಲ್ಲಿದ್ದು, ಅವರ ಬದಲಾವಣೆ ಕಷ್ಟಸಾಧ್ಯ. ಮೊದಲ ಪಂದ್ಯದಲ್ಲಿ ದುಬಾರಿ ಎನಿಸಿದ್ದ ಸಂದೀಪ್ ಶರ್ಮ ಬದಲಿಗೆ ಖಲೀಲ್ ಅಹ್ಮದ್ ಅವರಿಗೆ ಮಣೆ ಹಾಕಬಹುದು. ಯುವ ಆಟಗಾರರಾದ ಅಭಿಷೇಕ್ ಶರ್ಮ, ಪ್ರಿಯಂ ಗಾರ್ಗ್, ಟಿ.ನಟರಾಜನ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಸಂಭಾವ್ಯ ತಂಡ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೀ), ಮನೀಷ್ ಪಾಂಡೆ, ಪ್ರಿಯಂ ಗಾರ್ಗ್, ವಿಜಯ್ ಶಂಕರ್, ಅಭಿಷೇಕ್ ಶರ್ಮ, ಮೊಹಮದ್ ನಬಿ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮ/ಖಲೀಲ್ ಅಹ್ಮದ್, ಟಿ.ನಟರಾಜನ್.

ಕಳೆದ ಪಂದ್ಯ: ಆರ್‌ಸಿಬಿ ವಿರುದ್ಧ 10 ರನ್ ಸೋಲು.

ಪಂದ್ಯ ಆರಂಭ: ರಾತ್ರಿ: 7.30ಕ್ಕೆ

ನೇರ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 17, ಕೆಕೆಆರ್: 10, ಸನ್‌ರೈಸರ್ಸ್‌: 7.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net