

ನವದೆಹಲಿ: ಭಾರತದ ಮಹಿಳಾ ಹಾಕಿ ತಂಡದ ಡಿಫೆಂಡರ್ ಸುನೀತಾ ಲಾಕ್ರ ಮೊಣಕಾಲು ಗಾಯದಿಂದಾಗಿ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ್ದಾರೆ. 2018ರ ಏಷ್ಯನ್ ಗೇಮ್್ಸ ರಜತ ಪದಕ ವಿಜೇತ ತಂಡದ ಸದಸ್ಯೆಯಾಗಿದ್ದ 28 ವರ್ಷದ ಸುನೀತಾ, ಈ ವರ್ಷ ಟೋಕಿಯೊ ಒಲಿಂಪಿಕ್ಸ್ನಲ್ಲಿ ಆಡುವ ಕನಸು ಹೊಂದಿದ್ದರೂ, ಗಾಯದ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿರುವುದು ಅವರ ಆಸೆಗೆ ತಣ್ಣೀರೆರಚಿದೆ.
‘ನನಗಿದು ಅತ್ಯಂತ ಭಾವನಾತ್ಮಕ ದಿನ. ಅಂತಾರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಹೊಂದಲು ನಾನು ನಿರ್ಧರಿಸಿದ್ದೇನೆ’ ಎಂದು ಒಡಿಶಾದ ರೈತನ ಮಗಳಾಗಿರುವ ಸುನೀತಾ ಹಾಕಿ ಇಂಡಿಯಾ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2018ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ 2ನೇ ಸ್ಥಾನ ಪಡೆದ ಭಾರತ ತಂಡದ ನಾಯಕಿಯೂ ಆಗಿದ್ದರು. 2014ರಲ್ಲಿ ಏಷ್ಯನ್ ಗೇಮ್್ಸ ಕಂಚು ಗೆದ್ದ ತಂಡದಲ್ಲೂ ಇದ್ದ ಅವರು ಭಾರತ ಪರ 139 ಪಂದ್ಯಗಳನ್ನು ಆಡಿದ್ದಾರೆ. ‘2016ರ ರಿಯೋ ಒಲಿಂಪಿಕ್ಸ್ ನಲ್ಲಿ ಆಡಿರುವುದು ನನ್ನ ಅದೃಷ್ಟ. ಅದು ಭಾರತದ ಮಹಿಳಾ ಹಾಕಿ ತಂಡ 3 ದಶಕಗಳ ಬಳಿಕ ಆಡಿದ ಒಲಿಂಪಿಕ್ಸ್ ಆಗಿತ್ತು. ಟೋಕಿಯೊ ಒಲಿಂಪಿಕ್ಸ್ ನಲ್ಲೂ ಆಡುವುದು ನನ್ನ ಆಸೆಯಾಗಿದ್ದರೂ, ಮೊಣಕಾಲು ಗಾಯ ಇದಕ್ಕೆ ಅಡ್ಡಿಯಾಗಿದೆ. ಮುಂಬರುವ ದಿನಗಳಲ್ಲಿ ನಾನು ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅಗತ್ಯ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಮರಳಿ ಫಿಟ್ ಆಗಲು ಎಷ್ಟು ದಿನಗಳು ಬೇಕಾಗಬಹುದು ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ. ಗಾಯದಿಂದ ಗುಣಮುಖಳಾದ ಬಳಿಕ ದೇಶೀಯ ಹಾಕಿಯಲ್ಲಿ ಮುಂದುವರಿಯುವೆ ಮತ್ತು ನನ್ನ ನಾಲ್ಕೋ ಸಂಸ್ಥೆ ತಂಡದ ಪರ ಆಡುವೆ’ ಎಂದು ಸುನೀತಾ ತಿಳಿಸಿದ್ದಾರೆ. -ಪಿಟಿಐ