

ನವದೆಹಲಿ: ದೇಶದಲ್ಲಿ ಚಿಕ್ಕ ವಯಸ್ಸಿನವರೂ ಹಠಾತ್ ಸಾವಿಗೆ ಒಳಗಾಗುತ್ತಿರುವ ಪ್ರಕರಣಗಳು ಸಾಕಷ್ಟು ಸಂಭವಿಸುತ್ತಿರುವುದು ಚರ್ಚೆಯಲ್ಲಿ ಇರುವಾಗಲೇ ಮತ್ತೊಂದು ಸಾವಿನ ಸುದ್ದಿ ಸದ್ದು ಮಾಡಲಾರಂಭಿಸಿದೆ. ಅದರಲ್ಲೂ 18ರ ವಯಸ್ಸಿನ ಈ ಫೈಟರ್ ಸಾವಿಗೆ ಕಾರಣ ಕೂಡ ನಿಗೂಢವಾಗಿರುವುದು ಕುತೂಹಲ ಕೆರಳಿಸಿದೆ.
ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (ಎಂಎಂಎ) ಸ್ಟಾರ್ ವಿಕ್ಟೋರಿಯಾ ಲೀ ತನ್ನ 18ನೇ ವಯಸ್ಸಿನಲ್ಲಿ ಸಾವಿಗೀಡಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವರ್ಷದ ಡಿ. 26ರಂದು ಆಕೆ ಸಾವಿಗೀಡಾಗಿದ್ದು, ಜ. 7ರಂದು ಈ ಸುದ್ದಿ ಬಹಿರಂಗಗೊಂಡಿದೆ. ವಿಕ್ಟೋರಿಯಾ ಲೀ ಅವರ ಸಹೋದರಿ ಆ್ಯಂಜೆಲಾ ಲೀ ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.
'ದ ಪ್ರಾಡಿಜಿ' ಎಂದೇ ಖ್ಯಾತಿ ಪಡೆದಿರುವ ನನ್ನ ತಂಗಿ ವಿಕ್ಟೋರಿಯಾ ಲೀ 2022ರ ಡಿ. 26ರಂದು ಸಾವಿಗೀಡಾದಳು ಎಂದು ಆ್ಯಂಜೆಲಾ ಲೀ ಹೇಳಿಕೊಂಡಿದ್ದು, ಸಾಯಲು ಕಾರಣ ಏನು ಎಂಬುದನ್ನು ಆಕೆ ಬಹಿರಂಗಪಡಿಸಿಲ್ಲ. ಯಾವ ಕುಟುಂಬವೂ ಅನುಭವಿಸಬಾರದಂಥ ಕಷ್ಟವನ್ನು ನಾವು ಅನುಭವಿಸಿದ್ದೇವೆ, ವಿಕ್ಟೋರಿಯಾ ಇನ್ನಿಲ್ಲ ಎಂದು ಹೇಳಿಕೊಳ್ಳುವುದು ಕೂಡ ನಮ್ಮಿಂದ ಅಸಾಧ್ಯ ಎಂದು ಆಕೆ ತನ್ನ ನೋವನ್ನು ತೋಡಿಕೊಂಡಿದ್ದಾಳೆ. -ಏಜೆನ್ಸೀಸ್