ಐಪಿಎಲ್​-18: ಅಗ್ರಸ್ಥಾನಕ್ಕೆ ಆರ್‌ಸಿಬಿ-ಡೆಲ್ಲಿ ಫೈಟ್: ಸೇಡಿನ ತವಕದಲ್ಲಿ ರಜತ್ ಪಡೆ

New Project
Published on

ನವದೆಹಲಿ: ತವರಿನಲ್ಲಿ ಮೊದಲ ಗೆಲುವು ದಾಖಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಭಾನುವಾರ ರಾತ್ರಿ ಮರುಮುಖಾಮುಖಿ ಆಗಲಿವೆ. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ವಿಜೇತರು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ. ಹಾಲಿ ಸೀಸನ್‌ನ ಮೊದಲ ಕಾದಾಟದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಮೋಘ ಬ್ಯಾಟಿಂಗ್ ಎದುರು ರಜತ್ ಪಾಟೀದಾರ್ ಪಡೆ ನಿರಾಸೆ ಕಂಡಿತ್ತು. ಈಗ ಸೋಲಿಗೆ ಮುಯ್ಯಿ ತೀರಿಸುವ ಮೂಲಕ ತವರಿನಾಚೆಗಿನ ಅಜೇಯ ಓಟವನ್ನು ವಿಸ್ತರಿಸುವ ಹಂಬಲದಲ್ಲಿದೆ.

ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಸರ್ವಾಂಗೀಣ ನಿರ್ವಹಣೆಯೊಂದಿಗೆ ಗೆಲುವು ಒಲಿಸಿಕೊಂಡ ಆರ್‌ಸಿಬಿ, ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 6 ಗೆಲುವು, 3 ಸೋಲಿನ ಸಹಿತ 12 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಆರಂಭಿಕ ಪಂದ್ಯಗಳ ಗೆಲುವಿನ ಬಳಿಕ ಕಳೆದ ನಾಲ್ಕು ಪಂದ್ಯಗಳಲ್ಲಿ ತಲಾ 2 ಸೋಲು-ಗೆಲುವು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಸಹ 12 ಅಂಕ ಹೊಂದಿದ್ದು, ರನ್‌ರೇಟ್ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಮುಖಾಮುಖಿಯ ವಿಜೇತರು ಅಗ್ರಸ್ಥಾನಕ್ಕೇರುವ ಜತೆಗೆ ಪ್ಲೇಆ್ಗೂ ಸನಿಹವಾಗಲಿದ್ದಾರೆ. ಗೆಲುವಿನ ಕಾಂಬಿನೇಷನ್ ಕಂಡುಕೊಂಡಿರುವ ಆರ್‌ಸಿಬಿ ಈ ಬಾರಿ ತವರಿನಾಚೆ ಉತ್ತಮ ದಾಖಲೆ ಹೊಂದಿದೆ. ಇನ್ನು ಡೆಲ್ಲಿ ತಂಡ ಸೂಕ್ತ ಆರಂಭಿಕ ಜೋಡಿಯ ಹುಡುಕಾಟದಲ್ಲಿದೆ. ಉಪನಾಯಕ ್ಾ ಡು ಪ್ಲಸಿಸ್ ಫಿಟ್ ಆಗಿ ಮರಳಿದರೆ, ಹನ್ನೊಂದರ ಬಳಗದಲ್ಲಿ ಬದಲಾವಣೆಯ ಇಕ್ಕಟ್ಟಿಗೆ ಸಿಲುಕಲಿದೆ. ಮೆಗಾ ಹರಾಜಿನಲ್ಲಿ ₹10.75 ಕೋಟಿ ನೀಡಿ ಖರೀದಿಸಿದ್ದ ಟಿ. ನಟರಾಜನ್‌ಗೆ ಇನ್ನೂ ಅವಕಾಶ ನೀಡದಿರುವುದು ಅಚ್ಚರಿ ಮೂಡಿಸಿದೆ.

ದೆಹಲಿ ಅಂಗಣದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಲಿದ್ದು, ಕೃನಾಲ್ ಪಾಂಡ್ಯ ಆರ್‌ಸಿಬಿ ಟ್ರಂಪ್ ಕಾರ್ಡ್ ಎನಿಸಿದ್ದಾರೆ. ಹಿಂದಿನ ಪಂದ್ಯದಲ್ಲಿ ಕೃನಾಲ್ ಹಾಗೂ ಸುಯಶ್ ಶರ್ಮ ರನ್‌ಗತಿಗೆ ಕಡಿವಾಣ ಹೇರಿದ್ದು ಗೆಲುವಿಗೆ ಪ್ರಮುಖ ಕಾರಣ ಎನಿಸಿತು. ಡೆಲ್ಲಿ ತಂಡದಲ್ಲೂ ಕುಲದೀಪ್ ಯಾದವ್, ವಿಪ್ರಜ್ ನಿಗಮ್ ಜತೆಗೆ ಅಕ್ಷರ್ ಪಟೇಲ್ ಪರಿಣಾಮಕಾರಿ ಎನಿಸಿದರೆ ಆರ್‌ಸಿಬಿ ಬ್ಯಾಟರ್‌ಗಳಿಗೆ ಸವಾಲು ಎದುರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net