ಆಶಸ್ ಸರಣಿ ಸಮಬಲ ಸಾಧಿಸಿದ ಆಂಗ್ಲರು: ಬ್ರಾಡ್‌ಗೆ ಜಯದ ವಿದಾಯ

engg
Published on

ಲಂಡನ್: ವೇಗಿ ಕ್ರಿಸ್ ವೋಕ್ಸ್ (50ಕ್ಕೆ 4), ಸ್ಪಿನ್ನರ್ ಮೊಯಿನ್ ಅಲಿ (76ಕ್ಕೆ 3) ಮಾರಕ ಬೌಲಿಂಗ್ ಬಲದಿಂದ ಆತಿಥೇಯ ಇಂಗ್ಲೆಂಡ್ ತಂಡ ಮಳೆ ಅಡಚಣೆಯ ನಡುವೆಯೂ ಆಶಸ್ ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 49 ರನ್‌ಗಳಿಂದ ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾ ತಂಡ ಆಶಸ್ ಟ್ರೋಫಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಬೆನ್ ಸ್ಟೋಕ್ಸ್ ಬಳಗ ಸರಣಿಯಲ್ಲಿ 2-2 ಸಮಬಲದ ಸಮಾಧಾನ ಕಂಡಿತು. ವೃತ್ತಿಜೀವನದ ಕೊನೇ ಟೆಸ್ಟ್ ಆಡಿದ ವೇಗಿ ಸ್ಟುವರ್ಟ್ ಬ್ರಾಡ್ (62ಕ್ಕೆ 2) ಪಂದ್ಯದ ಕೊನೇ 2 ವಿಕೆಟ್ ಕಬಳಿಸಿ ಗೆಲುವಿನ ವಿದಾಯ ಪಡೆದರು.

ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ನ 383 ರನ್ ಸವಾಲಿಗೆ ಪ್ರತಿಯಾಗಿ 5ನೇ ಹಾಗೂ ಅಂತಿಮ ದಿನವಾದ ಸೋಮವಾರ ಚಹಾ ವಿರಾಮದ ಬಳಿಕ ಆಸೀಸ್, 94.4 ಓವರ್‌ಗಳಲ್ಲಿ 334ರನ್‌ಗಳಿಗೆ ಸರ್ವಪತನ ಕಂಡು ಶರಣಾಯಿತು. ವಿಕೆಟ್ ನಷ್ಟವಿಲ್ಲದೆ 135 ರನ್‌ಗಳಿಂದ ದಿನದಾಟ ಆರಂಭಿಸಿದ ಆಸೀಸ್‌ಗೆ ಉಸ್ಮಾನ್ ಖವಾಜ (72) ಹಾಗೂ ಡೇವಿಡ್ ವಾರ್ನರ್ (60) ವಿಕೆಟ್ ಕಬಳಿಸಿ ವೋಕ್ಸ್ ಆಘಾತ ನೀಡಿದರು. ನಂತರ ಮಾರ್ನಸ್ ಲಬುಶೇನ್ (13) ನಿರಾಸೆ ಮೂಡಿಸಿದರು. 4ನೇ ವಿಕೆಟ್‌ಗೆ ಜತೆಯಾದ ಸ್ಟೀವನ್ ಸ್ಮಿತ್ (54) ಹಾಗೂ ಟ್ರಾವಿಸ್ ಹೆಡ್ (43) 95 ರನ್ ಪೇರಿಸಿ ಆಸೀಸ್ ಚೇಸಿಂಗ್‌ಗೆ ಬಲ ತುಂಬಿದರು. ಬಳಿಕ ಇಂಗ್ಲೆಂಡ್ 11 ರನ್ ಅಂತರದಲ್ಲಿ 4 ವಿಕೆಟ್ ಕಬಳಿಸಿ ತಿರುಗೇಟು ನೀಡಿತು. ಭೋಜನ ವಿರಾಮದ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಚಹಾ ವಿರಾಮದವರೆಗೆ ಆಟ ನಡೆಯಲಿಲ್ಲ.

ಇಂಗ್ಲೆಂಡ್: 283 ಹಾಗೂ 395. ಆಸ್ಟ್ರೇಲಿಯಾ: 295 ಹಾಗೂ 94.4 ಓವರ್‌ಗಳಲ್ಲಿ 334 (ಖವಾಜ 72, ವಾರ್ನರ್ 60, ಲಬುಶೇನ್13, ಸ್ಮಿತ್ 55, ಹೆಡ್ 43, ವೋಕ್ಸ್ 50ಕ್ಕೆ 4, ಮೊಯಿನ್ ಅಲಿ 76ಕ್ಕೆ 3, ಬ್ರಾಡ್ 62ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net