

ಹೈದರಾಬಾದ್: ಸತತ 3 ಸೋಲುಗಳಿಂದ ಕಂಗೆಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 18ನೇ ಆವೃತ್ತಿಯ ತನ್ನ 5ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸವಾಲಿಗೆ ಸಜ್ಜಾಗಿದೆ. ಆರ್‌ಜಿಐ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಏಕೈಕ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಬಳಗ ಗೆಲುವಿನ ಹಳಿಗೆ ಮರಳುವ ತವಕದಲ್ಲಿದ್ದು, ಶುಭಮಾನ್ ಗಿಲ್ ಪಡೆ ಅಂಕಪಟ್ಟಿಯಲ್ಲಿ ಸುಧಾರಣೆ ಕಾಣುವ ಹಂಬಲದಲ್ಲಿದೆ.
ಟೂರ್ನಿ ಆರಂಭಕ್ಕೂ ಮುನ್ನ 300 ಪ್ಲಸ್ ರನ್‌ಗಳಿಸುವ ಗುರಿ ಹೊಂದಿದ್ದ ಸನ್‌ರೈಸರ್ಸ್, ಹಿಂದಿನ ಪಂದ್ಯದಲ್ಲಿ 100 ರನ್‌ಗಳಿಸಲು ಪರದಾಡಿದೆ. ಮೊದಲ ಪಂದ್ಯದಲ್ಲಿ 286 ರನ್‌ಗಳಿಸಿದ ಸನ್‌ರೈಸರ್ಸ್ ನಂತರದ 3 ಪಂದ್ಯಗಳಲ್ಲಿ ಕ್ರಮವಾಗಿ 190, 163 ಹಾಗೂ 120 ರನ್ ಕಲೆಹಾಕಿದೆ. ಅಂಕಪಟ್ಟಿಯ ಕೊನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಪ್ಲೇಆ್ ರೇಸ್‌ಗೆ ಮರಳಲು ಪುಟಿದೇಳಬೇಕಿದೆ. ಆರ್‌ಸಿಬಿ ತಂಡವನ್ನು ಅದರ ತವರಿನಲ್ಲೇ ಮಣಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಗುಜರಾತ್ ಆಡಿರುವ 3 ಪಂದ್ಯಗಳಲ್ಲಿ 2 ಜಯ, 1 ಸೋಲು ಕಂಡಿದೆ. ವೈಯಕ್ತಿಕ ಕಾರಣಗಳಿಂದ ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಾಡ ತವರಿಗೆ ಮರಳಿದ್ದು, ಸನ್‌ರೈಸರ್ಸ್ ವಿರುದ್ಧದ ಪಂದ್ಯಕ್ಕೆ ಗೈರಾಗಲಿದ್ದಾರೆ. ರಬಾಡ ಬದಲಿಗೆ ಸ್ಥಾನ ಪಡೆಯಲು ಗೆರಾಲ್ಡ್ ಕೋಟ್‌ಜೀ, ಅ್ಘಾನಿಸ್ತಾನದ ಆಲ್ರೌಂಡರ್ ಕರೀಂ ಜನ್ನತ್ ಹಾಗೂ ಗ್ಲೆನ್ ಫಿಲಿಪ್ಸ್ ನಡುವೆ ತ್ರಿಕೋನ ಸ್ಪರ್ಧೆ ಇದೆ.
ನೀರಸ ಬ್ಯಾಟಿಂಗ್-ಬೌಲಿಂಗ್
ಹೈದರಾಬಾದ್‌ನ ಉಪ್ಪಾಳ ಸ್ಟೇಡಿಯಂ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ಒದಗಿಸುವುದರಿಂದ ಸನ್‌ರೈಸರ್ಸ್ ತವರಿನ ಲಾಭ ಪಡೆಯುವ ಸಾಧ್ಯತೆಗಳಿದ್ದು, ರನ್‌ಮಳೆ ನಿರೀಕ್ಷೆ ಇದೆ. ಅಭಿಷೇಕ್ ಶರ್ಮ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 24, 6,1, 2 ರನ್‌ಗಳಿಸಿದ್ದಾರೆ. ಇಶಾನ್ ಕಿಶನ್ ಶತಕದ ಬಳಿಕ ಮೂರು ಇನಿಂಗ್ಸ್‌ಗಳಲ್ಲಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ. ಟ್ರಾವಿಸ್ ಹೆಡ್ ಹಾಗೂ ಹೆನ್ರಿಕ್ ಕ್ಲಾಸೆನ್ ,ನಿತೀಶ್ ಕುಮಾರ್ ರೆಡ್ಡಿ ಆರ್ಭಟಿಸಿದರೆ ಗುಜರಾತ್ ಬೌಲರ್‌ಗಳಿಗೆ ನೈಜ ಪರೀಕ್ಷೆ ಎದುರಾಗಲಿದೆ. ಬೌಲಿಂಗ್‌ನಲ್ಲಿ ಯುವ ಲೆಗ್ ಸ್ಪಿನ್ನರ್ ಜಿಶಾನ್ ಅನ್ಸಾರಿ (4 ವಿಕೆಟ್) ಗಮನ ಸೆಳೆದಿದ್ದು, ನಾಯಕ ಪ್ಯಾಟ್ ಕಮ್ಮಿನ್ಸ್ ಓವರ್‌ಗೆ 12.30ರ ಸರಾಸರಿಯೊಂದಿಗೆ ದುಬಾರಿ ಎನಿಸಿದ್ದಾರೆ. ಆಡಂ ಜಂಪಾ, ಅನುಭವಿ ವೇಗಿ ಮೊಹಮದ್ ಶಮಿ ನಿರಾಸೆ ಮೂಡಿಸಿದ್ದಾರೆ.
ಮುಖಾಮುಖಿ: 5
ಸನ್‌ರೈಸರ್ಸ್: 1
ಗುಜರಾತ್: 3
ರದ್ದು: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್.