ಬೆನ್ ಸ್ಟೋಕ್ಸ್‌ಗೆ ಇಂಗ್ಲೆಂಡ್ ತಂಡದ ನಾಯಕತ್ವ

joe root new
Published on

ಲಂಡನ್: 2019ರ ಏಕದಿನ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ ಜುಲೈ 8 ರಿಂದ ಆರಂಭಗೊಳ್ಳಲಿರುವ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಮುನ್ನಡೆಸಲಿದ್ದಾರೆ. 2ನೇ ಮಗುವಿನ ನಿರೀಕ್ಷೆಯಲ್ಲಿರುವ ನಾಯಕ ಜೋ ರೂಟ್ ದಂಪತಿ, ಪತ್ನಿ ಜತೆಗಿರುವ ಸಲುವಾಗಿ ರೂಟ್ ರಜೆ ಮೇಲೆ ತೆರಳಲಿದ್ದಾರೆ. ರೂಟ್ ಅನುಪಸ್ಥಿತಿಯಲ್ಲಿ ಬೆನ್ ಸ್ಟೋಕ್ಸ್ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ನಾಯಕತ್ವದ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಸೌಥಾಂಪ್ಟನ್‌ನಲ್ಲಿ ಜುಲೈ 8 ರಿಂದ ನಡೆಯಲಿದೆ. ನಾಯಕ ರೂಟ್ ಸೇವೆಯನ್ನು ತಂಡ ಕಳೆದುಕೊಳ್ಳಲಿದೆ. ರೂಟ್ ಪತ್ನಿ ಕ್ಯಾರೀ, ಇದೇ ವಾರ 2ನೇ ಮಗುವಿಗೆ ಜನ್ಮ ನೀಡಲಿದ್ದಾರೆ. ‘ಆಲ್ರೌಂಡರ್ ಬೆನ್ ಸ್ಟೋಕ್ಸ್, ರೂಟ್ ಸ್ಥಾನ ತುಂಬಲಿದ್ದಾರೆ. ಈಗಾಗಲೇ ಉಪ-ನಾಯಕನಾಗಿರುವ ಸ್ಟೋಕ್ಸ್, ಮೊದಲ ಬಾರಿಗೆ ನಾಯಕತ್ವ ಜವಾಬ್ದಾರಿ ನಿಭಾಯಿಸಲಿದ್ದಾರೆ’ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ. ಆಸ್ಪತ್ರೆಯಿಂದ ಧಾವಿಸಿದ ಬಳಿಕ ರೂಟ್, ಮನೆಯಲ್ಲೇ ಕುಟುಂಬ ಸದಸ್ಯರೊಂದಿಗೆ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಜುಲೈ 13ರ ವೇಳೆಗೆ ತಂಡ ಕೂಡಿಕೊಳ್ಳಲಿದ್ದಾರೆ. ಜುಲೈ 16 ರಿಂದ 2ನೇ ಟೆಸ್ಟ್ ಆರಂಭವಾಗಲಿದೆ.

ಬೆನ್ ಸ್ಟೋಕ್ಸ್ ಇದುವರೆಗೂ ಪ್ರಥಮ ದರ್ಜೆ, ಲಿಸ್ಟ್ ಎ ಪಂದ್ಯಗಳಿಗೂ ತಂಡ ಮುನ್ನಡೆಸಲಿಲ್ಲ. ಯಾವುದೇ ನಾಯಕತ್ವ ಅನುಭವವಿಲ್ಲದೆ ರಾಷ್ಟ್ರೀಯ ತಂಡ ಮುನ್ನಡೆ ನಡೆಸುತ್ತಿದ್ದಾರೆ. 29 ವರ್ಷದ ಸ್ಟೋಕ್ಸ್, 2013 ರಿಂದ ಇದುವರೆಗೂ 63 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಕರೊನಾ ವೈರಸ್ ಲಾಕ್‌ಡೌನ್ ಬಳಿಕ ಮೊದಲ ಅಂತಾಷ್ಟ್ರೀಯ ಕ್ರಿಕೆಟ್ ಟೂರ್ನಿ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net