ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಗೆಲುವಿನ ವಿದಾಯ: ತಗ್ಗಿದ ಸರಣಿ ಸೋಲಿನ ಅಂತರ

New Project (1)
Published on

ಹ್ಯಾಮಿಲ್ಟನ್: ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್‌ಗೆ ಗೆಲುವಿನ ವಿದಾಯ ಹೇಳಿದ್ದಾರೆ. ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ (85ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 423 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಸೋಲಿನ ನಡುವೆಯೂ ಆಂಗ್ಲರು ಕ್ರೋವ್-ಥೋರ್ಪೆ ಟ್ರೋಫಿ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದ್ದಾರೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಗೆಲುವು ದಾಖಲಿಸಿತ್ತು.

ಸೆಡ್ಡನ್ ಪಾರ್ಕ್‌ನಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ 2 ವಿಕೆಟ್‌ಗೆ 18 ರನ್‌ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್, ಯುವ ಬ್ಯಾಟರ್ ಜೇಕಬ್ ಬೆಥೆಲ್ (76) ಹಾಗೂ ಅನುಭವಿ ಜೋ ರೂಟ್ (54) ಹೋರಾಟದ ಹೊರತಾಗಿಯೂ 47.2 ಓವರ್‌ಗಳಲ್ಲಿ 234 ರನ್‌ಗಳಿಗೆ ದ್ವಿತೀಯ ಇನಿಂಗ್ಸ್‌ನಲ್ಲಿ ಸರ್ವಪತನ ಕಂಡಿತು. 658 ರನ್ ಗುರಿ ನೀಡಿದ್ದ ಕಿವೀಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಅಂತರದ ಗೆಲುವಿನ ತನ್ನ ದಾಖಲೆಯನ್ನು ಸರಿಗಟ್ಟಿತು. 2018ರಲ್ಲಿ ಶ್ರೀಲಂಕಾ ಎದುರು ಕಿವೀಸ್ ಈ ಸಾಧನೆ ಮಾಡಿತ್ತು.

ನ್ಯೂಜಿಲೆಂಡ್: 347 ಹಾಗೂ 453. ಇಂಗ್ಲೆಂಡ್: 143 ಹಾಗೂ 47.2 ಓವರ್‌ಗಳಲ್ಲಿ 234 (ಬೆಥೆಲ್ 76, ರೂಟ್ 54, ಅಟ್ಕಿನ್‌ಸನ್ 43, ಕರ್ಸ್ 11, ಸ್ಯಾಂಟ್ನರ್ 85ಕ್ಕೆ 4, ಸೌಥಿ 34ಕ್ಕೆ 2). ಪಂದ್ಯಶ್ರೇಷ್ಠ: ಮಿಚೆಲ್ ಸ್ಯಾಂಟ್ನರ್. ಸರಣಿ ಶ್ರೇಷ್ಠ: ಹ್ಯಾರಿ ಬ್ರೂಕ್.

ಟಿಮ್ ಸೌಥಿಗೆ 2 ವಿಕೆಟ್

ಇಂಗ್ಲೆಂಡ್ ವಿರುದ್ಧ ಸರಣಿಯ ಬಳಿಕ ಟೆಸ್ಟ್‌ನಿಂದ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದ 36 ವರ್ಷದ ಟಿಮ್ ಸೌಥಿ ತನ್ನ ಅಂತಿಮ ಪಂದ್ಯದಲ್ಲಿ 2 ವಿಕೆಟ್ ಪಡೆದರು. ಟೆಸ್ಟ್‌ನಲ್ಲಿ 15 ಬಾರಿ ಐದು ವಿಕೆಟ್ ಗೊಂಚಲು ಪಡೆದಿರುವ ಸೌಥಿ, ಆಡಿರುವ 107 ಟೆಸ್ಟ್‌ಗಳಲ್ಲಿ 391 ವಿಕೆಟ್ ಪಡೆಯುವ ಮೂಲಕ ಕಿವೀಸ್ ಪರ ಗರಿಷ್ಠ ವಿಕೆಟ್ ಪಡೆದಿರುವ ಎರಡನೇ ಬೌಲರ್ ಎನಿಸಿದ್ದಾರೆ. ಜತೆಗೆ 98 ಸಿಕ್ಸರ್ ಬಾರಿಸಿರುವ ಸೌಥಿ, ಟೆಸ್ಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಾಧಕರ ಪಟ್ಟಿಯಲ್ಲಿ ವಿಶ್ವದ 4ನೇ ಬ್ಯಾಟರ್ ಎಂಬ ದಾಖಲೆ ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net