ಇನ್ನೂ 5 ವರ್ಷ ಆಡುವ ಸಾಮರ್ಥ್ಯವಿದೆ: ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಅಭಿಮತ | ಟೋಕಿಯೊ ಒಲಿಂಪಿಕ್ಸ್ ಆಡುವ ಹಂಬಲ

coorg april 07
Published on

ಬೆಂಗಳೂರು: ಭಾರತೀಯ ಬ್ಯಾಡ್ಮಿಂಟನ್​ನ ಡಬಲ್ಸ್ ಸ್ಪರ್ಧೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುವವರು ಕೊಡಗಿನ ಅಶ್ವಿನಿ ಪೊನ್ನಪ್ಪ. ಚಿಕ್ಕ ವಯಸ್ಸಿನಿಂದಲೇ ಬ್ಯಾಡ್ಮಿಂಟನ್​ನಲ್ಲಿ ಗುರುತಿಸಿಕೊಂಡ ಅಶ್ವಿನಿ ಕಳೆದ 18 ವರ್ಷಗಳಿಂದಲೂ ವಿವಿಧ ವಯೋಮಿತಿಯಿಂದ ಹಿಡಿದು ಸೀನಿಯರ್ ಮಟ್ಟದವರೆಗೆ ಭಾರತವನ್ನು ಪ್ರತಿನಿಧಿಸಿದ್ದಾರೆ. ಕೊಡಗಿ ನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದು, ವೃತ್ತಿಜೀವನಕ್ಕಾಗಿ ಹೈದರಾಬಾದ್​ನಲ್ಲಿ ನೆಲೆಸಿರುವ 30 ವರ್ಷದ ಅಶ್ವಿನಿ ಪೊನ್ನಪ್ಪ, ಲಾಕ್​ಡೌನ್ ನಡುವೆ ಒಲಿಂಪಿಕ್ಸ್ ಕನಸಿನ ಆಸೆಯನ್ನು ಕೈಬಿಟ್ಟಿಲ್ಲ. 2012ರ ಲಂಡನ್, 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತ ತಂಡದ ಭಾಗವಾಗಿದ್ದ ಸ್ಟಾರ್ ಆಟಗಾರ್ತಿ 3ನೇ ಒಲಿಂಪಿಕ್ಸ್​ಗೆ ಸಿದ್ಧತೆಯಲ್ಲಿದ್ದಾರೆ. ಲಾಕ್​ಡೌನ್ ನಡುವೆ ತಮ್ಮ ಸಿದ್ಧತೆ ಹಾಗೂ ಕನಸಿನ ಕುರಿತು ಮಂಗಳವಾರ ‘ವಿಜಯವಾಣಿ’ಯೊಂದಿಗೆ ಮನದಾಳ ಹಂಚಿಕೊಂಡರು.

ಲಾಕ್​ಡೌನ್​ನಿಂದ ದಿನದ ಕಾರ್ಯ ಚಟುವಟಿಕೆ ಹೇಗೆ ಸಾಗಿದೆ?

ಮನೆಯಲ್ಲೇ ಸಾಧ್ಯವಾದಷ್ಟು ಕೆಲಸ-ಕಾರ್ಯಗಳನ್ನು ನಿರ್ವಹಿಸುತ್ತಿರುವೆ. ಫಿಟ್ನೆಸ್​ಗಾಗಿ ಮನೆಯಲ್ಲೇ ಎಷ್ಟು ಸಾಧ್ಯವೋ ಅಷ್ಟು ಕ್ರಮ ಕೈಗೊಂಡಿದ್ದೇನೆ. ಕೆಲವೊಂದು ವ್ಯಾಯಾಮ ಮಾಡುತ್ತಿದ್ದೇನೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಉತ್ತಮ ಸಾಮರ್ಥ್ಯ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದೇನೆ.

ಒಲಿಂಪಿಕ್ಸ್ ಅರ್ಹತೆ ಲಭಿಸುವ ವಿಶ್ವಾಸವಿದೆಯೇ?

ಬಿಡಬ್ಲು್ಯಎಫ್ ವೇಳಾಪಟ್ಟಿ ಗಮನಿಸಬೇಕು. ಹಿಂದಿನ ವೇಳಾಪಟ್ಟಿಯಲ್ಲಿ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ನನಗೆ 5 ಟೂರ್ನಿಗಳು ಬಾಕಿ ಇದ್ದವು. ಇದೀಗ ನೂತನ ವೇಳಾಪಟ್ಟಿ ಯಾವ ರೀತಿ ಸಿದ್ಧ ಪಡಿಸುತ್ತಾರೋ ನೋಡಬೇಕು. 2021ರ ಒಲಿಂಪಿಕ್ಸ್​ಗೆ ಅರ್ಹತಾ ಮಾನದಂಡ ಯಾವ ರೀತಿ ಫಿಕ್ಸ್ ಮಾಡುತ್ತಾರೆ ಎಂಬುದರ ಮೇಲೆ ನಿಂತಿದೆ. ಇದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಈ ವರ್ಷ ನಿಗದಿಯಾಗಿದ್ದ ಅರ್ಹತಾ ಮಾನದಂಡವೇ ಮುಂದಿನ ವರ್ಷಕ್ಕೆ ಇದ್ದರೆ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸುವ ವಿಶ್ವಾಸವಿದೆ.

ಒಲಿಂಪಿಕ್ಸ್ ಸಿದ್ಧತೆ ಕುರಿತು ಏನು ಹೇಳುತ್ತೀರಿ?

ಸದ್ಯಕ್ಕೆ ಜುಲೈವರೆಗೂ ಎಲ್ಲ ಟೂರ್ನಿಗಳು ರದ್ದುಗೊಂಡಿವೆ. ನಂತರ ಬರುವ ಟೂರ್ನಿಗಳಿಗೆ ಮಾನಸಿಕವಾಗಿ ಸಿದ್ಧವಾಗುತ್ತಿ ದ್ದೇನೆ. ನನ್ನ ಹಿಂದಿನ ಪಂದ್ಯಗಳ ವಿಡಿಯೋ ತುಣುಕುಗಳನ್ನು ನೋಡುತ್ತಿದ್ದೇನೆ. ಇದು ಟೈಂಪಾಸ್ ಜತೆಗೆ ನನ್ನ ನಿರ್ವಹಣೆ ವೀಕ್ಷಿಸುವ ಅವಕಾಶ ಲಭಿಸಿದಂತಾಗಿದೆ. ಷಟ್ಲಲ್ ಜತೆಗೆ ವಾಲ್ ಪ್ರಾಕ್ಟಿಸ್ ಮಾಡುತ್ತಿದ್ದೇನೆ. ಇದು ಮನೆಯಲ್ಲೇ ಬ್ಯಾಡ್ಮಿಂಟನ್ ಆಭ್ಯಾಸಕ್ಕೆ ತುಂಬಾ ಸಹಕಾರಿಯಾಗಿದೆ.

ತಯಾರಿಗಾಗಿ ನಿಮ್ಮ ಜತೆಗಾರ್ತಿ ಸಿಕ್ಕಿ ರೆಡ್ಡಿ ಜತೆ ಸಂಪರ್ಕದಲ್ಲಿದ್ದೀರಾ?

ಹೌದು, ಪ್ರತಿದಿನ ಮಾತನಾಡುತ್ತಿರುವೆ. ಆದರೆ ಒಲಿಂಪಿಕ್ಸ್ ಕುರಿತು ಯಾರಿಗೂ ಮಾಹಿತಿ ಇಲ್ಲ. ಕೇವಲ ಫಿಟ್ನೆಸ್ ಹಾಗೂ ಆಟದ ಕುರಿತು ಕೆಲಹೊತ್ತು ಮಾತನಾಡುತ್ತೇವೆ, ಅಷ್ಟೇ. ಮಹಿಳಾ ಡಬಲ್ಸ್ ವಿಭಾಗದಲ್ಲಿ ಉತ್ತಮ ಜತೆಗಾರ್ತಿ ಆಕೆ.

ಅಶ್ವಿನಿ ಪೊನ್ನಪ್ಪ ಇನ್ನು ಎಷ್ಟು ವರ್ಷ ಬ್ಯಾಡ್ಮಿಂಟನ್ ಆಡಬಹುದು?

ನಾನು ಅಂದುಕೊಂಡಿರುವ ಗುರಿಯನ್ನು ಇನ್ನೂ ಮುಟ್ಟಿಲ್ಲ. ದೈಹಿಕವಾಗಿ, ಮಾನಸಿಕವಾಗಿ ನನ್ನಲ್ಲಿ ಉತ್ತಮ ಸಾಮರ್ಥ್ಯವಿದೆ. ಕನಿಷ್ಠ 4ರಿಂದ 5 ವರ್ಷ ಆಡುವ ಉತ್ಸಾಹ ನನ್ನಲಿದೆ. ಫಿಟ್ನೆಸ್ ಕಾಯ್ದುಕೊಂಡಿದ್ದು, ಗಾಯದ ಸಮಸ್ಯೆಯಿಂದ ಮುಕ್ತವಾಗಿದ್ದೇನೆ. ಬ್ಯಾಡ್ಮಿಂಟನ್ ಆಡುವುದೇ ನನ್ನ ಕನಸು.

ಲಾಕ್​ಡೌನ್ ಬಗ್ಗೆ ನಿಮ್ಮ ಸಂದೇಶ?

ನಾನು ಕೂರ್ಗ್​ಗೆ ಹೋಗಲು ಆಗಲಿಲ್ಲ. ಪತಿಯೊಂದಿಗೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದೇನೆ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಇರಬೇಕು. ಮನೆಯಲ್ಲೇ ಇದ್ದು ಪೊಲೀಸರಿಗೆ, ವೈದ್ಯರಿಗೆ ಸಹಕಾರ ನೀಡಬೇಕು. ಮನೆಯಲ್ಲೇ ಕುಳಿತು ಭಯಾನಕ ಕರೊನಾ ವೈರಸ್​ನಿಂದ ಪಾರಾಗೋಣ. ಸರ್ಕಾರಕ್ಕೆ ಎಲ್ಲರೂ ಸಹಕರಿಸಿ ಎಂಬುದೇ ನನ್ನ ಮನವಿ.

2010ರ ಕಾಮನ್ವೆಲ್ತ್ ಗೇಮ್ ಚಾಂಪಿಯನ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕ ಜಯಿಸಿರುವ ಅಶ್ವಿನಿ ಪೊನ್ನಪ್ಪ, ಮಹಿಳಾ ಡಬಲ್ಸ್ ವಿಭಾಗದಲ್ಲಿ ತಜ್ಞ ಆಟಗಾರ್ತಿಯಾಗಿ ರೂಪುಗೊಂಡಿ ದ್ದಾರೆ. ಮತ್ತೋರ್ವ ಸ್ಟಾರ್ ಆಟಗಾರ್ತಿ ಜ್ವಾಲಾ ಗುಟ್ಟಾ ಜತೆಗೂಡಿ ನವದೆಹಲಿಯಲ್ಲಿ 2010ರಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಸ್ವರ್ಣ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದರು. ಅದೇ ಕೂಟದಲ್ಲಿ ಮಿಶ್ರ ಡಬಲ್ಸ್​ನಲ್ಲಿ ಕಂಚು ಗೆದ್ದಿದ್ದರು. 2011ರಲ್ಲಿ ಲಂಡನ್​ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನಲ್ಲಿ ಅಶ್ವಿನಿ-ಜ್ವಾಲಾ ಕಂಚು ಜಯಿಸಿದ ಭಾರತದ ಮೊದಲ ಜೋಡಿ ಎನಿಸಿಕೊಂಡಿತು. 2017ರಲ್ಲಿ ಕೊಡಗು ಮೂಲದ ಉದ್ಯಮಿ ಕರಣ್ ಅವರನ್ನು ವಿವಾಹವಾದರು.

ರಘುನಾಥ್ ಡಿ.ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net