

ದುಬೈ: ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ ವೈಫಲ್ಯ ಕಂಡ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಮರಳಿ ವಿಶ್ವ ನಂ. 1 ಪಟ್ಟಕ್ಕೇರಿದ್ದಾರೆ.
ಕಿವೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಕೇವಲ 21 ರನ್ ಗಳಿಸಿದ ಕೊಹ್ಲಿ ಅಂಕ ಗಳಿಕೆ 906 ಅಂಕಕ್ಕೆ ಕುಸಿದಿದ್ದರೆ, 911 ಅಂಕ ಹೊಂದಿರುವ ಸ್ಮಿತ್ ಅಗ್ರಸ್ಥಾನಕ್ಕೇರಿದ್ದಾರೆ. ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ 3ನೇ ಸ್ಥಾನಕ್ಕೇರಿದ್ದರೆ, ಆಸೀಸ್ ಯುವ ಬ್ಯಾಟ್ಸ್ ಮನ್ ಮಾರ್ನಸ್ ಲಬುಶೇನ್ 4ನೇ ಸ್ಥಾನಕ್ಕಿಳಿದಿದ್ದಾರೆ.
ವೆಲ್ಲಿಂಗ್ಟನ್ನಲ್ಲಿ ಕಿವೀಸ್ಗೆ ಪ್ರತಿರೋಧ ತೋರಿದ ಭಾರತೀಯ ಬ್ಯಾಟ್ಸ್ಮನ್ಗಳಾದ ಅಜಿಂಕ್ಯ ರಹಾನೆ ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್ ಕ್ರಮವಾಗಿ 8 ಮತ್ತು ಜೀವನಶ್ರೇಷ್ಠ 10ನೇ ಸ್ಥಾನಕ್ಕೇರಿದ್ದಾರೆ. ಮತ್ತೊಂದೆಡೆ ಪಂದ್ಯದ 2 ಇನಿಂಗ್ಸ್ ಗಳಲ್ಲಿ ತಲಾ 11 ರನ್ ಗಳಿಸಿದ ಚೇತೇಶ್ವರ ಪೂಜಾರ 8ರಿಂದ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಯಾಂಕ್ ಪ್ರಗತಿಯೊಂದಿಗೆ ಅಗ್ರ 10ರಲ್ಲಿ ಈಗ ಭಾರತದ ನಾಲ್ವರು ಬ್ಯಾಟ್ಸ್ಮನ್ಗಳು ಸ್ಥಾನ ಸಂಪಾದಿಸಿದಂತಾಗಿದೆ.
ಬೌಲಿಂಗ್ನಲ್ಲಿ ಅಶ್ವಿನ್ ಕುಸಿತ: ಬೌಲಿಂಗ್ ರ್ಯಾಂಕಿಂಗ್ನಲ್ಲಿ ಆಫ್-ಸ್ಪಿನ್ನರ್ ಆರ್. ಅಶ್ವಿನ್ ಒಂದು ಸ್ಥಾನ ಕುಸಿದು 9ನೇ ಸ್ಥಾನಕ್ಕಿಳಿದಿದ್ದಾರೆ. ವೆಲ್ಲಿಂಗ್ಟನ್ನಲ್ಲಿ ಅವರು 3 ವಿಕೆಟ್ಗಳಷ್ಟೇ ಗಳಿಸಿದ್ದರು. ಆದರೆ ರ್ಯಾಂಕಿಂಗ್ನಲ್ಲಿ ಈಗಲೂ ಅವರೇ ಭಾರತದ ನಂ. 1 ಟೆಸ್ಟ್ ಬೌಲರ್ ಆಗಿ ಮುಂದುವರಿದಿದ್ದಾರೆ. 5 ವಿಕೆಟ್ ಗೊಂಚಲು ಪಡೆದ ವೇಗಿ ಇಶಾಂತ್ ಶರ್ಮ ಒಂದು ಸ್ಥಾನ ಮೇಲೇರಿ 17ನೇ ಸ್ಥಾನ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮದ್ ಶಮಿ ಇಬ್ಬರೂ ಅಗ್ರ 10ರಿಂದ ಹೊರಬಿದ್ದಿದ್ದು, 11 ಮತ್ತು 15ನೇ ಸ್ಥಾನಕ್ಕಿಳಿದಿದ್ದಾರೆ. ಭಾರತಕ್ಕೆ ಕಡಿವಾಣ ಹಾಕಿದ ಕಿವೀಸ್ ವೇಗಿಗಳಾದ ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ಭಾರಿ ಪ್ರಗತಿ ಕಂಡಿದ್ದಾರೆ. ಸೌಥಿ 8 ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದ್ದರೆ, ಬೌಲ್ಟ್ 4 ಸ್ಥಾನ ಮೇಲೇರಿ 13ನೇ ಸ್ಥಾನ ಗಳಿಸಿದ್ದಾರೆ. -ಪಿಟಿಐ/ಏಜೆನ್ಸೀಸ್
4 ವರ್ಷದಿಂದ ಕೊಹ್ಲಿ-ಸ್ಮಿತ್ ನಂ. 1
ಕಳೆದ 4 ವರ್ಷಗಳಿಂದ ಕೊಹ್ಲಿ-ಸ್ಮಿತ್ ನಡುವೆಯೇ ನಂ. 1 ಪಟ್ಟ ವಿನಿಯಮವಾಗುತ್ತ ಬಂದಿದೆ. ಇವರಿಬ್ಬರ ಹೊರತಾಗಿ ಕೊನೆಯ ಬಾರಿ ನಂ. 1 ಆಗಿದ್ದ ಬೇರೆ ಬ್ಯಾಟ್ಸ್ಮನ್ ಎಂದರೆ ಕೇನ್ ವಿಲಿಯಮ್ಸನ್. ಅವರು 2015ರ ಡಿಸೆಂಬರ್ನಲ್ಲಿ ಕೇವಲ 8 ದಿನಗಳ ಕಾಲ ನಂ. 1 ಆಗಿದ್ದರು. 2015ರ ಜೂನ್ನಲ್ಲಿ ಮೊದಲ ಬಾರಿ ನಂ. 1 ಆಗಿದ್ದ ಸ್ಮಿತ್ ಇದೀಗ 8ನೇ ಬಾರಿ ಈ ಸ್ಥಾನವನ್ನು ಮರಳಿ ಪಡೆದಿದ್ದಾರೆ.