ರಾಜ್ಯ ಮಟ್ಟದ ವೀಲ್ ಚೇರ್ ಟೆನಿಸ್ : ಪ್ರತಿಮಾ ಎನ್.ರಾವ್ - ಮುಬಿನಾ ಜೋಡಿ ಚಾಂಪಿಯನ್

New Project
Published on

ಬೆಂಗಳೂರು, 2024 ಅಕ್ಟೋಬರ್ 27: ಕರ್ನಾಟಕ ವೀಲ್ ಚೇರ್ ಟೆನಿಸ್ ಅಸೋಸಿಯೇಷನ್ (ಕೆಡಬ್ಲ್ಯೂಟಿಎ) ಅ.26 ಮತ್ತು 27ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ನ ಕೆಎಸ್ ಎಲ್ ಟಿಎ ಟೆನಿಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವೀಲ್ ಚೇರ್ ಟೆನಿಸ್ ಪಂದ್ಯಾವಳಿ-2024ರಲ್ಲಿ ಕರ್ನಾಟಕದ 59ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದರು.

ಕಾರ್ಲೆ ಇನ್ಫ್ರಾ ಪ್ರಾಯೋಜಿಸಿದ ಮತ್ತು ಬಾಲ್ಡೋಟಾ ಗ್ರೂಪ್ ಸಹ-ಪ್ರಾಯೋಜಕತ್ವದ ಈ ಕಾರ್ಯಕ್ರಮವು ವಿಶೇಷ ಸಾಮರ್ಥ್ಯದ ಟೆನಿಸ್ ಆಟಗಾರರಿಗೆ ಸಮಾನ ಆಟದ ಮೈದಾನದಲ್ಲಿ ಸ್ಪರ್ಧಿಸಲು ವೇದಿಕೆಯನ್ನು ಒದಗಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಡಬ್ಲ್ಯುಟಿಎ ಅಧ್ಯಕ್ಷ ಬಿ.ಆರ್.ಚಂದ್ರಕಾಂತ್, "15 ವರ್ಷಗಳ ಹಿಂದೆ ಕೆಡಬ್ಲ್ಯುಟಿಎ ಅನ್ನು ರಚಿಸಲಾಯಿತು. ವಿಕಲಚೇತನರು ಈ ಟೆನಿಸ್ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಮೂಲಕ ಸಾಧನೆಯ ಖುಷಿ ಪಡೆಯುವಂತೆ ಪ್ರೋತ್ಸಾಹಿಸಲು ಸಂಸ್ಥೆ ಕೆಲಸಮಾಡುತ್ತಿದೆ. 59 ಸ್ಪರ್ಧಿಗಳಲ್ಲಿ ಬೆಂಗಳೂರಿನಿಂದ ಹೊರಗಿನ 39 ಸ್ಪರ್ಧಿಗಳು ಹುಬ್ಬಳ್ಳಿ, ಹಾಸನ, ದಾವಣಗೆರೆ, ಕೊಪ್ಪಳ, ಧಾರವಾಡ, ಹಾವೇರಿ, ಬಾಗಲಕೋಟೆ ಮುಂತಾದ ಸಣ್ಣ ನಗರಗಳಿಂದ ಭಾಗವಹಿಸಿದ್ದಾರೆ. ಒಟ್ಟು 24 ಮಹಿಳಾ ಆಟಗಾರರು ಮತ್ತು 35 ಪುರುಷ ಆಟಗಾರರು 50,000/- ರೂ.ಗಳ ಬಹುಮಾನದ ಮೊತ್ತಕ್ಕಾಗಿ ಸ್ಪರ್ಧಿಸಿದ್ದಾರೆ.

ಹಲವಾರು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಭಾರತದ ರ್ಯಾಂಕಿಂಗ್ನಲ್ಲಿ ನಂ.1 ಮತ್ತು ಅಂತಾರಾಷ್ಟ್ರೀಯ ರ್ಯಾಂಕಿಂಗ್‌ ನಲ್ಲಿ 117ನೇ ಸ್ಥಾನದಲ್ಲಿರುವ ಶಿಲ್ಪಾ ಕೆ.ಪಿ., ಸಿಂಗಲ್ಸ್ ಮತ್ತು ಡಬಲ್ಸ್‌ ನಲ್ಲಿ ಭಾರತ ರ್ಯಾಂಕಿಂಗ್‌ ನಲ್ಲಿ ನಂ.2 ಸ್ಥಾನದಲ್ಲಿರುವ ಪ್ರತಿಮಾ ರಾವ್, ಮಧು, ಅನಿಲ್ ಡಿ.ಅಲ್ಮೇಡಾ ಮತ್ತು ದೇವೇಗೌಡ ಅಂಜಿನಪ್ಪ ಮೊದಲಾದವರು ಸೆಲೆಬ್ರಿಟಿ ಸ್ಪರ್ಧಿಗಳಾಗಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಕೆಎಸ್ಎಲ್ಟಿಎಯಲ್ಲಿ ಬಾಲ್ ಬಾಯ್ ಆಗಿದ್ದ ಶೇಖರ್ ವೀರಾಸ್ವಾಮಿ ಅಪಘಾತದಲ್ಲಿ ಗಾಯಗೊಂಡು ಅಂಗವಿಕಲರಾದರು ನಂತರ ಕೆಡಬ್ಲ್ಯೂಟಿಎ ಸದಸ್ಯರ ಪ್ರೋತ್ಸಾಹದಿಂದ ಗಾಲಿಕುರ್ಚಿ ಟೆನಿಸ್ ಅನ್ನು ಕೈಗೆತ್ತಿಕೊಂಡರು ಮತ್ತು ಇಂದು ವಿಶ್ವ ಶ್ರೇಯಾಂಕದಲ್ಲಿ 246 ನೇ ಸ್ಥಾನದಲ್ಲಿದ್ದಾರೆ.

ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮತ್ತು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ, ಐಎಎಸ್‌ ಮಹೇಶ್ವರ ರಾವ್ ಭಾಗವಹಿಸಿದ್ದರು.

ಕಾರ್ಲೆ ಇನ್ಫ್ರಾ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ಕಾರ್ಲೆ ಗೌರವ ಅತಿಥಿಯಾಗಿದ್ದರು. ಕೆಎಸ್ಎಲ್ಟಿಎ ಗೌರವ ಜಂಟಿ ಕಾರ್ಯದರ್ಶಿ ಸುನಿಲ್ ಯಜಮಾನ್ ವಿಶೇಷ ಆಹ್ವಾನಿತರಾಗಿದ್ದರು.

ವಿಜೇತರ ಪಟ್ಟಿ ಹೀಗಿದೆ...

ಮಹಿಳೆಯರ ಡಬಲ್ಸ್‌ವಿಭಾಗದಲ್ಲಿ-ಪ್ರತಿಮಾ ಎನ್.ರಾವ್ ಹಾಗೂ ಮುಬಿನಾ

ಪುರುಷರ ಡಬಲ್ಸ್‌ ವಿಭಾಗದಲ್ಲಿ-ಶೇಖರ್ ವೀರಸ್ವಾಮಿ ಹಾಗೂ ಅನಿಲ್ ಡಿ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ-ಶೇಖರ್ ವೀರಸ್ವಾಮಿ

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಪ್ರತಿಮಾ ಎನ್ ರಾವ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net