ಮಂಗಳೂರಿನಲ್ಲಿ ರಾಜ್ಯ ಮಟ್ಟದ ಓಪನ್ ಸರ್ಫ್ ಚಾಂಪಿಯನ್‌ಶಿಪ್ ಸಂಪನ್ನ

Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಇಲ್ಲಿನ ತಣ್ಣೀರುಬಾವಿ ಕಡಲತೀರದಲ್ಲಿ ನಡೆದ ಮಂಗಳೂರಿನ ಮೊದಲ ರಾಜ್ಯ ಮಟ್ಟದ ಓಪನ್ ಸರ್ಫ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು 7 ಸರ್ಫ್ ಶಾಲೆಗಳಿಂದ 70ಕ್ಕೂ ಅಧಿಕ ಸರ್ಫರ್‌ಗಳು ಪಾಲ್ಗೊಂಡರು.
ಮಂಗಳೂರಿನ ತಣ್ಣೀರುಬಾವಿಯ ಕಡಲತೀರ ಸರ್ಫಿಂಗ್‌ಗೆ ಸೂಕ್ತವಾಗಿದ್ದು, ಅದನ್ನು ಜಾಗತಿಕ ಸರ್ಫಿಂಗ್ ನಕ್ಷೆಯಲ್ಲಿ ಗುರುತಿಸುವಂತೆ ಮಾಡುವುದು ಹಾಗೂ ಮಂಗಳೂರಿಗರಲ್ಲಿ ಸರ್ಫಿಂಗ್ ಕುರಿತು ಪ್ರೀತಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಚಾಂಪಿಯನ್‌ಶಿಪ್ ಆಯೋಜಿಸಲಾಗಿತ್ತು.
ಚಾಂಪಿಯನ್‌ಶಿಪ್ ಉದ್ಘಾಟನೆಯಲ್ಲಿ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ., ಕಾರ್ಪೊರೇಟರ್ ಸುನಿತಾ ಸಾಲ್ಯಾನ್, ಕೋಸ್ಟ್‌ಗಾರ್ಡ್ ಕಮಾಂಡೆಂಟ್ ಡಿಐಜಿ ವೆಂಕಟೇಶ್, ನವಮಂಗಳೂರು ಬಂದರು ಮಂಡಳಿಯ ಉಪಾಧ್ಯಕ್ಷ ಕೆ.ಜಿ.ನಾಥ್, ಯೋಜಕ ಸಂಸ್ಥೆಯ ಎಂಡಿ ಜಗದೀಶ್ ಬೋಳೂರು, ನೆಹರೂ ಯುವ ಕೇಂದ್ರದ ಜಿಲ್ಲಾ ಸಂಯೋಜಕ ರಘುವೀರ್ ಸೂಟರ್‌ಪೇಟೆ ಮುಂತಾದವರು ಪಾಲ್ಗೊಂಡರು. ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
20ರ ಮೇಲ್ಪಟ್ಟ ಪುರುಷರ ವಿಭಾಗ: ಶ್ರೀಕೃಷ್ಣ ವಸಂತ್(ಪ್ರಥಮ), ಕಲ್ಯಾಣ್ ರಾಯಿತಿ(ದ್ವಿತೀಯ), 20ರ ಮೇಲ್ಪಟ್ಟ ಮಹಿಳೆಯರ ವಿಭಾಗ: ಅಪೂರ್ವ ಬೈಕಾಡಿ(ಪ್ರಥಮ), ಶ್ರೇಯಾ ಮೆಹ್ತ(ದ್ವಿತೀಯ). 16ರಿಂದ 19ರ ಪುರುಷರ ವಿಭಾಗ: ಪ್ರವೀಣ್(ಪ್ರಥಮ), ದಯಾನಂದ(ದ್ವಿತೀಯ), 16-19ರ ಮಹಿಳೆಯರ ವಿಭಾಗ: ಸಿಂಚನ ಗೌಡ(ಪ್ರಥಮ), ಅಖಿಲ ಯು(ದ್ವಿತೀಯ). ಚಾಂಪಿಯನ್‌ಶಿಪ್‌ನಲ್ಲಿ 7 ವರ್ಷದ ತನಿಶಾ ಭಟ್ ಭಾಗಿಯಾಗುವ ಮೂಲಕ ಅಚ್ಚರಿಮೂಡಿಸಿದರು. 12ರ ಕೆಳಗಿನ ವಿಭಾಗದಲ್ಲಿ ತನಿಶಾ ದ್ವಿತೀಯ ಸ್ಥಾನಿಯಾದರು. ಮಂಗಳೂರು ಸರ್ಫ್ ಕ್ಲಬ್‌ನ ಅಧ್ಯಕ್ಷ ಮಿಥುನ್ ಭಟ್ ಕಾಕುಂಜೆ ಕಾರ್ಯಕ್ರಮ ನಿರ್ವಹಿಸಿದರು.

ಮಂಗಳೂರಿನಲ್ಲಿ ಸಾಕಷ್ಟು ಪ್ರತಿಭೆಯಿದ್ದರೂ ಸರ್ಫಿಂಗ್ ಕ್ರೀಡೆಗೆ ಬರುವವರ ಸಂಖ್ಯೆ ಕಡಿಮೆ ಎನ್ನುತ್ತಾರೆ ಆಯೋಜಕರು. ಪಣಂಬೂರು, ಬೈಕಂಪಾಡಿ ಭಾಗಗಳಲ್ಲಿ ಕೂಲಿ ಕೆಲಸಕ್ಕೆ ಬರುವವರ ಮಕ್ಕಳು ನಮ್ಮಲ್ಲಿಗೆ ಬಂದು ಉಚಿತ ತರಬೇತಿ ಪಡೆದು ಈಗ ಬಹುಮಾನ ಗೆಲ್ಲುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ನಮ್ಮ ಸ್ಥಳೀಯರಿಗೆ ಬನ್ನಿ ಎಂದು ವಿನಂತಿಸಿದರೂ ಬರುವವರ ಸಂಖ್ಯೆ ತೀರಾ ಕಡಿಮೆ ಇದೆ. ಸರ್ಫಿಂಗ್ ವಿಚಾರದಲ್ಲಿ ಮೂಲ್ಕಿ ಸಮೀಪ ಏಷ್ಯಾದ ಮೊದಲ ಸರ್ಫಿಂಗ್ ತರಬೇತಿ ಸಂಸ್ಥೆಯಾಗಿ ಮಂತ್ರ ಸರ್ಫ್ ಕ್ಲಬ್ ಪ್ರಾರಂಭವಾದ ನಂತರ ಕೊಂಚ ಆ ಬಗ್ಗೆ ಜಾಗೃತಿ ಮೂಡಿದೆ. ಆದರೂ ಮಂಗಳೂರು ಭಾಗದಲ್ಲಿ ಇನ್ನೂ ಬೆಳವಣಿಗೆಗೆ ಅವಕಾಶ ಇದೆ ಎನ್ನುತ್ತಾರೆ ಮಂಗಳೂರು ಸರ್ಫಿಂಗ್ ಕ್ಲಬ್‌ನ ಗೌರವ್ ಹೆಗ್ಡೆ.

ಮಂಗಳೂರು ಸರ್ಫ್ ಕ್ಲಬ್ 2015ರಿಂದ ಮಂಗಳೂರಿನಲ್ಲಿ ಸರ್ಫಿಂಗ್ ತರಬೇತಿ ನೀಡುತ್ತಾ ಬಂದಿದೆ. ಇದು ಲಾಭರಹಿತ ಸಂಸ್ಥೆಯಾಗಿದ್ದು ಮಂಗಳೂರಿನ ಆಸಕ್ತರಲ್ಲಿ ಸರ್ಫಿಂಗ್ ಕೌಶಲ್ಯ ವೃದ್ಧಿ ಮಾಡುವುದಕ್ಕೆ ಮಹತ್ವ ನೀಡುತ್ತಿದೆ. ಈ ಕ್ಲಬ್‌ನ 6 ಮಂದಿ ಸದಸ್ಯರು ಅಮೆರಿಕನ್ ಹಾರ್ಟ್ ಅಸೋಸಿಯೇಶನ್‌ನಿಂದ ಹಾರ್ಟ್ ಸೇವರ್ಸ್ ಎಂಬ ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಣೆಯ ತರಬೇತಿ ಪೂರ್ಣಗೊಳಿಸಿದ್ದಾರೆ.

  20ರ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಕೃಷ್ಣ ವಸಂತ್
20ರ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಕೃಷ್ಣ ವಸಂತ್
16-19ರ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನಿ ಸಿಂಚನ ಗೌಡ
  • 20ರ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಪ್ರಥಮ, ದ್ವಿತೀಯ ಸ್ಥಾನಿಗಳಾದ
    ಅಪೂರ್ವ ಬೈಕಾಡಿ , ಶ್ರೇಯಾ ಮೆಹ್ತ
  • 12ರ ಕೆಳಹರೆಯದ ವಿಭಾಗದಲ್ಲಿ ದ್ವಿತೀಯ ಸ್ಥಾನಿ, ಕೇವಲ 7ರ ಹರೆಯದ ತನಿಶಾ
    ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
    www.vijayavani.net