ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಟೂರ್ನಿಗೆ ವೇದಿಕೆ ಸಜ್ಜು

ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಟೂರ್ನಿಗೆ ವೇದಿಕೆ ಸಜ್ಜು
ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಟೂರ್ನಿಗೆ ವೇದಿಕೆ ಸಜ್ಜು
Published on
ಬೆಂಗಳೂರು: ಮಾಜಿ ಅಂತಾರಾಷ್ಟ್ರೀಯ ಕಬಡ್ಡಿ ಪಟುಗಳಾದ ಎಸ್​.ಬಿ. ಶಿವಲಿಂಗಯ್ಯ ಮತ್ತು ಚಿನ್ನಸ್ವಾಮಿ ರೆಡ್ಡಿ ಸ್ಮರಣಾರ್ಥ ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಟೂರ್ನಿ ಡಿಸೆಂಬರ್​ 12ರಿಂದ 14ರವರೆಗೆ ಮಲ್ಲೇಶ್ವರದ ಕೋದಂಡರಾಮಪುರ ಕಬಡ್ಡಿ (Kabaddi) ಆಟದ ಮೈದಾನದಲ್ಲಿ ನಡೆಯಲಿದೆ. ಕುಂಕುಮ, ಹರಿಶಿನ, ಶ್ರೀಗಂಧ, ಪಚ್ಚಕರ್ಪೂರ, ಹರಳೆಣ್ಣೆ ಹಾಕಿದ ಮಟ್ಟಿ ಮಣ್ಣಿನ ಅಂಕಣದಲ್ಲಿ ಪಂದ್ಯಗಳು ನಡೆಯಲಿವೆ.

ದೇಶೀಯ ಕ್ರೀಡೆ ಕಬಡ್ಡಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಯಂಗ್​ ಸ್ಟಾರ್ಸ್​ ಕಬಡ್ಡಿ ಕ್ಲಬ್​ 1965ರಲ್ಲಿ ಸ್ಥಾಪನೆಯಾಯಿತು. ಈ ಕ್ಲಬ್​ನಲ್ಲಿ 500ಕ್ಕೂ ಅಧಿಕ ಕಬಡ್ಡಿ ಪಟುಗಳು ತರಬೇತಿ ಪಡೆದಿದ್ದು, 80ಕ್ಕೂ ಅಧಿಕ ಆಟಗಾರರು ರಾಷ್ಟ್ರ, ರಾಜ್ಯ, ವಿಶ್ವವಿದ್ಯಾಲಯ ತಂಡಗಳನ್ನು ಪ್ರತಿನಿಧಿಸಿದ್ದಾರೆ. 60ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ನಮ್ಮ ಕ್ಲಬ್​ 25 ರಾಜ್ಯಮಟ್ಟದ, 4 ಅಖಿಲ ಭಾರತ, ಹಾಗೂ ಕೆವಿಎಲ್​ ಮಾದರಿಯಲ್ಲಿ ವಾಲಿಬಾಲ್​ ಟೂರ್ನಿ, ಫುಟ್​ಬಾಲ್​, ಖೋಖೋ ಟೂರ್ನಿಗಳನ್ನು ಆಯೋಜಿಸಿದೆ. ಕ್ಲಬ್​ನ ಆಟಗಾರರಾದ ವೈ. ಕುಪ್ಪರಾಜ್​ ಮತ್ತು ಚಿನ್ನಸ್ವಾಮಿರೆಡ್ಡಿ 1982ರ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ತಂಡದ ಪರ ಆಡಿ ಚಿನ್ನ ಗೆದ್ದಿದ್ದರು. ಯುವ ಕಬಡ್ಡಿ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟಕ್ಕೇರುವ ತಯಾರಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಈ ಮೂರು ದಿನಗಳ ಟೂರ್ನಿ ಆಯೋಜಿಸಲಾಗಿದೆ ಎಂದು ಕ್ಲಬ್​ ಅಧ್ಯಕ್ಷ ಬಿ.ಕೆ. ಶಿವರಾಮ್​ ಟೂರ್ನಿಯ ಟ್ರೋಫಿ ಬಿಡುಗಡೆಗೊಳಿಸಿ ತಿಳಿಸಿದರು.

ಟೂರ್ನಿಯಲ್ಲಿ 36 ಕಬಡ್ಡಿ ತಂಡಗಳು ಭಾಗವಹಿಸಲಿದ್ದು, 75 ಸಾವಿರ ರೂ. ಪ್ರಥಮ, 50 ಸಾವಿರ ರೂ. ದ್ವೀತಿಯ ಬಹುಮಾನ ವಿತರಿಸಲಾಗುವುದು. 3 ಮತ್ತು 4ನೇ ಸ್ಥಾನ ಪಡೆದ ತಂಡಗಳು ತಲಾ 25 ಸಾವಿರ ರೂ ಪಡೆಯಲಿವೆ. ಉತ್ತಮ ಆಟಗಾರ, ದಾಳಿಗಾರ, ಆಲ್ರೌಂಡರ್​, ರೈಡರ್​ಗಳಿಗೆ ತಲಾ 5 ಸಾವಿರ ರೂ. ಬಹುಮಾನ ನೀಡಲಾಗುತ್ತದೆ.
ಡಿ. 12ರ ಸಂಜೆ 6ಗಂಟೆಗೆ ಉದ್ಘಾಟನೆಯನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣರವರು, ಧಾರ್ಮಿಕ ದತ್ತಿ ಇಲಾಖೆ ಸಮಿತಿ ಸದಸ್ಯ ಕೆ.ಎಂ.ನಾಗರಾಜ್, ಶಾಸಕರಾದ ಡಾ. ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನಂ ನಾಯ್ಡು, ಮಾಜಿ ಮಹಾಪೌರ ಜೆ.ಹುಚ್ಚಪ್ಪ, ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಹೊನ್ನಪ್ಪಗೌಡ, ವಸಂತ ಚಿನ್ನಸ್ವಾಮಿರೆಡ್ಡಿ, ಆಶಾ ಸೋಮಶೇಖರ್ ಅವರು ಮಾಡಲಿದ್ದಾರೆ.
ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕ ಮುನಿರತ್ನರವರು, ಗುತ್ತಿಗೆದಾರ ಚಿನ್ನಸ್ವಾಮಿರಾಜುರವರು, ಯಂಗ್ ಸ್ಟರ್ಸ್ ಕಬಡ್ಡಿ ಕ್ಲಬ್‌ನ ಸಂಸ್ಥಾಪಕ ಮಣಿ, ಹಾಲಿ ಕಾರ್ಯದರ್ಶಿ ಅವರ ಸಹೋದ್ಯೋಗಿಗಳಾದ ರಾಚಯ್ಯ, ಕೈಲಾಸ್‌ನಾಥ್‌ ಮಿಶ್ರ, ರತ್ನಾಕರ, ಮುನಿರತ್ನ (ನೈನಿ), ಮುನಿರತ್ನ (ಐಟಿಐ),ನರಸಯ್ಯ,(ಕುಳ್ಳ), ರಾಜಗೋಪಾಲ ರೆಡ್ಡಿ,ನಾ. ವೆಂಕಟೇಶ್, ನರಸಿಂಹ, ನಾಗಭೂಷಣ್ ದಾಮೋಧರ ಕುಲಕರ್ಣಿ, ಸಿದ್ದಾರೆಡ್ಡಿ,ಶ್ರೀನಿವಾಸ ಪ್ರಭುಕೃಷ್ಣರೆಡ್ಡಿ ಮಣಿ (ಭೂಸಿ), ರಾಜೇಂದ್ರ ರಾಜು, ಉದಯ್ ಶಂಕರ್, ಚಂದ್ರ ರೆಡ್ಡಿ. ಚಂದ್ರಶೇಖರ್ ನಾಯ್ಡು. ಜಗನಾಥರೆಡ್ಡಿ ಇನ್ನು ಮುಂತಾದ ಹಿರಿಯ ಮತ್ತು ಕಿರಿಯ ಕಬಡ್ಡಿ ಆಟಗಾರರು ಯಂಗ್‌ ಸ್ಟರ್ಸ್ ಕಬಡ್ಡಿ ಕ್ಲಬ್‌ಗೆ ಶ್ರಮಿಸಿರುತ್ತಾರೆ. ಇದಲ್ಲದೆ ಯಂಗ್‌ಸ್ಟರ್ಸ್ ಕಬಡ್ಡಿ ಕ್ಲಬ್‌ನ ಏಳಿಗೆಯಲ್ಲಿ ಬೆಂಗಳೂರು ಅರುಣ ಸ್ಪೋರ್ಟ್ಸ್ ಕ್ಲಬ್ ಹಾಗೂ ಕಾಡು ಮಲ್ಲೇಶ್ವರ ಗೆಳೆಯರ ಬಳಗ ಪ್ರಮುಖ ಪಾತ್ರ ವಹಿಸಿರುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net