ಭಾರತಕ್ಕೆ ಸ್ಟಾರ್ಕ್ ಶಾಕ್, ಆಸೀಸ್ ಮೇಲುಗೈ: ಮತ್ತೆ ಮಿಂಚಿದ ನಿತೀಶ್ ಕುಮಾರ್

New Project (1)
Published on

ಅಡಿಲೇಡ್: ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಪ್ರವಾಸಿ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಎರಡನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದ ಮೊದಲ ದಿನ ಆಸ್ಟ್ರೇಲಿಯನ್ನರಿಗೆ ಮೇಲುಗೈ ಬಿಟ್ಟುಕೊಟ್ಟಿದೆ. ಪರ್ತ್ ಟೆಸ್ಟ್ ಗೆಲುವಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ತಂಡ, ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (48ಕ್ಕೆ 6) ಜೀವನಶ್ರೇಷ್ಠ ಬೌಲಿಂಗ್ ದಾಳಿಗೆ ತತ್ತರಿಸಿ ಸಾಧಾರಣ ಮೊತ್ತಕ್ಕೆ ಕುಸಿಯಿತು. ಇದಕ್ಕೆ ಉತ್ತರವಾಗಿ ಯುವ ಬ್ಯಾಟರ್ ನಾಥನ್ ಮೆಕ್‌ಸ್ವೀನಿ (38* ರನ್, 97 ಎಸೆತ, 6 ಬೌಂಡರಿ) ಹಾಗೂ ಅನುಭವಿ ಮಾರ್ನಸ್ ಲಬುಶೇನ್ (20* ರನ್,67 ಎಸೆತ, 3 ಬೌಂಡರಿ) ದಿಟ್ಟ ಜತೆಯಾಟದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದ ಗೌರವ ಸಂಪಾದಿಸಿದೆ.

ಅಡಿಲೇಡ್ ಓವಲ್‌ನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತದ ಲೆಕ್ಕಾಚಾರ ನಿರೀಕ್ಷಿತ ರೀತಿಯಲ್ಲಿ ಲಿಸಲಿಲ್ಲ. 109 ರನ್‌ಗಳಿಗೆ ಅಗ್ರ 6 ಬ್ಯಾಟರ್‌ಗಳನ್ನು ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು. ಆಗ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ (42 ರನ್, 54 ರನ್, 3 ಬೌಂಡರಿ, 3 ಸಿಕ್ಸರ್) ಸಾಹಸದ ನಡುವೆಯೂ ಸ್ಟಾರ್ಕ್ ದಾಳಿಗೆ ನಲುಗಿದ ಭಾರತ ಅಂತಿಮವಾಗಿ ಡಿನ್ನರ್ ವಿರಾಮದ ವೇಳೆಗೆ 44.1 ಓವರ್‌ಗಳಲ್ಲಿ 180 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು.

ಬಳಿಕ ಇನಿಂಗ್ಸ್ ಆರಂಭಿಸಿದ ಆಸೀಸ್ ಸಾಧಾರಣ ಆರಂಭ ಪಡೆಯಿತು. ಎಡಗೈ ಬ್ಯಾಟರ್ ಉಸ್ಮಾನ್ ಖವಾಜ (13) ವಿಕೆಟ್ ಕಬಳಿಸಿದ ಬುಮ್ರಾ ಭಾರತಕ್ಕೆ ಮೊದಲ ಯಶಸ್ಸು ತಂದರು. ಆಗ ಜತೆಯಾದ ಮೆಕ್‌ಸ್ವೀನಿ ಹಾಗೂ ಮಾರ್ನಸ್ ಲಬುಶೇನ್ ಮುರಿಯದ 2ನೇ ವಿಕೆಟ್‌ಗೆ 133 ಎಸೆತಗಳಲ್ಲಿ 63 ರನ್ ಕಲೆಹಾಕಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದರೊಂದಿಗೆ ಆಸೀಸ್, ದಿನದಂತ್ಯಕ್ಕೆ 33 ಓವರ್‌ಗಳಲ್ಲಿ 1 ವಿಕೆಟ್‌ಗೆ 86 ರನ್ ಕಲೆಹಾಕಿದ್ದು, ಸದ್ಯ 94 ರನ್‌ಗಳ ಹಿನ್ನಡೆಯಲ್ಲಿದೆ. ಆಸೀಸ್ ಇನಿಂಗ್ಸ್‌ನ ವೇಳೆ ್ಲಡ್‌ಲೈಟ್ 2 ಬಾರಿ ಕೈಕೊಟ್ಟಿತು. ಶನಿವಾರ ಮೊದಲ ಅವಧಿಯಲ್ಲೇ ಆತಿಥೇಯರನ್ನು ನಿಯಂತ್ರಿಸಿ ಪಂದ್ಯದಲ್ಲಿ ಕಂಬ್ಯಾಕ್ ಮಾಡುವ ಸವಾಲು ರೋಹಿತ್ ಶರ್ಮ ಬಳಗದ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net