ಇಂದು ಮಹಾರಾಜ ಟ್ರೋಫಿ ಆಟಗಾರರ ಹರಾಜು: ರಿಟೇನ್​ ಆಟಗಾರರ ಪಟ್ಟಿ ಇಲ್ಲಿದೆ!, ಪಡಿಕ್ಕಲ್​, ಅಭಿನವ್​ಗೆ ಬೇಡಿಕೆ ನಿರೀಕ್ಷೆ,

New Project
Published on

ಬೆಂಗಳೂರು: ಆಗಸ್ಟ್​ 11ರಿಂದ 27ರವರೆಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಗೆ ಪೂರ್ವಭಾವಿಯಾಗಿ ಆಟಗಾರರ ಹರಾಜು ಪ್ರಕ್ರಿಯೆ ಮಂಗಳವಾರ ಖಾಸಗಿ ಹೋಟೆಲ್​ ನಡೆಯಲಿದೆ. ಸರಿಸುಮಾರು ಸಾವಿರ ಆಟಗಾರರು ಹರಾಜಿನಲ್ಲಿ ಅದೃಷ್ಟ ಪರೀಸಲಿದ್ದಾರೆ. ಈ ಬಾರಿ ಆರ್​ಸಿಬಿ ತಂಡದ ಐಪಿಎಲ್​ ಗೆಲುವಿಗೆ ಉಪಯುಕ್ತ ಕೊಡುಗೆ ನೀಡಿದ್ದ ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​, ಕಳೆದ ಆವೃತ್ತಿಯಲ್ಲಿ ಸಿಕ್ಸರ್​ ಮಳೆ ಸುರಿಸಿದ್ದ ಅಭಿನವ್​ ಮನೋಹರ್​, ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ ಹಾಗೂ ಚೇತನ್​ ಎಲ್​ಆರ್​ ಹರಾಜಿನಲ್ಲಿ ಹೆಚ್ಚಿನ ಬೇಡಿಕೆ ಪಡೆಯುವ ನಿರೀಕ್ಷೆ ಇದೆ.

ಹಾಲಿ ಚಾಂಪಿಯನ್​ ಮೈಸೂರು ವಾರಿಯರ್ಸ್​, ರನ್ನರ್​ಅಪ್​ ಬೆಂಗಳೂರು ಬ್ಲಾಸ್ಟರ್ಸ್​, ಹುಬ್ಬಳ್ಳಿ ಟೈಗರ್ಸ್​, ಶಿವಮೊಗ್ಗ ಲಯನ್ಸ್​, ಗುಲ್ಬರ್ಗಾ ಮಿಸ್ಟಿಕ್ಸ್​ ಹಾಗೂ ಮಂಗಳೂರು ಡ್ಯ್ರಾಗನ್ಸ್​ ಫ್ರಾಂಚೈಸಿಗಳ ನಡುವೆ ಆಟಗಾರರ ಖರೀದಿಗೆ ಪೈಪೋಟಿ ಏರ್ಪಡಲಿದೆ. ಹರಾಜಿಗೆ ಸಾವಿರ ಸನಿಹ ಆಟಗಾರರು ಹೆಸರು ನೋಂದಾಯಿಸಿದ್ದು, ಫ್ರಾಂಚೈಸಿಗಳ ಆಸಕ್ತಿ ಹಾಗೂ ಆದ್ಯತೆಯ ಮೇರೆಗೆ ಪಟ್ಟಿ ಪರಿಷ್ಕರಿಸುವ ಸಾಧ್ಯತೆಗಳಿವೆ. ಹರಾಜಿಗೆ ನೋಂದಾಯಿಸಲ್ಪಟ್ಟಿರುವ ಆಟಗಾರರನ್ನು ಎ, ಬಿ, ಸಿ ಹಾಗೂ ಡಿ ಎಂಬ 4 ಕೆಟಗರಿಯಲ್ಲಿ ವಿಂಗಡಿಸಲಾಗಿದೆ. ಹುಬ್ಬಳ್ಳಿ ಟೈಗರ್ಸ್​ ತಂಡ ಗರಿಷ್ಠ ಮೊತ್ತದೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದ್ದು, ಎ ಕೆಟಗರಿಯಲ್ಲಿ ಟೀಮ್​ ಇಂಡಿಯಾ ಮತ್ತು ಐಪಿಎಲ್​ನಲ್ಲಿ ಆಡಿರುವ ಆಟಗಾರರಿದ್ದಾರೆ. ಅಂದರೆ ಕಳೆದ ಆವೃತ್ತಿಯ 2ನೇ ಗರಿಷ್ಠ ರನ್​ ಸ್ಕೋರರ್​ ಅಭಿನವ್​ ಮನೋಹರ್​, ಮನೀಷ್​ ಪಾಂಡೆ, ದೇವದತ್​ ಪಡಿಕ್ಕಲ್​, ಶ್ರೇಯಸ್​ ಗೋಪಾಲ್​, ಕೆ. ಗೌತಮ್​ ಸ್ಥಾನ ಪಡೆದಿದ್ದಾರೆ.

ದೇಶೀಯ ಟೂರ್ನಿಗಳಲ್ಲಿ (ವಿಜಯ್​ ಹಜಾರೆ, ರಣಜಿ ಟ್ರೋಫಿ, ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ) ಆಡಿರುವ ಆಟಗಾರರು ಬಿ ಕೆಟಗರಿಯಲ್ಲಿದ್ದು, ಕಳೆದ ಆವೃತ್ತಿಯ ದುಬಾರಿ ಆಟಗಾರ ಚೇತನ್​ ಎಲ್​ಆರ್​, ವಿಧ್ಯಾದರ್​ ಪಾಟೀಲ್​, ನಿಕಿನ್​ ಜೋಸ್​, ಕೆವಿ ಸಿದ್ದಾರ್ಥ್​, ದರ್ಶನ್​ ಎಂಬಿ, ರೋಹನ್​ ಪಾಟೀಲ್​ ಪ್ರಮುಖರು. ಜೂನಿಯರ್​ ವಿಭಾಗದ ಸಿ ಕೆಟಗರಿಯಲ್ಲಿ ಎಲ್​ಆರ್​ ಕುಮಾರ್​, ಸಮರ್ಥ ನಾಗಾರಾಜ್​, ದಿಗ್ಗಜ ಕ್ರಿಕೆಟಿಗ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ದ್ರಾವಿಡ್​, ಹರ್ಷಿಲ್​ ಧರ್ಮಾನಿ ಅವರಂಥ ಉದಯೋನ್ಮುಖ ತಾರೆಗಳಿದ್ದಾರೆ. ಕೆಎಸ್​ಸಿಎಯಲ್ಲಿ ಹೆಸರು ನೋಂದಾಯಿಸಿರುವ ಆಟಗಾರರು ಡಿ ಕೆಟಗರಿಯಲ್ಲಿ ಇರಲಿದ್ದಾರೆ.

ಹರಾಜಿನಲ್ಲಿ ಪ್ರತಿ ಫ್ರಾಂಚೈಸಿ ಕನಿಷ್ಠ 16ರಿಂದ ಗರಿಷ್ಠ 18 ಆಟಗಾರರನ್ನು ಒಳಗೊಂಡ ತಂಡವನ್ನು ಕಟ್ಟಲು ಅವಕಾಶವಿದೆ. ಪ್ರತಿ ಕೆಟಗರಿಯಿಂದ ಕನಿಷ್ಠ ಇಬ್ಬರು ಆಟಗಾರರನ್ನುಫ್ರಾಂಚೈಸಿಗಳು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಿದೆ. ಆಟಗಾರರ ರಿಟೇನ್​ ಬಳಿಕ ತಲಾ 50 ಲಕ್ಷ ರೂ. ಬಜೆಟ್​ನಲ್ಲಿ ಹುಬ್ಬಳ್ಳಿ ಟೈಗರ್ಸ್​ ₹41.50 ಲಕ್ಷ, ಮಂಗಳೂರು ಡ್ರಾಗನ್ಸ್​ ₹37.70 ಲಕ್ಷ, ಮೈಸೂರು ವಾರಿಯರ್ಸ್​ ₹36.50 ಲಕ್ಷ, ಶಿವಮೊಗ್ಗ ಲಯನ್ಸ್​ ₹30.80 ಲಕ್ಷ, ಬೆಂಗಳೂರು ಬ್ಲಾಸ್ಟರ್ಸ್​ ₹28.40 ಲಕ್ಷ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್​ ₹24.05 ಲಕ್ಷ ಉಳಿಸಿಕೊಂಡಿವೆ.

*ಹರಾಜು ಪ್ರಕ್ರಿಯೆ ಆರಂಭ: ಬೆಳಗ್ಗೆ 10.00

*ನೇರಪ್ರಸಾರ:  ಫ್ಯಾನ್​ ಕೋಡ್​

ಸ್ಟಾರ್​ ಆಟಗಾರರು

ಮನೀಷ್​ ಪಾಂಡೆ, ದೇವದತ್​ ಪಡಿಕ್ಕಲ್​, ಶ್ರೇಯಸ್​ ಗೋಪಾಲ್​, ಅಭಿನವ್​ ಮನೋಹರ್​, ಚೇತನ್​ ಎಲ್​.ಆರ್​, ಕೆ.ಗೌತಮ್​, ಅನೀಶ್​ ಕೆವಿ, ನಿಕಿನ್​ ಜೋಸ್​, ವಿದ್ವತ್​ ಕಾವೇರಪ್ಪ, ರೋನಿತ್​ ಮೋರೆ.

ರಿಟೇನ್​ ಆಟಗಾರರು:

ಮೈಸೂರು ವಾರಿಯರ್ಸ್​: ಕರುಣ್​ ನಾಯರ್​ (6.8 ಲಕ್ಷ ರೂ.), ಪ್ರಸಿದ್ಧ ಕೃಷ್ಣ (2 ಲಕ್ಷ ರೂ.), ಕಾರ್ತಿಕ್​ ಎಸ್​ಯು (50 ಸಾವಿರ ರೂ.), ಕಾರ್ತಿಕ್​ ಸಿಎ (4.2 ಲಕ್ಷ ರೂ.).

ಬೆಂಗಳೂರು ಬ್ಲಾಸ್ಟರ್ಸ್​: ಮಯಾಂಕ್​ ಅಗರ್ವಾಲ್​ (14 ಲಕ್ಷ ರೂ.), ಶುಭಾಂಗ್​ ಹೆಗ್ಡೆ (4.3 ಲಕ್ಷ ರೂ.), ಸೂರಜ್​ ಅಹುಜಾ (1 ಲಕ್ಷ ರೂ.), ನವೀನ್​ ಎಂಜಿ(2.3 ಲಕ್ಷ ರೂ.)

ಹುಬ್ಬಳ್ಳಿ ಟೈಗರ್ಸ್​ : ಮನ್ವಂತ್​ ಕುಮಾರ್​ ಎಲ್​ (1 ಲಕ್ಷ ರೂ.), ಶ್ರೀಜಿತ್​ ಕೆಎಲ್​ (2.1 ಲಕ್ಷ ರೂ.), ಕಾರ್ಯಪ್ಪ ಕೆಸಿ (4.2 ಲಕ್ಷ ರೂ), ಕಾರ್ತಿಕೇಯ ಕೆಪಿ (1.2 ಲಕ್ಷ ರೂ.)

ಗುಲ್ಬರ್ಗಾ ಮಿಸ್ಟಿಕ್ಸ್​: ಲವನೀತ್​ ಸಿಸೋಡಿಯಾ (7.2 ಲಕ್ಷ ರೂ.), ಪ್ರವಿಣ್​ ದುಬೆ (6.8 ಲಕ್ಷ ರೂ.), ವೈಶಾಕ್​ (8.8 ಲಕ್ಷ ರೂ.), ಸ್ಮರಣ್​ ಆರ್​. (3.15 ಲಕ್ಷ ರೂ.)

ಶಿವಮೊಗ್ಗ ಲಯನ್ಸ್​: ಕೌಶಿಕ್​ ವಿ (5.9 ಲಕ್ಷ ರೂ.), ನಿಹಾಲ್​ ಉಳ್ಳಾಲ (2.1 ಲಕ್ಷ ರೂ.), ಹಾರ್ದಿಕ್​ ರಾಜ್​ (5.8 ಲಕ್ಷ ರೂ.), ಅವಿನಾಶ್​ ಡಿ(5.4 ಲಕ್ಷ ರೂ.)

ಮಂಗಳೂರು ಡ್ರಾಗನ್ಸ್​: ಅಭಿಲಾಷ್​ ಶೆಟ್ಟಿ (6.3 ಲಕ್ಷ ರೂ.), ಮ್ಯಾಕ್ನೀಲ್​ ನೊರೊನ್ಹಾ (5 ಲಕ್ಷ ರೂ.), ಪಾರಸ್​ ಗುರ್ಬಕ್ಷ್​ ಆರ್ಯ (0.5 ಲಕ್ಷ ರೂ.), ಲೋಚನ್​ ಎಸ್​ ಗೌಡ (50 ಸಾವಿರ ರೂ.)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net