ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಹಾಲಿ ಋತುವಿನ ಶ್ರೇಷ್ಠ ನಿರ್ವಹಣೆ ತೋರಿದ ನೀರಜ್‌: ಮುಂದಿನ ಸ್ಪರ್ಧೆ ಯಾವಾಗ?

New-Project-2-6
Published on

ಲೌಸನ್ನೆ: ಹಾಲಿ ವಿಶ್ವ ಚಾಂಪಿಯನ್ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಗುರುವಾರ ತಡರಾತ್ರಿ ನಡೆದ ಪ್ರತಿಷ್ಠಿತ ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಹಾಲಿ ಋತುವಿನ ವೈಯಕ್ತಿಕ ಶ್ರೇಷ್ಠ ಎಸೆತದ ನಡುವೆಯೂ ನೀರಜ್ ಕಳೆದ ಬಾರಿಯ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ವಿಲರಾದರು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಸ್ವಿಜರ್ಲೆಂಡ್‌ನಲ್ಲಿಯೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಎರಡು ಬಾರಿಯ ವಿಶ್ವ ಚಾಂಪಿಯನ್, ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗ್ರೆನೇಡದ ಆಂಡರ್‌ಸನ್ ಪೀಟರ್ಸ್‌ ಅಗ್ರಸ್ಥಾನದೊಂದಿಗೆ ಕೂಟದ ವಿಜೇತರೆನಿಸಿದರು.

26 ವರ್ಷದ ನೀರಜ್ ಚೋಪ್ರಾ ದೀರ್ಘಕಾಲದ ತೊಡೆಸಂದು ಗಾಯದ ಸಮಸ್ಯೆಯ ನಡುವೆಯೂ ಸ್ಪರ್ಧೆಯಲ್ಲಿ ಕಣಕ್ಕಿಳಿದರು. ಆರಂಭಿಕ ಸುತ್ತುಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದರು. ಪ್ಯಾರಿಸ್‌ನಲ್ಲಿ ರಜತ ಪದಕಕ್ಕೆ ಕೊರಳೊಡ್ಡಿರುವ ನೀರಜ್, ಮೊದಲ ಪ್ರಯತ್ನದಲ್ಲಿ 82.10 ಮೀಟರ್ ದೂರದ ಎಸೆತದೊಂದಿಗೆ ಸ್ಪರ್ಧೆ ಆರಂಭಿಸಿದರು. 2ನೇ ಪ್ರಯತ್ನದಲ್ಲಿ 83.21 ಮೀಟರ್, 3ನೇ ಪ್ರಯತ್ನದಲ್ಲಿ 83.13 ಮೀಟರ್ ಹಾಗೂ 4ನೇ ಯತ್ನದಲ್ಲಿ 82.24 ಮೀಟರ್ ದೂರದ ಎಸೆತದೊಂದಿಗೆ ಎಂಟು ಸ್ಪರ್ಧಿಗಳ ನಡುವೆ 4ನೇ ಸ್ಥಾನದಲ್ಲಿ ಉಳಿದರು.

ಇದರೊಂದಿಗೆ ಆರನೇ ಹಾಗೂ ಅಂತಿಮ ಎಸೆತದ ಅವಕಾಶ ಪಡೆಯಲು ಅಗ್ರ 3ರಲ್ಲಿ ಸ್ಥಾನ ಪಡೆಯುವ ಒತ್ತಡಕ್ಕೆ ಸಿಲುಕಿದ ನೀರಜ್, ಐದನೇ ಯತ್ನದಲ್ಲಿ 85.58 ಮೀಟರ್ ಭರ್ಜಿ ಎಸೆತದೊಂದಿಗೆ ಮೂರನೇ ಸ್ಥಾನಕ್ಕೇರಿದರು. ಇದರೊಂದಿಗೆ ಅಗ್ರಸ್ಥಾನಕ್ಕೆ ನೀರಜ್, ಆಂಡರ್‌ಸನ್ ಪೀಟರ್ಸ್‌ ಹಾಗೂ ಜೂಲಿಯನ್ ವೆಬರ್ ನಡುವೆ ಅಂತಿಮ ಸುತ್ತಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತು.

ಮೊದಲ ಎಸೆತದಿಂದಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದ ಪೀಟರ್ಸ್‌, ಅಂತಿಮ ಪ್ರಯತ್ನದಲ್ಲಿ 90.61 ಮೀಟರ್ ದೂರದ ಎಸೆತದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡರೆ, ಅವಳಿ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಅಂತಿಮ ಯತ್ನದಲ್ಲಿ 89.49 ಮೀಟರ್ ದೂರದ ಎಸೆತದೊಂದಿಗೆ 2ನೇ ಸ್ಥಾನ ಪಡೆದುಕೊಂಡರು. ಈ ಮೂಲಕ 90 ಮೀಟರ್ ಎಸೆತದ ಕಾಯುವಿಕೆಯೂ ಮುಂದುವರಿಯಿತು. ಜರ್ಮನಿಯ ಜೂಲಿಯನ್ ವೆಬರ್ 3ನೇ ಯತ್ನದಲ್ಲಿ ದಾಖಲಿಸಿದ 87.08 ಮೀಟರ್ ಎಸೆತದೊಂದಿಗೆ ಮೂರನೇ ಸ್ಥಾನ ಗಿಟ್ಟಿಸಿಕೊಂಡರು.

ಒಲಿಂಪಿಕ್ಸ್ ಜಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಂ ಗೈರಿನಲ್ಲಿ ಆಂಡರ್‌ಸನ್ ಪೀಟರ್ಸ್‌ ನೂತನ ಕೂಟದಾಖಲೆ ನಿರ್ಮಿಸಿದರು. 2015ರಲ್ಲಿ ಕೆಶೊಂಮ್ ವಾಲ್ಕಟ್ 90.16 ಮೀಟರ್ ದೂರದ ಎಸೆತ ಹಿಂದಿನ ಕೂಟದ ಶ್ರೇಷ್ಠ ಸಾಧನೆ ಆಗಿತ್ತು. ಆಂಡರ್‌ಸನ್ ಪೀಟರ್ಸ್ ಕಳೆದ ವರ್ಷದ ಕೂಟದಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಸೆ. 5ಕ್ಕೆ ಮುಂದಿನ ಸ್ಪರ್ಧೆ: ಲೌಸನ್ನೆ ಚರಣದಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಡೈಮಂಡ್ ಲೀಗ್ ಅಂಕಪಟ್ಟಿಯಲ್ಲಿ 15 ಅಂಕ ಸಂಪಾದಿಸಿದ ನೀರಜ್ ಜಂಟಿ ಮೂರನೇ ಸ್ಥಾನಕ್ಕೇರಿದರೆ, ಆಂಡರ್‌ಸನ್ ಪೀಟರ್ಸ್‌ 21 ಪಾಯಿಂಟ್‌ನೊಂದಿಗೆ ಮೊದಲ ಸ್ಥಾನ ಅಲಂಕರಿಸಿದ್ದಾರೆ. 16 ಅಂಕ ಕಲೆಹಾಕಿರುವ ಜೂಲಿಯನ್ ವೆಬರ್ ನಂತರದ ಸ್ಥಾನದಲ್ಲಿದ್ದು, ಅಗ್ರ 6 ಸ್ಥಾನ ಪಡೆಯುವ ಜಾವೆಲಿನ್ ಪಟುಗಳು ಸೆಪ್ಟೆಂಬರ್ 13-14ರಂದು ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ೈನಲ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ.

ಅದಕ್ಕೂ ಮುನ್ನ ಸೆ.5ರಂದು ಜ್ಯೂರಿಚ್ ಚರಣದ ಸ್ಪರ್ಧೆ ನಡೆಯಲಿದ್ದು, ನೀರಜ್ ಮತ್ತೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ಆದರೆ ಇನ್ನು ಒಂದು ಅಥವಾ ಎರಡು ಕೂಟದಲ್ಲಿ ಕಣಕ್ಕಿಳಿಯುವೇ ಎಂದಿರುವ ನೀರಜ್, ಬ್ರಸೆಲ್ಸ್‌ನಲ್ಲಿ ನಡೆಯಲಿರುವ ೈನಲ್‌ನಲ್ಲಿ ಕಣಕ್ಕಿಳಿಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 2018ರಿಂದಲೂ ಡೈಮಂಡ್ ಲೀಗ್‌ನಲ್ಲಿ ಸ್ಪರ್ಧಿಸುತ್ತಿರುವ ನೀರಜ್ ಪ್ರತಿ ಬಾರಿ ಕಣಕ್ಕಿಳಿದಾಗಲೂ ಅಗ್ರ 3ರಲ್ಲಿ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net