ಭಾರತದ ಕ್ರಿಕೆಟ್ ಸ್ಟೇಡಿಯಂವೊಂದಕ್ಕೆ ಫುಟ್‌ಬಾಲ್ ದಿಗ್ಗಜ ಡೀಗೋ ಮರಡೋನಾ ಹೆಸರು...!

maradona for web
Published on

ಕೋಲ್ಕತ: ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮಕ್ಕಿಂತಲ್ಲೂ ಪ್ರೀತಿಸುವ ಜನರಿದ್ದಾರೆ. ಅದೇ ಫುಟ್‌ಬಾಲ್ ಅಭಿಮಾನಿಗಳಿಗೇನು ಕಮ್ಮಿಯಿಲ್ಲ. ಮೊನ್ನೆ ನಿಧನರಾದ ವಿಶ್ವ ಫುಟ್‌ಬಾಲ್ ದಿಗ್ಗಜ ಅರ್ಜೆಂಟೀನಾದ ಡೀಗೋ ಮರಡೋನಾಗೆ ಭಾರತದಲ್ಲೂ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಮರಡೋನಾ ತಮ್ಮ ಜೀವತಾವಧಿಯಲ್ಲಿ ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. 2007ರಲ್ಲಿ ಮೊದಲ ಬಾರಿಗೆ ಕೋಲ್ಕತಕ್ಕೆ ಆಗಮಿಸಿದ್ದರು. ಕೋಲ್ಕತ ನಗರದ ಹೊರವಲಯದಲ್ಲಿರುವ ಬರಾಸತ್‌ನ ಆದಿತ್ಯ ಸ್ಕೂಲ್ ಆಫ್ ಸ್ಪೋರ್ಟ್ಸ್‌ಗೆ ಆಗಮಿಸಿದ್ದರು. ಇದರ ಸವಿ ನೆನಪಿಗಾಗಿ ಸ್ಟೇಡಿಯಂಗೆ ಮರಡೋನಾ ಹೆಸರಿಡಲಾಗಿದೆ. ಮರಡೋನಾ ಹೆಸರಿಟ್ಟು ಸ್ಟೇಡಿಯಂಗೆ ಮರು ನಾಮಕಾರಣ ಮಾಡಲಾಯಿತು.

ಫುಟ್‌ಬಾಲ್ ಸ್ಟೇಡಿಯಂ ಇದೀಗ ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್ ಸ್ಟೇಡಿಯಂ ಆಗಿ ಪರಿವರ್ತನೆಯಾಗಿದೆ. ಈಡನ್ ಗಾರ್ಡನ್ಸ್ ಮಾದರಿಯಲ್ಲಿ ಈ ಸ್ಟೇಡಿಯಂ ಅಭಿವೃದ್ಧಿಪಡಿಸಲಾಗಿದೆ. ಇದೀಗ ಮರಡೋನಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ‘ಡೀಗೋ ಮರಡೋನಾ ಆದಿತ್ಯ ಸ್ಕೂಲ್ ಆಫ್ ಸ್ಪೋರ್ಟ್ಸ್ ಕ್ರಿಕೆಟ್ ಸ್ಟೇಡಿಯಂ’ ಮರು ನಾಮಕರಣ ಮಾಡಲಾಗಿದೆ. ಇದರೊಂದಿಗೆ ವಿಶ್ವದಲ್ಲೇ ಕ್ರಿಕೆಟ್ ಸ್ಟೇಡಿಯಂವೊಂದಕ್ಕೆ ಫುಟ್‌ಬಾಲ್ ದಿಗ್ಗಜ ಹೆಸರು ಇಡಲಾಗಿದೆ ಎಂದು ಆದಿತ್ಯ ಗ್ರೂಪ್‌ನ ಅನಿರ್ಬನ್ ಆದಿತ್ಯ ತಿಳಿಸಿದ್ದಾರೆ. ಜತೆಗೆ ಮರಡೋನಾ ನೆನಪಿಗಾಗಿ ಕೆಲವೊಂದು ನೆನಪಿನ ಪರಿಕರಗಳು, ಜೆರ್ಸಿ, ಅವರು ನೀಡಿದ್ದ ಆಟೋಗ್ರಾಫ್ ಕೂಡ ಇಡಲಾಗಿದೆ.

2007ರ ಡಿಸೆಂಬರ್ 12 ರಂದು ಮರಡೋನಾ ಈ ಸ್ಟೇಡಿಯಂನಲ್ಲಿ ಪ್ರದರ್ಶನ ಪಂದ್ಯವಾಡಿದ್ದರು. ಇದಾದ ಬಳಿಕ 2012 ಹಾಗೂ 2017ರಲ್ಲಿ ಭಾರತಕ್ಕೆ ಆಗಮಿಸಿದ್ದರು. 1986ರಲ್ಲಿ ಅರ್ಜೆಂಟೀನಾ ಫುಟ್‌ಬಾಲ್ ತಂಡ ಮರಡೋನಾ ನಾಯಕತ್ವದಲ್ಲಿ ಫಿಫಾ ವಿಶ್ವಕಪ್ ಜಯಿಸಿತ್ತು. ಬುಧವಾರವಷ್ಟೇ ಹೃದಯಾಘಾತದಿಂದ ಮರಡೋನಾ ನಿಧನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net