ಒಲಿಂಪಿಕ್ ಟ್ರಯಾಥ್ಲಾನ್​ನಲ್ಲಿ ಮಿಂಚಿದ ಕನ್ನಡಿಗ ಶ್ರೀನಿವಾಸ್ ಪ್ರಭು

web triathlan
Published on

ಬೆಂಗಳೂರು : ಕರ್ನಾಟಕದ ಶ್ರೀನಿವಾಸ್ ಪ್ರಭು ಮುಂಡ್ಕೂರು ಆಗಸ್ಟ್ 23ರಂದು ಬೆಂಗಳೂರಿನಲ್ಲಿ ನಡೆದ "ಬಿಎಂಎಫ್ ಟ್ರಯಾಥ್ಲಾನ್-2025” ರಲ್ಲಿ ಒಲಿಂಪಿಕ್ ಟ್ರಯಾಥ್ಲಾನ್ ಸ್ಪರ್ಧೆಯನ್ನು ಯಶಸ್ವಿಯಾಗಿ ಮುಗಿಸಿ ಗಮನಸೆಳೆದಿದ್ದಾರೆ.

ಶ್ರೀನಿವಾಸ್ ಪ್ರಭು ಕಳೆದ ಜೂನ್​ನಲ್ಲಿ ಚೆನ್ನೈನಲ್ಲಿ ಸ್ಪ್ರಿಂಟ್ ಟ್ರಯಾಥ್ಲಾನ್​ನಲ್ಲಿ ಸ್ಪರ್ಧೆ ಮುಗಿಸಿದ್ದರು. ಇದೀಗ ಅದಕ್ಕಿಂತಲೂ ಒಂದು ಹಂತ ಕಠಿಣವಾದ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ವಿಶ್ವದ ಅತ್ಯಂತ ಕಠಿಣ ಕ್ರೀಡೆಗಳಲ್ಲಿ ಒಂದಾದ ಟ್ರಯಾಥ್ಲಾನ್​ನ ಒಲಿಂಪಿಕ್ ಟ್ರಯಾಥ್ಲಾನ್ ವಿಭಾಗವು ಸ್ಪ್ರಿಂಟ್ ಟ್ರಯಾಥ್ಲಾನ್​ಗಿಂತ ದುಪ್ಪಟ್ಟು ಈಜು, ಸೈಕ್ಲಿಂಗ್ ಮತ್ತು ಓಟವನ್ನು ಒಳಗೊಂಡಿದೆ. ಅಂದರೆ 1.5 ಕಿಲೋಮೀಟರ್ ಈಜು, 40 ಕಿಲೋಮೀಟರ್ ಸೈಕ್ಲಿಂಗ್ ಮತ್ತು 10 ಕಿಲೋಮೀಟರ್ ಓಟವನ್ನು ಒಳಗೊಂಡಿದೆ. ಇದು ದೈಹಿಕ ಕ್ಷಮತೆಗೆ ಅತ್ಯಂತ ಸವಾಲುದಾಯಕವಾಗಿರುತ್ತದೆ. 3 ಗಂಟೆ 55.15 ನಿಮಿಷಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ಒಟ್ಟಾರೆ 48ನೇ ಸ್ಥಾನ ಗಳಿಸಿದ ಅವರು, 45.05 ನಿಮಿಷಗಳಲ್ಲಿ ಈಜಿದರೆ, 1 ಗಂಟೆ 34.07 ನಿಮಿಷಗಳಲ್ಲಿ ಸೈಕ್ಲಿಂಗ್ ಮುಗಿಸಿದರು. ಅಂತಿಮವಾಗಿ 1 ಗಂಟೆ 27.49 ನಿಮಿಷಗಳಲ್ಲಿ ಓಟವನ್ನು ಪೂರ್ಣಗೊಳಿಸಿದರು.

ಬೆಂಗಳೂರಿನ 25 ವರ್ಷದ ಶ್ರೀನಿವಾಸ್ ಪ್ರಭು, ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದಾರೆ. ಈ ಮುನ್ನ ಭಾಗವಹಿಸಿದ ಮೊದಲ ಟ್ರಯಾಥ್ಲಾನ್​ನಲ್ಲೇ ಯಶಸ್ವಿಯಾಗಿ ಸ್ಪರ್ಧೆ ಮುಗಿಸಿದ ಹೆಗ್ಗಳಿಕೆ ಅವರದಾಗಿದೆ. ನವೆಂಬರ್​ನಲ್ಲಿ ಗೋವಾದಲ್ಲಿ ನಡೆಯಲಿರುವ ಐರನ್​ಮ್ಯಾನ್ ಸ್ಪರ್ಧೆಯಲ್ಲೂ ಭಾಗವಹಿಸಲು ಅವರು ಈಗ ಸಿದ್ಧತೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net