

ನವದೆಹಲಿ: ಭಾರತದ ಈಜು ಸ್ಪರ್ಧಿ ಶ್ರೀಹರಿ ನಟರಾಜ್, ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇಟಲಿಯ ರೋಮ್‌ನಲ್ಲಿ ನಡೆದ 58ನೇ ಸೆಟ್ಟೆ ಕೊಲಿ ಚಾಂಪಿಯನ್‌ಷಿಪ್‌ನ ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗವನ್ನು ಒಲಿಂಪಿಕ್ ಎ ದರ್ಜೆಯ ಸಮಯದಲ್ಲಿ ಪೂರೈಸಿದ್ದರು. 53.77 ಸೆಕೆಂಡ್‌ನಲ್ಲಿ ಶ್ರೀಹರಿ ಈ ದೂರ ಕ್ರಮಿಸಿದ್ದು, ಟೋಕಿಯೊ ಒಲಿಂಪಿಕ್ಸ್‌ಗೆ 54.90ಸೆಕೆಂಡ್ ಅರ್ಹತಾ ಸಮಯ ನಿಗದಿಪಡಿಸಲಾಗಿತ್ತು. ಶ್ರೀಹರಿ ನಟರಾಜ್ ಕ್ರಮಿಸಿದ ಸಮಯವನ್ನು ವಿಶ್ವ ಈಜು ಸಂಸ್ಥೆಯಾದ ಫಿನಾ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಟೋಕಿಯೊಗೆ ಟಿಕೆಟ್ ಗಿಟ್ಟಿಸಿಕೊಂಡರು.
ಇದಕ್ಕೂ ಮೊದಲು ಶನಿವಾರವಷ್ಟೇ ಭಾರತದ ಮತ್ತೋರ್ವ ಈಜುಪಟು ಸಾಜನ್ ಪ್ರಕಾಶ್ ಎ ದರ್ಜೆಯಲ್ಲಿ ಅರ್ಹತೆ ಪಡೆದುಕೊಂಡಿದ್ದರು. ಸಾಜನ್ ಪ್ರಕಾಶ್ 200 ಮೀಟರ್ ಬಟರ್ ಫ್ಲೈ ವಿಭಾಗದಲ್ಲಿ ಈ ಸಾಧನೆ ಮಾಡಿದ್ದರು. ‘ಶ್ರೀಹರಿ ನಟರಾಜ್ ಕ್ರಮಿಸಿರುವ ಸಮಯಕ್ಕೆ (53.77 ಸೆಕೆಂಡ್) ಫಿನಾ ಒಪ್ಪಿಗೆ ಸೂಚಿಸಿದೆ. ಇದೀಗ ಶ್ರೀಹರಿ ಸಾಜನ್ ಪ್ರಕಾಶ್ ಅವರನ್ನು ಕೂಡಿಕೊಳ್ಳಲಿದ್ದಾರೆ’ ಎಂದು ಭಾರತೀಯ ಈಜು ಫೆಡರೇಷನ್ ಟ್ವೀಟ್ ಮಾಡಿದೆ. ಬೆಂಗಳೂರಿನ 20 ವರ್ಷದ ಶ್ರೀಹರಿ ನಟರಾಜ್‌ಗೆ ಮೊದಲ ಒಲಿಂಪಿಕ್ಸ್ ಇದಾಗಿದ್ದು, ಇದಕ್ಕೂ ಮೊದಲು 2018ರ ಏಷ್ಯಾಡ್ ಹಾಗೂ ಯೂತ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಕೇರಳದ ಸಾಜನ್ ಪ್ರಕಾಶ್ 2016ರ ರಿಯೋ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದರು.