ಲಂಕಾ ಬೌಲರ್​ಗೆ ವಿಂಟೇಜ್​ ವಿರಾಟರೂಪ ತೋರಿದ ಕೊಹ್ಲಿ: ಮುಂದೈತೆ ಮಾರಿಹಬ್ಬ ಅಂದ್ರು ಫ್ಯಾನ್ಸ್​

Virat Kohli
Published on

ನವದೆಹಲಿ: ಕೊಲಂಬೋದಲ್ಲಿ ಬುಧವಾರ (ಆ.07) ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಮೂರು ಏಕದಿನ ಪಂದ್ಯಗಳ ಸರಣಿಯನ್ನು ಶ್ರೀಲಂಕಾ 0-2 ಅಂತರದಲ್ಲಿ ವಶಪಡಿಸಿಕೊಂಡಿದೆ. ಮೊದಲ ಏಕದಿನ ಪಂದ್ಯ ಟೈ ಆಗಿದ್ದರೆ, ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಲಂಕಾ ಆಟಗಾರರು ಭಾರತ ತಂಡದ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದರು.

ಇದಕ್ಕೂ ಮುನ್ನಾ ಲಂಕಾ ಪಡೆ ಟಿ20 ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡಿತ್ತು. ಆದರೆ, ಏಕದಿನ ಸರಣಿಯಲ್ಲಿ ಭಾರತಕ್ಕೆ ಶಾಕ್​ ನೀಡಿದೆ. ಭಾರತ ತಂಡ ಏಕದಿನ ಸರಣಿಯಲ್ಲಿ ಇಂತಹ ಫಲಿತಾಂಶವನ್ನು ಎಂದೂ ನಿರೀಕ್ಷೆ ಮಾಡಿರಲಿಲ್ಲ. ಸ್ಪಿನ್​ ಬೌಲಿಂಗ್​ ದಾಳಿಯನ್ನು ರೋಹಿತ್​ ಪಡೆ ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್ ಆಟಗಾರರು ಸ್ಪಿನ್‌ಗೆ ಹೇಗೆ ತತ್ತರಿಸುತ್ತಾರೋ ಹಾಗೆ ಭಾರತೀಯ ಕ್ರಿಕೆಟಿಗರ ಸ್ಥಿತಿಯೂ ಬದಲಾದಂತಿದೆ. ಲೆಜೆಂಡರಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಮೂರು ಇನ್ನಿಂಗ್ಸ್‌ಗಳಲ್ಲಿ ಸ್ಪಿನ್ನರ್‌ಗಳ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು.

ಅದೇನೇ ಇರಲಿ ಮೂರನೇ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋಲನ್ನು ಅನುಭವಿಸಿದ್ದು ಒಂದೆಡೆಯಾದರೆ, ಈ ಪಂದ್ಯದಲ್ಲಿ ಕುತೂಹಲಕಾರಿ ಘಟನೆಯೊಂದು ಸಹ ನಡೆದಿದೆ. ವಿಂಟೇಜ್​ ವಿರಾಟ್​ ಕೊಹ್ಲಿಯ ಪ್ರತಿರೊಪ ನಿನ್ನೆಯ ಪಂದ್ಯದಲ್ಲಿ ಬಂದು ಹೋಯಿತು. ಕೊಹ್ಲಿ ಹಾಗೂ ಶ್ರೀಲಂಕಾ ಬೌಲರ್ ಅಸಿತಾ ಫೆರ್ನಾಂಡೋ ನಡುವೆ ಮಾತಿನ ಸಮರ ನಡೆದಿದೆ. ಅಸಿತಾ ಫೆರ್ನಾಂಡೋ ಎಸೆದ ಇನಿಂಗ್ಸ್‌ನ 5ನೇ ಓವರ್‌ನ ಕೊನೆಯ ಎಸೆತವನ್ನು ಕೊಹ್ಲಿ ರಕ್ಷಣಾತ್ಮಕವಾಗಿ ಆಟವಾಡಿದರು. ಈ ವೇಳೆ ಫರ್ನಾಂಡೋ, ವಿರಾಟ್ ಕೊಹ್ಲಿಯನ್ನು ಗುರಾಯಿಸಿದಲ್ಲದೆ, ಕೊಹ್ಲಿ ಕೆರಳಿಸುವಂತೆ ಏನೋ ಮಾತನಾಡಿಕೊಂಡರು.

ಮೊದ ಮೊದಲು ಕೂಲ್ ಆಗಿಯೇ ಇದ್ದ ಕೊಹ್ಲಿ, ಫರ್ನಾಂಡೋ ಏನೋ ಮಾತನಾಡಿದನ್ನು ನೋಡಿ ತಮ್ಮ ಹಳೆಯ ರೂಪವನ್ನು ಹೊರಗೆಳೆದರು. ಫರ್ನಾಂಡೋ ಕಡೆ ತುಂಬಾ ಸೀರಿಯಸ್​ ಆಗಿ ನೋಡಿ ಕೊಹ್ಲಿ ಕೂಡ ಮಾತಿನಲ್ಲಿ ಏನೋ ಟಾಂಗ್​ ಕೊಟ್ಟರು. ಬಳಿಕ ರೋಹಿತ್ ಜೊತೆ ಸೇರಿ ಏನೋ ಹೇಳಿ ನಕ್ಕಿದರು. ವಿರಾಟ್ ಕೊಹ್ಲಿಯ ಈ ರೂಪವನ್ನು ನೋಡಿದ ಅಭಿಮಾನಿಗಳು ವಿಂಟೇಜ್ ವಿರಾಟ್ ಹಾಗೆ ಬಂದು ಹಾಗೆ ಹೋದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಫರ್ನಾಂಡೋಗೆ ಕೊಹ್ಲಿ ತಕ್ಕ ಉತ್ತರ ಕೊಟ್ಟೇ ಕೊಡುತ್ತಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಸರಣಿಯಲ್ಲಿ ಕೊಹ್ಲಿ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಅವರ ಮಟ್ಟಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಲಿಲ್ಲ. ಹೀಗಾಗಿ ಕೊಹ್ಲಿ ಹಲವರ ಟೀಕೆಗೂ ಗುರಿಯಾಗಿದ್ದಾರೆ. ಆದರೆ, ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ ಎಂದು ಅಭಿಮಾನಿಗಳು ಕೊಹ್ಲಿ ಪರ ಬ್ಯಾಟ್​ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net