

ಕೊಲಂಬೊ: ಆರಂಭಿಕ ಅವಿಷ್ಕಾ ಫೆರ್ನಾಂಡೊ (118ರನ್, 115 ಎಸೆತ, 10 ಬೌಂಡರಿ, 2 ಸಿಕ್ಸರ್) ಭರ್ಜರಿ ಶತಕದ ನೆರವಿನಿಂದ ಶ್ರೀಲಂಕಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ 14 ರನ್‌ಗಳಿಂದ ಸೋಲುಣಿಸಿದೆ. ಇದರಿಂದ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಶ್ರೀಲಂಕಾ, ಐಸಿಸಿ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನಲ್ಲಿ 10 ಅಂಕವನ್ನೂ ಸಂಪಾದಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಲಂಕಾ, 9 ವಿಕೆಟ್ 300 ರನ್ ಪೇರಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ 6 ವಿಕೆಟ್‌ಗೆ 286 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೇ 3 ಓವರ್‌ಗಳಲ್ಲಿ 38 ರನ್ ಗಳಿಸಬೇಕಾಗಿದ್ದ ದಕ್ಷಿಣ ಆಫ್ರಿಕಾಕ್ಕೆ ಇನಿಂಗ್ಸ್‌ನ 48 ಮತ್ತು 49ನೇ ಓವರ್‌ನಲ್ಲಿ ಚಮೀರ ಮತ್ತು ಕರುಣರತ್ನೆ ಕ್ರಮವಾಗಿ 6 ಮತ್ತು 5 ರನ್ ಮಾತ್ರ ಬಿಟ್ಟುಕೊಟ್ಟರು. ಇದರಿಂದ ಕೊನೇ ಓವರ್‌ನಲ್ಲಿ 27 ರನ್ ಗಳಿಸಬೇಕಾಗಿದ್ದ ಆಫ್ರಿಕಾ, 12 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಸರಣಿಯ 2ನೇ ಪಂದ್ಯ ಶನಿವಾರ ನಡೆಯಲಿದೆ.
ಶ್ರೀಲಂಕಾ: 9 ವಿಕೆಟ್‌ಗೆ 300 (ಅವಿಷ್ಕಾ ಫೆರ್ನಾಂಡೊ 118, ಭಾನುಕಾ 27, ಧನಂಜಯ ಡಿಸಿಲ್ವ 44, ಅಸಲಂಕಾ 72, ರಬಾಡ 66ಕ್ಕೆ 2, ಮಹಾರಾಜ್ 30ಕ್ಕೆ 2), ದಕ್ಷಿಣ ಆಫ್ರಿಕಾ: 6 ವಿಕೆಟ್‌ಗೆ 286 (ಮಾರ್ಕ್ರಮ್ 96, ಬವುಮಾ 38, ಡುಸೆನ್ 59, ಕ್ಲಾಸೆನ್ 36, ಅಖಿಲ ಧನಂಜಯ 65ಕ್ಕೆ 2, ಹಸರಂಗ 52ಕ್ಕೆ 1, ಕರುಣರತ್ನೆ 18ಕ್ಕೆ 1, ಜಯವಿಕ್ರಮ 47ಕ್ಕೆ 1).