

ಗಾಲೆ: ಸಂಘಟಿತ ಬ್ಯಾಟಿಂಗ್ ನಿರ್ವಹಣೆಯಿಂದ ಪ್ರವಾಸಿ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಎದುರು ಮೊದಲ ಇನಿಂಗ್ಸ್‌ನಲ್ಲಿ ಅಲ್ಪಮುನ್ನಡೆ ಸಾಧಿಸಿದೆ. ಮಾಜಿ ನಾಯಕ ಆರಂಭಿಕ ದಿಮತ್ ಕರುಣರತ್ನೆ (83 ರನ್, 127 ಎಸೆತ, 6 ಬೌಂಡರಿ) ಹಾಗೂ ದಿನೇಶ್ ಚಾಂಡಿಮಲ್ (61) ಅರ್ಧಶತಕಗಳ ನೆರವಿನಿಂದ ಲಂಕಾ ಮೂರನೇ ದಿನದಂತ್ಯಕ್ಕೆ ಸುಸ್ಥಿಯಲ್ಲಿದೆ.
ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಲಂಕಾದ ಮೊದಲ ಇನಿಂಗ್ಸ್‌ನಲ್ಲಿ 349 ರನ್ ಹಾಕಿದರೆ, ಪಂದ್ಯದ 3ನೇ ದಿನವಾದ ಶುಕ್ರವಾರ 4 ವಿಕೆಟ್‌ಗೆ 255 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ನ್ಯೂಜಿಲೆಂಡ್ 90.5 ಓವರ್‌ಗಳಲ್ಲಿ 340 ರನ್‌ಗಳಿಗೆ ಅಲೌಟ್ ಆಯಿತು. 35 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ 2ನೇ ಸರದಿ ಆರಂಭಿಸಿದ ಲಂಕಾಕ್ಕೆ ಆರಂಭಿಕ ದಿಮತ್ ಕರುಣರತ್ನೆ ಹಾಗೂ ದಿನೇಶ್ ಚಾಂಡಿಮಲ್ ಜೋಡಿ 2ನೇ ವಿಕೆಟ್‌ಗೆ 268 ಎಸೆತಗಳಲ್ಲಿ 147 ರನ್ ಪೇರಿಸಿ ಮುನ್ನಡೆ ಒದಗಿಸಿತು. ದಿನದಂತ್ಯಕ್ಕೆ 72 ಓವರ್‌ಗಳಲ್ಲಿ 4 ವಿಕೆಟ್‌ಗೆ 237 ರನ್‌ಗಳಿಸಿದ್ದು, 202 ರನ್‌ಗಳ ಮುನ್ನಡೆಯಲ್ಲಿದೆ.
ಶ್ರೀಲಂಕಾ: 305 ಹಾಗೂ 4 ವಿಕೆಟ್‌ಗೆ 237 (ನಿಸ್ಸಂಕ 2, ಕರುಣರತ್ನೆ 83, ಚಾಂಡಿಮಲ್ 61, ಮ್ಯಾಥ್ಯೂಸ್ 34*, ಕಮಿಂದು 13*,ಧನಂಜಯ 34*, ಓ ರೂರ್ಕೆ 37ಕ್ಕೆ 3). ನ್ಯೂಜಿಲೆಂಡ್: 90.5 ಓವರ್‌ಗಳಲ್ಲಿ 340 (ಡೆರಿಲ್ 57, ಗ್ಲೆನ್ ಫಿಲಿಪ್ಸ್ 49*, ಸ್ಯಾಂಟ್ನರ್ 2, ಜಯಸೂರ್ಯ 136ಕ್ಕೆ 4, ಮೆಂಡಿಸ್ 101ಕ್ಕೆ 3).
ಇಂದು ವಿಶ್ರಾಂತಿ ದಿನ: ಲಂಕಾ-ಕಿವೀಸ್ ನಡುವಿನ ಮೊದಲ ಟೆಸ್ಟ್‌ನಲ್ಲಿ ಶನಿವಾರ ವಿಶ್ರಾಂತಿ ದಿನವಾಗಿದೆ. ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಿಗದಿಯಾಗಿರುವುದು ಇದಕ್ಕೆ ಕಾರಣ. ಲಂಕಾದ ಎಲ್ಲ ಆಟಗಾರರು ಮತ ಚಲಾಯಿಸಲು ತೆರಳಲಿದ್ದು, ಪಂದ್ಯದ ನಾಲ್ಕನೇ ದಿನದಾಟಕ್ಕೆ ಮುನ್ನ ಅಂದರೆ ಭಾನುವಾರ ಬೆಳಗ್ಗೆ ಆಟಗಾರರು ಮರಳಿ ಒಗ್ಗೂಡಲಿದ್ದಾರೆ.
ಲಂಕಾದ ಲಹಿರು ಕುಮಾರ ಮತ ಚಲಾಯಿಸಲು ಗರಿಷ್ಠ 225 ಕಿ.ಮೀ ದೂರ ಪ್ರಯಾಣ ಬೆಳೆಸಲಿದ್ದಾರೆ. 16 ವರ್ಷಗಳ ಬಳಿಕ ಟೆಸ್ಟ್ ಪಂದ್ಯ 6 ದಿನಗಳ ಕಾಲ ನಡೆಯುತ್ತಿದೆ. 2008ರಲ್ಲಿ ಲಂಕಾ-ಬಾಂಗ್ಲಾದೇಶ ನಡುವಿನ ಟೆಸ್ಟ್ ವೇಳೆಯೂ ಬಾಂಗ್ಲಾದೇಶ ಅಸೆಂಬ್ಲಿ ಚುನಾವಣೆಯಲ್ಲಿ ವಿಶ್ರಾಂತಿ ದಿನ ನಿಗದಿಯಾಗಿತ್ತು.