

ಗಾಲೆ: ಪ್ರಭಾತ್ ಜಯಸೂರ್ಯ (42ಕ್ಕೆ 6) ಹಾಗೂ ನಿಶಾನ್ ಪೀರಿಸ್ (91ಕ್ಕೆ 3) ಸ್ಪಿನ್ ದಾಳಿಗೆ ತತ್ತರಿಸಿದ ಪ್ರವಾಸಿ ನ್ಯೂಜಿಲೆಂಡ್ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಎದುರು ಇನಿಂಗ್ಸ್ ಸೋಲಿನ ಸುಳಿಯಲ್ಲಿ ಸಿಲುಕಿದೆ. ಶನಿವಾರ ಒಂದೇ ದಿನ ಒಟ್ಟು 13 ವಿಕೆಟ್ ಉರುಳಿತು. ಪಂದ್ಯದಲ್ಲಿ ಇನ್ನೂ 2 ದಿನಗಳ ಬಾಕಿಯಿದ್ದು, ಲಂಕಾ 15 ವರ್ಷಗಳ ಬಳಿಕ ಕಿವೀಸ್ ಎದುರು ಸರಣಿ ಜಯಿಸುವ ತವಕದಲ್ಲಿದೆ.
ಗಾಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ ಮೂರನೇ ದಿನವಾದ ಶನಿವಾರ 2 ವಿಕೆಟ್‌ಗೆ 22 ರನ್‌ಗಳಿಂದ ಆಟ ಮುಂದುವರಿಸಿದ ನ್ಯೂಜಿಲೆಂಡ್ ತಂಡ ಭೋಜನಾ ವಿರಾಮಕ್ಕೂ ಮುನ್ನವೇ 39.5 ಓವರ್‌ಗಳಲ್ಲಿ ಕೇವಲ 88 ರನ್‌ಗಳಿಗೆ ಮೊದಲ ಇನಿಂಗ್ಸ್ ಆಲೌಟ್ ಆಯಿತು. 514 ರನ್‌ಗಳ ಮುನ್ನಡೆಯೊಂದಿಗೆ ನಾಯಕ ಧನಂಜಯ ಡಿಸಿಲ್ವ ನ್ಯೂಜಿಲೆಂಡ್‌ಗೆ ಫಾಲೋ ಆನ್ ಹೇರಿದರು. ಪ್ರತಿಯಾಗಿ ಎರಡನೇ ಸರದಿ ಆರಂಭಿಸಿದ ಕಿವೀಸ್, ದಿನದಂತ್ಯಕ್ಕೆ 41 ಓವರ್‌ಗಳಲ್ಲಿ 5 ವಿಕೆಟ್‌ಗೆ 199 ರನ್‌ಗಳಿಸಿದ್ದು, ಇನ್ನೂ 315 ರನ್ ಹಿನ್ನಡೆಯಲಿದೆ. 6ನೇ ವಿಕೆಟ್‌ಗೆ ಟಾಮ್ ಬ್ಲಂಡೆಲ್ (47*) ಹಾಗೂ ಗ್ಲೆನ್ ಫಿಲಿಪ್ಸ್ (32*) ಜೋಡಿ 84 ಎಸೆತಗಳಲ್ಲಿ 78 ರನ್‌ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ. ಮಂದ ಬೆಳಕಿನ ಕಾರಣ ದಿನದ ಆಟವನ್ನು ಬೇಗನೆ ನಿಲ್ಲಿಸಲಾಯಿತು.
ಶ್ರೀಲಂಕಾ: 5 ವಿಕೆಟ್‌ಗೆ 602 ಡಿಕ್ಲೇರ್. ನ್ಯೂಜಿಲೆಂಡ್: 88 ಹಾಗೂ 5 ವಿಕೆಟ್‌ಗೆ 199 (ಕಾನ್‌ವೇ 61, ವಿಲಿಯಮ್ಸನ್ 46, ರಚಿನ್ 12, ಬ್ಲಂಡೆಲ್ 47*, ಫಿಲಿಪ್ಸ್ 32*, ನಿಶಾನ್ 91ಕ್ಕೆ 3).
5: ಟೆಸ್ಟ್ ಕ್ರಿಕೆಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ 5ನೇ ಗರಿಷ್ಠ ರನ್‌ಗಳ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ಎದುರು ಇಂಗ್ಲೆಂಡ್ 702, ಲಂಕಾ ಎದುರು ದ.ಆಫ್ರಿಕಾ 587, ನ್ಯೂಜಿಲೆಂಡ್ ವಿರುದ್ಧ ಪಾಕ್ 570, ವಿಂಡೀಸ್ ಎದುರು ಇಂಗ್ಲೆಂಡ್ 563 ರನ್ ಮುನ್ನಡೆ ಸಾಧಿಸಿದ್ದು ಮೊದಲ 4 ಸ್ಥಾನದಲ್ಲಿವೆ.