ಐಪಿಎಲ್ ನಡುವೆ ತವರಿನಿಂದ ಸಿಹಿ ಸುದ್ದಿ ಪಡೆದ ಸನ್‌ರೈಸರ್ಸ್‌ ವೇಗಿ ನಟರಾಜನ್

t nararajan web
Published on

ದುಬೈ: ತಮಿಳುನಾಡಿನ ಎಡಗೈ ವೇಗಿ ಟಿ. ನಟರಾಜನ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಪರ ಮಿಂಚುತ್ತಿರುವ ನಡುವೆ ಅವರ ಪತ್ನಿ ಪವಿತ್ರಾ ತವರಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆಯೇ ನಟರಾಜನ್ ಈ ಸಿಹಿ ಸುದ್ದಿಯನ್ನು ಪಡೆದಿದ್ದರು.

ಬಳಿಕ ರಾತ್ರಿಯ ವೇಳೆ ಆರ್‌ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿದ ನಟರಾಜನ್, ಮಾರಕ ಯಾರ್ಕರ್ ಎಸೆತಗಳ ಮೂಲಕ ಮಿಂಚಿದರು. ಅದರಲ್ಲೂ ಎಬಿ ಡಿವಿಲಿಯರ್ಸ್‌ರನ್ನು ಬೌಲ್ಡ್ ಮಾಡಿದ್ದು ಪಂದ್ಯದ ಚಿತ್ರಣವನ್ನೇ ಬದಲಾಯಿಸಿತ್ತು. ಹಾಲಿ ಐಪಿಎಲ್‌ನಲ್ಲಿ ಅತ್ಯಧಿಕ ಯಾರ್ಕರ್ ಎಸೆತಗಳನ್ನು ಎಸೆದಿರುವ ವೇಗಿ ಎನಿಸಿರುವ ನಟರಾಜನ್, ಮುಂಬರುವ ಆಸೀಸ್ ಪ್ರವಾಸಕ್ಕೆ ಭಾರತ ತಂಡದ ಜತೆಗೆ ಹೆಚ್ಚುವರಿ ಬೌಲರ್ ಆಗಿ ತೆರಳಲಿದ್ದಾರೆ. ಹೀಗಾಗಿ ಮಗುವಿನ ಮುಖ ನೋಡಲು ಅವರು ಸುದೀರ್ಘ ಅವಧಿಯವರೆಗೆ ಕಾಯಬೇಕಾಗಿದೆ.

ಗೆಲುವಿನ ಬಳಿಕ ಮಾತನಾಡುತ್ತ ಸನ್‌ರೈಸರ್ಸ್‌ ನಾಯಕ ಡೇವಿಡ್ ವಾರ್ನರ್, ನಟರಾಜನ್ ತಂದೆಯಾಗಿರುವ ವಿಷಯವನ್ನು ಬಹಿರಂಗಪಡಿಸಿದರು. ನಟರಾಜನ್-ಪವಿತ್ರಾ 2018ರ ಜೂನ್‌ನಲ್ಲಿ ವಿವಾಹವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net