ಕೊನೆಗೂ ಗೆದ್ದ ಸನ್‌ರೈಸರ್ಸ್‌, ಸ್ಯಾಮ್ಸನ್ ಸಾಹಸದ ನಡುವೆಯೂ ಸೋತ ರಾಜಸ್ಥಾನ

srh vs rr web
Published on

ದುಬೈ: ಐಪಿಎಲ್ 14ನೇ ಆವೃತ್ತಿಯಲ್ಲಿ ಸತತ 5 ಸೋಲಿನೊಂದಿಗೆ ಪ್ಲೇಆಫ್​ ರೇಸ್‌ನಿಂದ ಹೊರಬಿದ್ದ ಬೆನ್ನಲ್ಲೇ ಆಡುವ ಬಳಗದಲ್ಲಿ ಹಲವು ಬದಲಾವಣೆ ಮಾಡಿಕೊಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಗೆಲುವಿನ ಹಾದಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ರನ್‌ಬರ ಎದುರಿಸಿ ಆಡುವ ಬಳಗದಿಂದ ಹೊರಬಿದ್ದ ಡೇವಿಡ್ ವಾರ್ನರ್ ಬದಲಿಗೆ ಕಣಕ್ಕಿಳಿದ ಜೇಸನ್ ರಾಯ್ (60 ರನ್, 42 ಎಸೆತ, 8 ಬೌಂಡರಿ, 1 ಸಿಕ್ಸರ್) ಒದಗಿಸಿಕೊಟ್ಟ ಭರ್ಜರಿ ಆರಂಭದ ಬಲದಿಂದ ಸನ್‌ರೈಸರ್ಸ್‌ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಮವಾರ ನಡೆದ ಐಪಿಎಲ್ 2ನೇ ಚರಣದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಜಯ ಸಾಧಿಸಿತು. ಇದರಿಂದ ರಾಯಲ್ಸ್ ಪ್ಲೇಆಫ್​ ಆಸೆ ತೂಗುಯ್ಯಲೆಯಲ್ಲಿ ನಿಂತಿದೆ.

ದುಬೈ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ ನಾಯಕ ಸಂಜು ಸ್ಯಾಮ್ಸನ್ (82 ರನ್, 57 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟದಿಂದ 5 ವಿಕೆಟ್‌ಗೆ 164 ರನ್ ಗಳಿಸಿತು. ಸ್ಯಾಮ್ಸನ್ ಸಾಹಸದಿಂದ ರಾಯಲ್ಸ್ ಕೊನೆಯ 5 ಓವರ್‌ಗಳಲ್ಲಿ 51 ರನ್ ಸೇರಿಸಿತು. ಇದಕ್ಕೆ ಪ್ರತಿಯಾಗಿ ಜೇಸನ್ ರಾಯ್-ವೃದ್ಧಿಮಾನ್ ಸಾಹ ಜೋಡಿ ಮೊದಲ 5 ಓವರ್‌ಗಳಲ್ಲೇ 57 ರನ್ ಪೇರಿಸಿ ಸನ್‌ರೈಸರ್ಸ್‌ಗೆ ಭದ್ರ ಬುನಾದಿ ಹಾಕಿಕೊಟ್ಟಿತು. ಬಳಿಕ ನಾಯಕ ಕೇನ್ ವಿಲಿಯಮ್ಸನ್ (51*ರನ್, 41 ಎಸೆತ, 5 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಆಟದಿಂದ ಸನ್‌ರೈಸರ್ಸ್‌ 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 167 ರನ್ ಗಳಿಸಿ ಜಯದ ನಗೆ ಬೀರಿತು. ಭಾರತದಲ್ಲಿನ ಮೊದಲ ಚರಣದ ಕೊನೇ 3 ಪಂದ್ಯ ಸೋತಿದ್ದ ಸನ್‌ರೈಸರ್ಸ್‌ ಬಳಿಕ ಅರಬ್ ನಾಡಿನಲ್ಲೂ ಮೊದಲ 2 ಪಂದ್ಯಗಳಲ್ಲಿ ಸೋತು ಪ್ಲೇಆ್ ಆಸೆ ಕೈಚೆಲ್ಲಿತ್ತು.

ಸಾಹ (18) ನಿರ್ಗಮನದ ಬಳಿಕ ವಿಲಿಯಮ್ಸನ್ ಜತೆಗೆ ರಾಯ್ ಮತ್ತೆ 57 ರನ್ ಸೇರಿಸಿದರು. ಕೊನೆಗೆ ಅಭಿಷೇಕ್ ಶರ್ಮ (21*) ಜತೆಗೆ ಮುರಿಯದ 4ನೇ ವಿಕೆಟ್‌ಗೆ 48 ರನ್ ಕೂಡಿಹಾಕುವ ಮೂಲಕ ವಿಲಿಯಮ್ಸನ್ ತಂಡವನ್ನು ಗೆಲುವಿನ ದಡ ತಲುಪಿಸಿದರು. ಇದುವರೆಗೆ ಆಡಿದ 10 ಪಂದ್ಯಗಳಲ್ಲಿ 4 ಜಯ, 6 ಸೋಲು ಕಂಡಿರುವ ಕೆಕೆಆರ್, ಪಂಜಾಬ್, ರಾಜಸ್ಥಾನ, ಮುಂಬೈ ತಂಡಗಳು ಈಗ ಪ್ಲೇಆಫ್​ ಕುತೂಹಲವನ್ನು ಹೆಚ್ಚಿಸಿವೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದ ರಾಯಲ್ಸ್‌ಗೆ ನಿರೀಕ್ಷಿತ ಆರಂಭ ಲಭಿಸಲಿಲ್ಲ. ಭರ್ಜರಿ ಾರ್ಮ್‌ನಲ್ಲಿದ್ದ ಎವಿನ್ ಲೆವಿಸ್ (6) ಪಂದ್ಯದ 7ನೇ ಎಸೆತದಲ್ಲೇ ಭುವನೇಶ್ವರ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ (36) ಜತೆಗೂಡಿ ಸ್ಯಾಮ್ಸನ್ 2ನೇ ವಿಕೆಟ್‌ಗೆ ಅರ್ಧಶತಕದ ಜತೆಯಾಡಿದರು. ಈ ಜೋಡಿ ಸನ್‌ರೈಸರ್ಸ್‌ಗೆ ಸವಾಲೆನಿಸುವ ಹಂತದಲ್ಲಿ ಸಂದೀಪ್ ಶರ್ಮ, ಯಶಸ್ವಿ ಜೈಸ್ವಾಲ್‌ಗೆ ಡಗೌಟ್ ದಾರಿ ತೋರಿದರು. ಸಿಕ್ಸರ್ ಚಚ್ಚಿಸಿಕೊಂಡ ಮರು ಎಸೆತದಲ್ಲೇ ಸಂದೀಪ್ ಸೇಡು ತೀರಿಸಿಕೊಂಡರು. ಲಿವಿಂಗ್‌ಸ್ಟೋನ್ (4) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಬಳಿಕ ಸ್ಯಾಮ್ಸನ್ ಮತ್ತು ಮಹಿಪಾಲ್ ಲೊಮ್ರರ್ (29*) ಜೋಡಿ 4ನೇ ವಿಕೆಟ್‌ಗೆ 84 ರನ್ ಜತೆಯಾಟವಾಡಿ ರಾಯಲ್ಸ್ ಮೊತ್ತವನ್ನು 160ರ ಗಡಿ ದಾಟಿಸಲು ಶ್ರಮಿಸಿತು.

ಸಿಡಿದ ಸ್ಯಾಮ್ಸನ್

ಎಚ್ಚರಿಕೆಯ ಆಟದೊಂದಿಗೆ 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಯಾಮ್ಸನ್, ಬಳಿಕ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದರು. ಸಿದ್ಧಾರ್ಥ್ ಕೌಲ್ ಎಸೆದ ಇನಿಂಗ್ಸ್‌ನ 16ನೇ ಓವರ್‌ನಲ್ಲಿ 2 ಸಿಕ್ಸರ್ ಸಹಿತ 20 ರನ್ ಕಸಿದರು. ನಂತರದ ಭುವಿ, ಹೋಲ್ಡರ್ ಓವರ್‌ನಲ್ಲೂ ತಲಾ 10 ರನ್ ಸಿಡಿಯಿತು. ಇದರಿಂದ 3 ಓವರ್‌ಗಳಲ್ಲೇ ರಾಯಲ್ಸ್ 40 ರನ್ ದೋಚಿತು. ಕೊನೇ ಓವರ್‌ನಲ್ಲಿ ಸ್ಯಾಮ್ಸನ್ ಸಹಿತ 2 ವಿಕೆಟ್ ಕಬಳಿಸಿದ ಸಿದ್ಧಾರ್ಥ್ ಕೌಲ್ 4 ರನ್ ಮಾತ್ರ ಬಿಟ್ಟುಕೊಟ್ಟರು.

ವಾರ್ನರ್, ಮನೀಷ್‌ಗೆ ಕೊಕ್

ಪ್ಲೇಆ್ ರೇಸ್‌ನಿಂದ ಹೊರಬಿದ್ದ ಬೆನ್ನಲ್ಲೇ ನಿರೀಕ್ಷೆಯಂತೆಯೇ ಸನ್‌ರೈಸರ್ಸ್‌ ಆಡುವ 11ರ ಬಳಗ ಭಾರಿ ಬದಲಾವಣೆ ಕಂಡಿತು. ಮಾಜಿ ನಾಯಕ ಡೇವಿಡ್ ವಾರ್ನರ್, ಕನ್ನಡಿಗ ಮನೀಷ್ ಪಾಂಡೆ, ಕೇದಾರ್ ಜಾಧವ್ ಮತ್ತು ಖಲೀಲ್ ಅಹ್ಮದ್ ಹೊರಬಿದ್ದರು. ಜೇಸನ್ ರಾಯ್, ಪ್ರಿಯಂ ಗಾರ್ಗ್, ಅಭಿಷೇಕ್ ಶರ್ಮ ಮತ್ತು ಸಿದ್ಧಾರ್ಥ್ ಕೌಲ್ ಕಣಕ್ಕಿಳಿದರು. ರಾಯಲ್ಸ್ ಕೂಡ 3 ಬದಲಾವಣೆಯೊಂದಿಗೆ ಆಡಿತು. ಕ್ರಿಸ್ ಮಾರಿಸ್, ಎವಿನ್ ಲೆವಿಸ್ ಫಿಟ್ ಆಗಿ ಮರಳಿದರೆ ಮಿಲ್ಲರ್, ಶಮ್ಸಿ ಹೊರಬಿದ್ದರು. ಗಾಯಾಳು ಕಾರ್ತಿಕ್ ತ್ಯಾಗಿ ಸ್ಥಾನವನ್ನು ಜೈದೇವ್ ಉನಾದ್ಕತ್ ತುಂಬಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net