ಮುಂಬೈ ಇಂಡಿಯನ್ಸ್ - ಸನ್‌ರೈಸರ್ಸ್‌ ಹಣಾಹಣಿ

srh and mumbai indians
Published on

ನವದೆಹಲಿ: ಸತತ ಗೆಲುವಿನಿಂದ ಬೀಗುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-14ರ ತನ್ನ 8ನೇ ಪಂದ್ಯದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಅರುಣ್ ಜೇಟ್ಲಿ ಮೈದಾನದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಮೇಲ್ನೋಟಕ್ಕೆ ಮುಂಬೈ ತಂಡವೇ ಫೇವರಿಟ್ ಎನಿಸಿದೆ. ಕಡೇ ಪಂದ್ಯದಲ್ಲಿ ಸಿಎಸ್‌ಕೆ ಎದುರು ಕೈರಾನ್ ಪೊಲ್ಲಾರ್ಡ್ ಅಬ್ಬರದ ಫಲವಾಗಿ ರೋಚಕ ಜಯ ದಾಖಲಿಸಿದ್ದ ಮುಂಬೈ ತಂಡ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ಲೀಗ್‌ನಲ್ಲಿ ಇದುವರೆಗೂ ಆಡಿರುವ 7 ಪಂದ್ಯಗಳ ಪೈಕಿ 2 ಬಾರಿ ಹ್ಯಾಟ್ರಿಕ್ ಸೋಲಿನ ರುಚಿ ಕಂಡಿರುವ ಸನ್‌ರೈಸರ್ಸ್‌, ಪ್ಲೇಆ್ ಹಂತಕ್ಕೇರಲು ಉಳಿದ 7 ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಒತ್ತಡದಲ್ಲಿ ಸಿಲುಕಿದೆ. ಕನಿಷ್ಠ ಒಂದು ಪಂದ್ಯ ಸೋತರೆ ಪ್ಲೇಆಫ್ ಭವಿಷ್ಯ ಕಮರಲಿದೆ.

* ಆತ್ಮವಿಶ್ವಾಸದಲ್ಲಿ ಮುಂಬೈ ಇಂಡಿಯನ್ಸ್

ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕರಾದ ನಾಯಕ ರೋಹಿತ್ ಶರ್ಮ (250ರನ್), ಕ್ವಿಂಟನ್ ಡಿ ಕಾಕ್ (155ರನ್) ಜೋಡಿ ಉತ್ತಮ ಆರಂಭ ನೀಡುತ್ತಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೈಕೊಡುತ್ತಿದ್ದರೂ ಕಡೇ 2 ಪಂದ್ಯಗಳಲ್ಲಿ ಈ ವಿಭಾಗದ ಬ್ಯಾಟ್ಸ್‌ಮನ್‌ಗಳೇ ತಂಡಕ್ಕೆ ಆಧಾರವಾಗಿದ್ದಾರೆ. ಕೃನಾಲ್ ಪಾಂಡ್ಯ ಲಯ ಕಂಡುಕೊಂಡಿರುವುದು ಸಮಾಧಾನಕರ ವಿಷಯ. ಸಿಎಸ್‌ಕೆ ಎದುರು ತಂಡದಿಂದ ಬಹುತೇಕ ಕೈತಪ್ಪಿದ ಗೆಲುವನ್ನು ಆಲ್ರೌಂಡರ್ ಕೈರಾನ್ ಪೊಲ್ಲಾರ್ಡ್ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಒಲಿಸಿಕೊಂಡಿದ್ದರು. ಕೇವಲ 34 ಎಸೆತಗಳಲ್ಲಿ 87 ರನ್ ಕಲೆಹಾಕಿದ್ದರು. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಜೋಡಿ ರನ್‌ಗಳಿಸಲು ವಿಲರಾಗುತ್ತಿದೆ. ಜಸ್‌ಪ್ರೀತ್ ಬುಮ್ರಾ ಟ್ರೆಂಟ್ ಬೌಲ್ಟ್, ರಾಹುಲ್ ಚಹರ್ ಬೌಲಿಂಗ್ ವಿಭಾಗದಲ್ಲಿ ಆಸರೆಯಾಗುತ್ತಿದ್ದಾರೆ.

* ಗೆಲುವಿನ ಒತ್ತಡದಲ್ಲಿ ಸನ್‌ರೈಸರ್ಸ್‌

ಸತತ ಸೋಲುಗಳಿಂದ ಕಂಗೆಟ್ಟಿರುವ ಸನ್‌ರೈಸರ್ಸ್‌ ತಂಡಕ್ಕೆ ನಾಯಕ ಬದಲಾದರೂ ಗೆಲುವಿನ ಅದೃಷ್ಟ ಮಾತ್ರ ಇನ್ನು ಕೈಹಿಡಿಯುತ್ತಿಲ್ಲ. ಪ್ಲೇಆ್ ಹಂತಕ್ಕೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಸನ್‌ರೈಸರ್ಸ್‌ ಪಾಲಿಗೆ ಉಳಿದ ಎಲ್ಲ ಪಂದ್ಯಗಳು ಮಾಡು ಇಲ್ಲವೇ ಮಡಿಯಂತಿವೆ. ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಸಿ ಹನ್ನೊಂದರ ಬಳಗದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಮನೀಷ್ ಪಾಂಡೆ, ಜಾನಿ ಬೇರ್‌ಸ್ಟೋ ರಾಜಸ್ಥಾನ ಎದುರು ಇನಿಂಗ್ಸ್ ಆರಂಭಿಸಿದ್ದರು. ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಕೇದಾರ್ ಜಾಧವ್, ಅಬ್ದುಲ್ ಸಮದ್ ಒಳಗೊಂಡ ಸನ್‌ರೈಸರ್ಸ್‌ ಬೌಲಿಂಗ್ ಪಡೆ ಇದುವರೆಗೂ ಸ್ಫೋಟಿಸಲು ವಿಲವಾಗಿದೆ. ಪದೆ ಪದೇ ತಂಡದ ಸಂಯೋಜನೆ ಬದಲಿಸಿದರೂ ತಂಡದ ಪಾಲಿಗೆ ಗೆಲುವು ಮರೀಚಿಕೆಯಾಗಿದೆ.

ಟೀಮ್ ನ್ಯೂಸ್:

ಮುಂಬೈ ಇಂಡಿಯನ್ಸ್: ಆಲ್ರೌಂಡರ್ ಜೇಮ್ಸ್ ನೀಶಾಮ್ ಬದಲಿಗೆ ಇಶಾನ್ ಕಿಶನ್ ಅಥವಾ ಜಯಂತ್ ಯಾದವ್ ಇಬ್ಬರಲ್ಲಿ ಒಬ್ಬರು ಸ್ಥಾನ ಪಡೆಯಬಹುದು. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಕಳೆದ ಪಂದ್ಯ: ಸಿಎಸ್‌ಕೆ ಎದುರು 4 ವಿಕೆಟ್ ಜಯ

ಸನ್‌ರೈಸರ್ಸ್‌:

ರಾಯಲ್ಸ್ ಎದುರು ದುಬಾರಿಯಾದ ಸಂದೀಪ್ ಶರ್ಮ ಬದಲಿಗೆ ಸಿದ್ದಾರ್ಥ್ ಕೌಲ್ ಸ್ಥಾನ ಪಡೆಯಬಹುದು. ತಂಡಕ್ಕೆ ಕೆಲ ಬದಲಾವಣೆ ಅನಿವಾರ್ಯವಾಗಿದೆ.

ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 55 ರನ್‌ನಿಂದ ಸೋಲು

ಮುಖಾಮುಖಿ: 17: ಸನ್‌ರೈಸರ್ಸ್‌: 8, ಮುಂಬೈ: 9

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್

ಆರಂಭ: ರಾತ್ರಿ: 7.30ಕ್ಕೆ

ಹಿಂದಿನ ಮುಖಾಮುಖಿ: ಮುಂಬೈ ತಂಡಕ್ಕೆ 13 ರನ್ ಜಯ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net