ಸನ್‌ರೈಸರ್ಸ್‌ ಗೆದ್ದರೆ ಪ್ಲೇಆಫ್ ಟಿಕೆಟ್, ಇಂದು ಮುಂಬೈ ವಿರುದ್ಧ ನಿರ್ಣಾಯಕ ಕಾದಾಟ

srh and mumbia indians
Published on

ಶಾರ್ಜಾ: ಸತತ 2 ಗೆಲುವಿನೊಂದಿಗೆ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-13ರ ತನ್ನ 14ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಉತ್ತಮ ರನ್‌ರೇಟ್ ಹೊಂದಿರುವ ಸನ್‌ರೈಸರ್ಸ್‌ ತಂಡ ಕಡೇ ಪಂದ್ಯದಲ್ಲಿ ಕನಿಷ್ಠ ಗೆಲುವು ದಾಖಲಿಸಿದರೆ ಯಾವುದೇ ಲೆಕ್ಕಾಚಾರವಿಲ್ಲದೆ ಅಂತಿಮ ನಾಲ್ಕರ ಘಟ್ಟಕ್ಕೇರಲಿದೆ. ಹೀಗಾಗಿ ಸನ್‌ರೈಸರ್ಸ್‌ ಪಾಲಿಗೆ ಈ ಪಂದ್ಯ ಮಾಡು ಇಲ್ಲವೆ ಮಡಿ ಎನಿಸಿದೆ. ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಲೀಗ್‌ನ ಕಡೇ ಪಂದ್ಯ,  ಕೆಕೆಆರ್ ತಂಡಗಳ ಭವಿಷ್ಯವನ್ನೂ ನಿರ್ಧರಿಸಲಿದೆ. ಸನ್ ರೈಸರ್ಸ್ ಗೆದ್ದರೆ ಕೆಕೆಆರ್ ಹೊರಬೀಳಲಿದೆ.

ಸನ್‌ರೈಸರ್ಸ್‌ಗೆ ಗೆಲುವೊಂದೇ ಮಾರ್ಗ

ಹ್ಯಾಟ್ರಿಕ್ ಗೆಲುವಿನೊಂದಿಗೆ ನೇರವಾಗಿ ಅರ್ಹತೆ ಪಡೆಯುವ ಗುರಿಯಲ್ಲಿರುವ ಸನ್‌ರೈಸರ್ಸ್‌ ತಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ಸ್ಟಾರ್ ಬ್ಯಾಟ್ಸ್‌ಮನ್‌ಗಳಿದ್ದರೂ ತಂಡಕ್ಕೆ ದಿಢೀರ್ ಕುಸಿತದ ಭೀತಿ ಕಾಡುತ್ತಿದೆ. ಅದರಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ತಂಡವನ್ನು ಕಾಡುತ್ತಿದೆ. ಜೇಸನ್ ಹೋಲ್ಡರ್ ತಂಡಕ್ಕೆ ಆಗಮಿಸಿದ ಬಳಿಕ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲ ತುಂಬುತ್ತಿದ್ದಾರೆ. ಸಂದೀಪ್ ಶರ್ಮ, ಎಡಗೈ ವೇಗಿ ಟಿ.ನಟರಾಜನ್, ರಶೀದ್ ಖಾನ್ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಮತ್ತೊಂದೆಡೆ, ಮೊದಲ ತಂಡವಾಗಿ ಪ್ಲೇಆ್ ಖಾತ್ರಿಪಡಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ನಾಯಕ ರೋಹಿತ್ ಶರ್ಮ ಅನುಪಸ್ಥಿತಿಯಲ್ಲೂ ಕೈರಾನ್ ಪೊಲ್ಲಾರ್ಡ್ ಬಳಗ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿ ಭರ್ಜರಿ ನಿರ್ವಹಣೆ ಮೂಲಕ ಗಮನಸೆಳೆಯುತ್ತಿದೆ. ರೋಹಿತ್ ಶರ್ಮ ಲಭ್ಯತೆ ಇನ್ನು ಖಚಿತವಾಗಿಲ್ಲ.

ಟೀಮ್ ನ್ಯೂಸ್:

ಸನ್‌ರೈಸರ್ಸ್‌: ಸತತ 2 ಗೆಲುವು ದಾಖಲಿಸಿರುವ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ. ಗೆಲುವಿನ ಲಯದಲ್ಲಿರುವುದರಿಂದ ತಂಡದಲ್ಲಿ ಬದಲಾವಣೆ ತರುವ ಸಾಧ್ಯತೆ ಕಡಿಮೆ.

ಕಳೆದ ಪಂದ್ಯ: ಆರ್‌ಸಿಬಿ ಎದುರು 5 ವಿಕೆಟ್ ಜಯ.

ಮುಂಬೈ ಇಂಡಿಯನ್ಸ್: ಮೊದಲ ಸ್ಥಾನ ಗಟ್ಟಿ ಮಾಡಿಕೊಂಡಿರುವ ಮುಂಬೈ ತಂಡ ಕೆಲ ಪ್ರಯೋಗಗಳಿಗೆ ಮುಂದಾಗುವ ಸಾಧ್ಯತೆಗಳಿವೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಲೀಗ್‌ನಲ್ಲಿ ಇದುವರೆಗೆ ಆಡದ ಆಟಗಾರರಿಗೆ ಅವಕಾಶ ನೀಡುವ ನಿರೀಕ್ಷೆ ಇದೆ.

ಕಳೆದ ಪಂದ್ಯ: ಡೆಲ್ಲಿ ವಿರುದ್ಧ 9 ವಿಕೆಟ್ ಜಯ,

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 15, ಸನ್‌ರೈಸರ್ಸ್‌: 7, ಮುಂಬೈ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net