2020 ಯುವ ತಾರೆ; ಹೊಸ ವರ್ಷದಲ್ಲಿ ಗಮನಸೆಳೆಯಲು ಸಿದ್ಧಗೊಂಡ ಭವಿಷ್ಯದ ಸ್ಪೋರ್ಟ್ಸ್​ಸ್ಟಾರ್ಸ್

Manu 31 Dec 19
Published on

ಜಗತ್ತು 2020ಕ್ಕೆ ಕಾಲಿಡುವುದರೊಂದಿಗೆ ಹೊಸ ದಶಕವೂ ಆರಂಭಗೊಂಡಿದೆ. ಕಳೆದ 10 ವರ್ಷಗಳಲ್ಲಿ ಭಾರತೀಯ ಕ್ರೀಡಾ ಜಗತ್ತು ಸಾಕಷ್ಟು ಬದಲಾವಣೆಗಳಿಗೆ ತೆರೆದುಕೊಂಡಿದೆ. ಅಂದೆಲ್ಲಾ ಒಲಿಂಪಿಕ್ಸ್​ನಲ್ಲಿ ಕನಿಷ್ಠ ಒಂದು ಪದಕದ ನಿರೀಕ್ಷೆಯಲ್ಲಿದ್ದ ಭಾರತವೀಗ, ಒಲಿಂಪಿಕ್ಸ್​ನಲ್ಲಿ ಒಂದಕ್ಕಿಂತ ಹೆಚ್ಚಿನ ಪದಕಗಳನ್ನು ಗೆಲ್ಲುವ ಮಟ್ಟಕ್ಕೆ ಬೆಳೆದು ನಿಂತಿದೆ. ಶೂಟಿಂಗ್, ಕುಸ್ತಿ, ಬ್ಯಾಡ್ಮಿಂಟನ್​ನಂಥ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳೇ ಎದುರಾಳಿ ತಂಡದ ಟಾರ್ಗೆಟ್ ಆಗುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದಾರೆ. 2019ರ ವರ್ಷದಲ್ಲಿ ಭರವಸೆ ಹುಟ್ಟಿಸಿದ ಹೆಚ್ಚಿನ ಪ್ರತಿಭೆಗಳು, 2020ರಲ್ಲಿ ಹಾಗೂ ಹಾಲಿ ದಶಕದಲ್ಲಿ ಕ್ರೀಡಾರಂಗದಲ್ಲಿ ತಮ್ಮ ಹೆಸರನ್ನು ಅಜರಾಮರವಾಗಿ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಪಡಲಿದ್ದಾರೆ. ಅಂಥ ಭರವಸೆಯ ಯುವ ಕ್ರೀಡಾಪಟುಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಮನು ಭಾಕರ್ ಯುವ ಶೂಟಿಂಗ್ ಸೆನ್ಸೇಷನ್ ಮನು ಭಾಕರ್, 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಈಗಾಗಲೇ ಛಾಪು ಮೂಡಿಸಿದ್ದಾರೆ. ಸ್ಪರ್ಧಿಸಿದ ಬಹುತೇಕ ಎಲ್ಲ ಕೂಟಗಳಲ್ಲೂ ಪದಕ ಗೆದ್ದಿರುವ ಹರಿಯಾಣದ ತಾರೆ, 16ನೇ ವಯಸ್ಸಿನಲ್ಲಿಯೇ 2018ರ ಶೂಟಿಂಗ್ ವಿಶ್ವಕಪ್​ನ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ 2 ಚಿನ್ನದ ಪದಕ ಗೆದ್ದಿದ್ದರು. ಈಗಾಗಲೇ ಹಲವು ಪದಕಗಳ ತಮ್ಮ ಟ್ರೋಫಿ ಕ್ಯಾಬಿನೆಟ್ ತುಂಬಿಸಿಕೊಂಡಿರುವ ಮನು ಭಾಕರ್, 2020ರ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಫೇವರಿಟ್ ಆಗಿದ್ದಾರೆ.

ಪ್ರಿಯಾ ಪೂನಿಯಾ

ಮಹಿಳಾ ಕ್ರಿಕೆಟ್ ಎಂದರೆ ಮಿಥಾಲಿ ರಾಜ್ ಆಗಿದ್ದ ದಿನಗಳು ಈಗ ಬದಲಾಗಿವೆ. ಯುವ ಬ್ಯಾಟುಗಾರ್ತಿಯರಾದ ಸ್ಮೃತಿ ಮಂದನಾ, ಜೆಮೀಮಾ ರೋಡ್ರಿಗಸ್ ಮಿಂಚುತ್ತಿರುವ ನಡುವೆ ಮತ್ತೊಬ್ಬ ಆಟಗಾರ್ತಿ 23 ವರ್ಷದ ಪ್ರಿಯಾ ಪೂನಿಯಾ ಗಮನ ಸೆಳೆದಿದ್ದು, 2020ರ ಟಿ20 ವಿಶ್ವಕಪ್ ಅವರ ಭವಿಷ್ಯವನ್ನೇ ಬದಲಿಸಬಹುದು.

ಮಯಾಂಕ್ ಅಗರ್ವಾಲ್

ಕಳೆದ ಒಂದು ವರ್ಷದಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಿರ ನಿರ್ವಹಣೆ ಮೂಲಕ ಗಮನಸೆಳೆದ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್. ಕಳೆದ ಕೆಲ ವರ್ಷದವರೆಗೆ ದೇಶೀಯ ಕ್ರಿಕೆಟ್​ನಲ್ಲಿ ಕರ್ನಾಟಕದ ಆಧಾರಸ್ತಂಭವಾಗಿದ್ದ 28 ವರ್ಷದ ಮಯಾಂಕ್ ಅಗರ್ವಾಲ್​ಗೆ 2020ರಲ್ಲಿ ಮತ್ತಷ್ಟು ಹೆಸರು ಮಾಡುವ ಅವಕಾಶ ಹೊಂದಿದ್ದಾರೆ. ಐಪಿಎಲ್​ನಲ್ಲಿ ಅವರ ತೋರುವ ನಿರ್ವಹಣೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲೂ ಸಹಾಯವಾಗಬಹುದು.

ಹಿಮಾ ದಾಸ್

ಧಿಂಗ್ ಎಕ್ಸ್​ಪ್ರೆಸ್ ಖ್ಯಾತಿಯ 19 ವರ್ಷದ ಹಿಮಾ ದಾಸ್ ಅಥ್ಲೆಟಿಕ್ಸ್​ನಲ್ಲಿ ಭಾರತದ ಸ್ಟಾರ್. 20 ವಯೋಮಿತಿ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಪದಕ ಗೆದ್ದ ಬಳಿಕ ಅಗಾಧವಾಗಿ ಪ್ರಸಿದ್ಧಿಗೆ ಬಂದಿರುವ ಹಿಮಾ ದಾಸ್​ರಿಂದ ಭಾರತ ದೊಡ್ಡ ಪದಕದ ನಿರೀಕ್ಷೆಯಲ್ಲಿದೆ. ಸೂಪರ್​ಸ್ಟಾರ್ ಅಥ್ಲೀಟ್ ಆಗುವ ಎಲ್ಲ ಲಕ್ಷಣ ಹೊಂದಿದ್ದಾರೆ.

ದೀಪಕ್ ಪೂನಿಯಾ ಕಳೆದ 18 ವರ್ಷಗಳ ಇತಿಹಾಸದಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆದ ಭಾರತದ ಮೊದಲ ರೆಸ್ಲರ್ ದೀಪಕ್ ಪೂನಿಯಾ. 2016ರ ಕೆಡೆಟ್ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಗೆದ್ದಿದ್ದ ದೀಪಕ್, 2017ರ ಜೂನಿಯರ್ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದರು. ಈ ವರ್ಷ ನಡೆದ ವಿಶ್ವ ರೆಸ್ಲಿಂಗ್ ಚಾಂಪಿಯನ್​ಷಿಪ್​ನ 86 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಗಮನಸೆಳೆದಿದ್ದಾರೆ. ಫೈನಲ್ ವೇಳೆ ಗಾಯಗೊಳ್ಳದೇ ಇದ್ದಿದ್ದರೆ, ಸ್ವರ್ಣ ಗೆಲ್ಲುವ ಅವಕಾಶವೂ ಇವರಿಗಿತ್ತು. 2020 ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿರುವ ಇವರಿಂದ ಭಾರತೀಯ ಕುಸ್ತಿ ದೊಡ್ಡ ನಿರೀಕ್ಷೆಯಲ್ಲಿದೆ.

ಮಂಜುರಾಣಿ

ಭಾರತದಲ್ಲಿ ಮಹಿಳಾ ಬಾಕ್ಸಿಂಗ್ ಎಂದರೆ ಮೇರಿ ಕೋಮ್ನ್ನು ಮಾತ್ರವೇ ನೋಡುತ್ತಿದ್ದ ಕಾಲ ಬಹುತೇಕ ಮುಕ್ತಾಯವಾಗಲಿದೆ. ಮುಂದಿನ ದಿನಗಳಲ್ಲಿ ಮಹಿಳಾ ಬಾಕ್ಸಿಂಗ್​ನಲ್ಲಿ ಯಶಸ್ಸಿನ ಪಥವೇರುವ ನಿರೀಕ್ಷೆ ಮೂಡಿಸಿದವರು 20 ವರ್ಷದ ಮಂಜುರಾಣಿ. ಇದೇ ಮೊದಲ ಬಾರಿಗೆ ಮಹಿಳೆಯರ ವಿಶ್ವ ಬಾಕ್ಸಿಂಗ್​ನಲ್ಲಿ ಸ್ಪರ್ಧೆ ಮಾಡಿದ್ದ ಇವರು ಫೈನಲ್​ಗೇರುವಲ್ಲಿ ಯಶ ಕಂಡಿದ್ದರು. ವಿಶ್ವ ಬಾಕ್ಸಿಂಗ್​ನಲ್ಲಿ ಬೆಳ್ಳಿ ಗೆದ್ದಿದ್ದ ಮಂಜುರಾಣಿ, 2019ರ ಆರಂಭದಲ್ಲಿ ಬಲ್ಗೇರಿಯಾದಲ್ಲೂ ಬೆಳ್ಳಿ ಪದಕ ಗೆದ್ದಿದ್ದರು.ಮೇರಿಕೋಮ್ ಉತ್ತರಾಧಿಕಾರಿ ಆಗಬಲ್ಲವರು.

ಸುಮಿತ್ ನಗಾಲ್ ವಿಶ್ವ ರ್ಯಾಂಕಿಂಗ್​ನಲ್ಲಿ 128ನೇ ಸ್ಥಾನದಲ್ಲಿರುವ ಟೆನಿಸ್ ಆಟಗಾರ 22 ವರ್ಷದ ಸುಮಿತ್ ನಗಾಲ್. 2 ಚಾಲೆಂಜರ್ಸ್ ಹಾಗೂ 9 ಐಟಿಎಫ್ ಪ್ರಶಸ್ತಿ ಗೆಲ್ಲುವ ಮೂಲಕ ಭರವಸೆ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇವರಿಂದ ದೊಡ್ಡ ಮಟ್ಟದ ನಿರ್ವಹಣೆಯನ್ನು ನಿರೀಕ್ಷೆ ಮಾಡಬಹುದು. 2019ರ ಯುಎಸ್ ಓಪನ್​ನಲ್ಲಿ ಫೆಡರರ್ ವಿರುದ್ಧ ಒಂದು ಸೆಟ್ ಗೆದ್ದಿದ್ದು ನಗಾಲ್​ರ ಅಭೂತಪೂರ್ವ ಸಾಧನೆ. ಸುಮಿತ್ ನಗಾಲ್​ರ ಆಟಕ್ಕೆ ಸ್ವತಃ ಫೆಡರರ್ ಮೆಚ್ಚುಗೆ ಸೂಚಿಸಿದ್ದರು. ಗ್ರಾಂಡ್ ಸ್ಲಾಂ ಸಿಂಗಲ್ಸ್​ಗಳಲ್ಲಿ ಹಾಲಿ ದಶಕದಲ್ಲಿ ಕೆಲ ಪಂದ್ಯಗಳ ಗೆಲುವನ್ನು ಇವರಿಂದ ನಿರೀಕ್ಷೆ ಮಾಡಬಹುದು.

ಲಕ್ಷ್ಯ ಸೇನ್

ಪಿ.ಕಶ್ಯಪ್, ಸಾಯಿ ಪ್ರಣೀತ್​ರಂಥ ಸಿಂಗಲ್ಸ್ ತಾರೆಯರನ್ನು ಬ್ಯಾಡ್ಮಿಂಟನ್​ನಲ್ಲಿ ಹೊಂದಿರುವ ಭಾರತಕ್ಕೆ ಈಗಾಗಲೇ ನವತಾರೆಯ ರೂಪದಲ್ಲಿ 18 ವರ್ಷದ ಲಕ್ಷ್ಯ ಸೆನ್ ಕಂಡಿದ್ದಾರೆ. ಈವರೆಗೂ ಸೀನಿಯರ್ ಮಟ್ಟದಲ್ಲಿ ಆಡದಿರುವ ಲಕ್ಷ್ಯ, ಹಾಲಿ ವರ್ಷ ಸೀನಿಯರ್ ಟೂರ್ನಿಗೆ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net