ಕ್ರೀಡೆ ಎಂದರೆ ಕೇವಲ ಆಟವಲ್ಲ: ಶಾಸಕ ಚನ್ನಬಸಪ್ಪ

Volleyball tournament
ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಯುನೈಟೆಡ್ ಕಪ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಶ್ರೀ ಸಾಯಿನಾಥ ಸ್ವಾಮೀಜಿ ಉದ್ಘಾಟಿಸಿದರು. ಎಸ್.ಎನ್.ಚನ್ನಬಸಪ್ಪ, ಆಯನೂರು ಮಂಜುನಾಥ್, ಚಂದ್ರಪ್ಪ ಗುಂಡಾಪಲ್ಲಿ, ಕೆ.ಎಸ್.ಶಶಿ, ರೇಖ್ಯಾ ನಾಯ್ಕ, ಶ್ರೀನಾಥ್, ಡಾ.ಪ್ರಸನ್ನ, ಪ್ರತಿಭಾ ಜಾಫರ್, ರವೀಂದ್ರ ಪಾಟೀಲ್, ರಾಮಣ್ಣ, ಪರಮೇಶ್ ಇದ್ದರು.
Published on

ಶಿವಮೊಗ್ಗ: ಕ್ರೀಡೆಯಿಂದ ಶಿಸ್ತು, ಏಕಾಗ್ರತೆ ವೃದ್ಧಿಯಾಗುತ್ತದೆ. ಹಾಗಾಗಿ ಓದಿನ ಜತೆಗೆ ಕ್ರೀಡೆಗೂ ಹೆಚ್ಚು ಒತ್ತು ಕೊಟ್ಟಾಗ ಕ್ರೀಡೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರ್ ಕ್ಲಬ್ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ಸರ್ದಾರ್ ಜಾಫರ್ ಸ್ಮರಣಾರ್ಥ 19 ವರ್ಷದೊಳಗಿನ ಪಿಯು ಕಾಲೇಜಿನ ಬಾಲಕ ಮತ್ತು ಬಾಲಕಿಯರ ಎರಡು ದಿನಗಳ ಜಿಲ್ಲಾಮಟ್ಟದ ಯುನೈಟೆಡ್ ಕಪ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಮಕ್ಕಳು ಕ್ರೀಡಾಮನೋಭಾವದಿಂದ ಭಾಗವಹಿಸಬೇಕು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ನಿರಂತರ ಅಭ್ಯಾಸದಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.
ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ, ಶಿಸ್ತಿನ ಮೂಲಕ ದಾರಿ ಸಾಗಿದಲ್ಲಿ ಮಾತ್ರ ಬದುಕಿನ ಪ್ರತಿ ಹಂತಗಳಲ್ಲಿ ಒಂದೊಂದು ಮೆಟ್ಟಿಲನ್ನು ಹತ್ತಲು ಸಾಧ್ಯ. ಜೀವನದಲ್ಲಿ ಓದುವುದು, ಆಡುವುದು, ಕೇಳುವುದು, ಹೇಳುವುದು ಮುಖ್ಯವಾಗುವುದಿಲ್ಲ. ಅದು ಶಿಸ್ತಿನಿಂದ ಇದ್ದಾಗ ಮಾತ್ರ ಸಮರ್ಪಕವಾಗಿರುತ್ತದೆ. ಕ್ರೀಡೆ ಎಂದರೆ ಕೇವಲ ಆಟವಲ್ಲ. ಅದು ಪ್ರತಿ ವಿದ್ಯಾರ್ಥಿಗಳ ಪ್ರಮುಖ ಘಟ್ಟವಾಗುತ್ತದೆ. ಕ್ರೀಡೆ ಶಿಸ್ತುಬದ್ಧ ಜೀವನವನ್ನು ಕಲಿಸುತ್ತದೆ ಎಂದರು.
ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್ ಮಾತನಾಡಿದರು. ಡಿಡಿಪಿಯು ಚಂದ್ರಪ್ಪ ಗುಂಡಾಪಲ್ಲಿ, ಶಿವಮೊಗ್ಗ ಜಿಲ್ಲಾ ವಾಲಿಬಾಲ್ ಸಂಸ್ಥೆ ಕಾರ್ಯದರ್ಶಿ ಕೆ.ಎಸ್.ಶಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹ ನಿರ್ದೇಶಕ ರೇಖ್ಯಾ ನಾಯ್ಕ, ಫುಟ್‌ಬಾಲ್ ಸಂಸ್ಥೆ ಅಧ್ಯಕ್ಷ ಶ್ರೀನಾಥ್, ಕಾರ್ಯದರ್ಶಿ ಡಾ.ಪ್ರಸನ್ನ, ಪ್ರತಿಭಾ ಜಾಫರ್, ರವೀಂದ್ರ ಪಾಟೀಲ್, ಹಿರಿಯ ವಾಲಿಬಾಲ್ ಆಟಗಾರ ರಾಮಣ್ಣ, ಲಯನ್ಸ್ ಕ್ಲಬ್ ಅಧ್ಯಕ್ಷ ಪರಮೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net