

ಶಿವಮೊಗ್ಗ: ಕ್ರೀಡೆಯಿಂದ ಮಾನಸಿಕ ಆರೋಗ್ಯ ದೊರೆಯುವುದರ ಜತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಹಾಗಾಗಿ ಪಠ್ಯದಂತೆ ಕ್ರೀಡೆಯನ್ನೂ ವಿದ್ಯಾರ್ಥಿಗಳು ಸ್ವೀಕರಿಸಬೇಕು ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ್ ಹೇಳಿದರು.
ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಶಿವಮೊಗ್ಗ ತಾಲೂಕಿನ ನಿದಿಗೆ ಮತ್ತು ಬಿ.ಬೀರನಹಳ್ಳಿ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 14 ವರ್ಷದೊಳಗಿನ ಬಾಲಕ-ಬಾಲಕಿಯರ ವಲಯ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪಠ್ಯ ಕಲಿಕೆಗೆ ಆದ್ಯತೆ ಕೊಡುವ ಮಕ್ಕಳು ಕ್ರೀಡೆಯನ್ನು ನಿರ್ಲಕ್ಷ್ಯಿಸುತ್ತಿದ್ದಾರೆ. ಆದರೆ ಪಠ್ಯದಷ್ಟೇ ಕ್ರೀಡೆಯೂ ಮುಖ್ಯ ಎಂದರು.
ಮಾನಸಿಕ ಸಮತೋಲನ ಮತ್ತು ಆರೋಗ್ಯಕ್ಕೆ ಕ್ರೀಡೆ ಪೂರಕವಾಗಿದೆ. ಕ್ರೀಡೆ ಕೇವಲ ಕ್ರೀಡೆಯಲ್ಲ, ಆಟವಲ್ಲ, ಅದೊಂದು ಸಂಸ್ಕೃತಿ ಮತು ಸಂಸ್ಕಾರ. ಇದನ್ನು ಬೆಳೆಸಿಕೊಂಡಾಗ ಇನ್ನಷ್ಟು ಪ್ರಜ್ವಲಿಸಲು ಸಾಧ್ಯ. ಶಿಕ್ಷಕರು ಎಲ್ಲ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್ ಮಾತನಾಡಿ, ಕ್ರೀಡೆಯನ್ನು ಒಂದು ಸ್ಪರ್ಧೆ ಎಂದು ಪರಿಗಣಿಸದೆ ಕ್ರೀಡೋತ್ಸವವಾಗಿ ಕಾಣಬೇಕು. ಇದರ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಒಂದು ನಿರ್ದಿಷ್ಟ ಗುರಿಯನ್ನು ವಿದ್ಯಾರ್ಥಿ ಹೊಂದಿದಾಗ ಮಾತ್ರ ಆತನಿಂದ ಸಾಧನೆ ಸಾಧ್ಯ. ಕ್ರೀಡೆಯಲ್ಲೂ ಗೆಲುವಿನ ಗುರಿ ಇರಬೇಕು. ಅದು ಕ್ರೀಡಾ ಸ್ಫೂರ್ತಿಯಾಗಿರಬೇಕು. ಛಲದೊಂದಿಗೆ ಆಡಿದಾಗ ಮಾತ್ರ ಅದರಲ್ಲಿ ಉನ್ನತಿ ಕಾಣಲು ಸಾಧ್ಯ. ಮಕ್ಕಳಲ್ಲಿ ಅಪರಿಮಿತ ಪ್ರತಿಭೆ ಇದೆ. ಅದನ್ನು ಬೆಳಕಿಗೆ ತರುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡುವ ಕೆಲಸವಾಗಬೇಕೆಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಮಾತನಾಡಿ, ಕ್ರೀಡೆಯೂ ವಿದ್ಯಾರ್ಥಿ ಜೀವನದ ಒಂದು ಅವಿಭಾಜ್ಯ ಅಂಗ. ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಕ್ರೀಡೆ ಮುಖ್ಯ. ಉತ್ತಮ ಸಾಧನೆ ಮಾಡುವವರಿಗೆ ದೇಶ-ವಿದೇಶದಲ್ಲಿ ಪ್ರತಿಭೆ ಬೆಳಗಿಸುವ ಅವಕಾಶ ಕ್ರೀಡೆಯಲ್ಲ್ಲಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಕೆಲಸವಾಗಬೇಕು ಎಂದರು.
24 ಶಾಲೆಯ ಒಂದು ಸಾವಿರದಷ್ಟು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಹೊನ್ನವಿಲೆ ಶಾಲೆ ಮುಖ್ಯ ಶಿಕ್ಷಕ ಗಿರಿಯಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್, ನಿದಿಗೆ ಗ್ರಾಪಂ ಅಧ್ಯಕ್ಷ ನಾಗರಾಜಪ್ಪ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರುದ್ರಪ್ಪ, ತಾಲೂಕು ಅಧ್ಯಕ್ಷ ರವಿ ಉಪಸ್ಥಿತರಿದ್ದರು.