PHOTOS | ಭಾರತದ ಕ್ರೀಡಾ ದಂಪತಿ ಸಾಲಿಗೆ ದೀಪಿಕಾ-ಅತನು, ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ?

sports wedding
Published on

ಬೆಂಗಳೂರು: ಅನೇಕ ಸವಾಲುಗಳನ್ನು ಎದುರಿಸಿ ಮುನ್ನಡೆಯುವುದರಲ್ಲೇ ಕ್ರೀಡಾಪಟುಗಳ ವೃತ್ತಿಜೀವನದ ಯಶಸ್ಸು ಅಡಗಿರುತ್ತದೆ. ಕ್ರೀಡಾಪಟುಗಳ ದಿನಚರಿ ಸಾಮಾನ್ಯ ಜನರಿಗಿಂತ ಭಿನ್ನವಾಗಿರುತ್ತದೆ. ಕ್ರೀಡಾಪಟುಗಳು ಸೋಲು ಬಂದಾಗ ಎದೆಗುಂದಬಾರದು, ಗೆಲುವು ಸಿಕ್ಕಾಗ ಮೈಮರೆಯಬಾರದು. ಇದನ್ನೆಲ್ಲ ಅರ್ಥಮಾಡಿಕೊಳ್ಳಲು ಅವರಿಗೆ ಸೂಕ್ತ ಜೀವನ ಸಂಗಾತಿ ಅಗತ್ಯ. ಈ ಜೀವನ ಸಂಗಾತಿಯೂ ಕ್ರೀಡಾಪಟುವೇ ಆಗಿದ್ದರೆ ಆಗ ಎಲ್ಲವೂ ಸುಲಭ ಎನಿಸಬಹುದು. ಕ್ರೀಡಾಜೀವನದ ಸವಾಲಿನ ಬಗ್ಗೆ ಇಬ್ಬರಿಗೂ ಪರಸ್ಪರ ತಿಳಿದಿರುವುದರಿಂದ ದಾಂಪತ್ಯ ಜೀವನವೂ ಸುಗಮವಾಗಿ ಸಾಗುತ್ತದೆ. ಭಾರತದಲ್ಲಿ ಇಂಥ ಹಲವು ಕ್ರೀಡಾ ದಂಪತಿಗಳಿದ್ದಾರೆ. ಈ ಪಟ್ಟಿಗೆ ಈಗ ಬಿಲ್ಗಾರರಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್​ ಹೊಸ ಸೇರ್ಪಡೆಯಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದ್ದ ದೀಪಿಕಾ ಮತ್ತು ಅತನು, ಪ್ರತಿಷ್ಠಿತ ಕ್ರೀಡಾಕೂಟದ ಮುಂದೂಡಿಕೆಯಿಂದಾಗಿ ಕರೊನಾ ಹಾವಳಿಯ ನಡುವೆಯೂ ಮಂಗಳವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂದಿನ ವರ್ಷ ಟೋಕಿಯೊದಲ್ಲಿ ಇಬ್ಬರೂ ಸ್ಪರ್ಧೆಗಿಳಿದರೆ, ಒಂದೇ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಭಾರತದ 2ನೇ ದಂಪತಿ ಎನಿಸಲಿದ್ದಾರೆ. ಟೆನಿಸ್​ ದಿಗ್ಗಜ ಲಿಯಾಂಡರ್​ ಪೇಸ್​ ಅವರ ತಂದೆ ವೇಸ್​ ಪೇಸ್​ ಮತ್ತು ತಾಯಿ ಜೆನ್ನಿಫರ್​ ಈ ಸಾಧನೆ ಮಾಡಿದ ಮೊದಲ ದಂಪತಿಯಾಗಿದ್ದಾರೆ. ಅವರಿಬ್ಬರು 1972ರ ಮ್ಯೂನಿಚ್​ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ್ದರು. ಆಗ ವೇಸ್​ ಪೇಸ್​ ಭಾರತ ಹಾಕಿ ತಂಡದ ಆಟಗಾರರಾಗಿದ್ದರೆ, ಜೆನ್ನಿಫರ್​ ಬಾಸ್ಕೆಟ್​ಬಾಲ್​ ತಂಡದ ಆಟಗಾರ್ತಿಯಾಗಿದ್ದರು.

ಭಾರತೀಯ ಕ್ರೀಡಾಲೋಕ ಕಂಡ ಇದುವರೆಗಿನ ಕೆಲ ಪ್ರಮುಖ ಕ್ರೀಡಾ ದಂಪತಿಗಳ ವಿವರ ಇಲ್ಲಿದೆ:


ದಿನೇಶ್​ ಕಾರ್ತಿಕ್​-ದೀಪಿಕಾ ಪಲ್ಲಿಕಲ್​

ತಮಿಳುನಾಡಿನ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ದಿನೇಶ್​ ಕಾರ್ತಿಕ್​ ಮತ್ತು ಕಾಮನ್ವೆಲ್ತ್​ ಗೇಮ್ಸ್​-ಏಷ್ಯನ್​ ಗೇಮ್ಸ್​ ಪದಕ ವಿಜೇತ ಸ್ಕ್ವಾಷ್​ ಆಟಗಾರ್ತಿ ದೀಪಿಕಾ ಪಲ್ಲಿಕಲ್​ 2015ರಲ್ಲಿ ಹಿಂದು ಮತ್ತು ಕ್ರಿಶ್ಚಿಯನ್​ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. ಒಬ್ಬರೇ ಫಿಟ್ನೆಸ್​ ಕೋಚ್​ ಅವರಿಂದ ತರಬೇತಿ ಪಡೆಯುತ್ತಿದ್ದ ವೇಳೆ ಇಬ್ಬರ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು.

ಇಶಾಂತ್​ ಶರ್ಮ-ಪ್ರತಿಮಾ ಸಿಂಗ್​

ಭಾರತ ತಂಡದ ವೇಗಿ ಇಶಾಂತ್​ ಶರ್ಮ ಅವರ ಪತ್ನಿ ಪ್ರತಿಮಾ ಸಿಂಗ್​ ಭಾರತ ಬಾಸ್ಕೆಟ್​ಬಾಲ್​ ತಂಡದ ಮಾಜಿ ಆಟಗಾರ್ತಿ. 2016ರ ಡಿಸೆಂಬರ್​ನಲ್ಲಿ ಇವರ ವಿವಾಹ ನಡೆದಿತ್ತು. ದೆಹಲಿಯಲ್ಲಿ ನಡೆದ ಬಾಸ್ಕೆಟ್​ಬಾಲ್​ ಲೀಗ್​ ಒಂದರ ಉದ್ಘಾಟನಾ ಸಮಾರಂಭದ ವೇಳೆ ಇವರಿಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಬಳಿಕ ಪ್ರೀತಿಸಿ ಮದುವೆಯಾಗಿದ್ದರು.

ಹೀನಾ ಸಿಧು-ರೋನಕ್​ ಪಂಡಿತ್​

ಭಾರತದ ಸ್ಟಾರ್​ ಶೂಟರ್​ ಹೀನಾ ಸಿಧು ಅವರ ಪತಿ ರೋನಕ್​ ಪಂಡಿತ್​ ಕೂಡ ಮಾಜಿ ಶೂಟರ್​. 2013ರಲ್ಲಿ ಇವರಿಬ್ಬರ ವಿವಾಹವಾಗಿತ್ತು. ಬಳಿಕ ಹೀನಾ ಸಿಧು ಅವರಿಗೆ ರೋನಕ್​ ಪಂಡಿತ್​ ಅವರೇ ಕೋಚ್​ ಕೂಡ ಆಗಿದ್ದಾರೆ.

ಮಿಲ್ಖಾ ಸಿಂಗ್​-ನಿರ್ಮಲಾ ಕೌರ್

ಹಾರುವ ಸಿಖ್​ ಎಂದೇ ಖ್ಯಾತರಾದ ಅಥ್ಲೆಟಿಕ್​ ದಿಗ್ಗಜ ಮಿಲ್ಖಾ ಸಿಂಗ್​ ಅವರ ಪತ್ನಿ ನಿರ್ಮಲಾ ಕೌರ್​ ಕೂಡ ಮಾಜಿ ಕ್ರೀಡಾಪಟು. ನಿರ್ಮಲಾ ಭಾರತ ವಾಲಿಬಾಲ್​ ತಂಡದ ನಾಯಕಿಯಾಗಿದ್ದರು. ಮಿಲ್ಖಾ ಸಿಂಗ್​ 1960ರ ಒಲಿಂಪಿಕ್ಸ್​ನ 400 ಮೀಟರ್​ ಓಟದಲ್ಲಿ ಪದಕ ಜಯಿಸುವ ಸನಿಹ ಬಂದು 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್​ ಎಂಬ ಹೆಗ್ಗಳಿಕೆಯೂ ಅವರದಾಗಿದೆ.

ಮಂಜೀತ್​ ಕೌರ್​-ಗುರ್ವಿಂದರ್​ ಸಿಂಗ್​ ಚಾಂಡಿ

ಭಾರತ ಹಾಕಿ ತಂಡದ ಫಾರ್ವಡ್​ರ್ ಆಟಗಾರ ಗುರ್ವಿಂದರ್​ ಸಿಂಗ್​ ಅವರ ಪತ್ನಿ ಮಂಜೀತ್​ ಕೌರ್​ 2006 ಮತ್ತು 2010ರ ಏಷ್ಯನ್​ ಗೇಮ್ಸ್​ ರಿಲೇ ಸ್ಪರ್ಧೆಯ ಸ್ವರ್ಣ ಪದಕ ವಿಜೇತ ಅಥ್ಲೀಟ್​ ಆಗಿದ್ದಾರೆ. 2015ರಲ್ಲಿ ಇವರ ವಿವಾಹ ನಡೆದಿತ್ತು.

ಸೈನಾ ನೆಹ್ವಾಲ್​-ಪಿ. ಕಶ್ಯಪ್​

ಬ್ಯಾಡ್ಮಿಂಟನ್​ ತಾರೆಯರಾದ ಸೈನಾ ನೆಹ್ವಾಲ್​ ಮತ್ತು ಪಿ. ಕಶ್ಯಪ್​ ಪರಸ್ಪರ ಪ್ರೀತಿಸುತ್ತಲೇ ಕ್ರೀಡಾ ಜೀವನದಲ್ಲಿ ಯಶಸ್ಸು ಕಂಡವರು. 2018ರಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಪಿ. ಗೋಪಿಚಂದ್​-ಪಿವಿವಿ ಲಕ್ಷ್ಮಿ

ಆಲ್​ ಇಂಗ್ಲೆಂಡ್​ ಬ್ಯಾಡ್ಮಿಂಡ್​ ಚಾಂಪಿಯನ್​ಷಿಪ್​ ವಿಜೇತ ಹಾಗೂ ರಾಷ್ಟ್ರೀಯ ಬ್ಯಾಡ್ಮಿಂಟನ್​ ತಂಡದ ಕೋಚ್​ ಪಿ. ಗೋಪಿಚಂದ್​ ಅವರ ಪತ್ನಿಯೂ ಮಾಜಿ ಬ್ಯಾಡ್ಮಿಂಟನ್​ ಆಟಗಾರ್ತಿ. ಇಬ್ಬರೂ ರಾಷ್ಟ್ರೀಯ ಟೂರ್ನಿಗಳಲ್ಲಿ ಜತೆಯಾಗಿ ಆಡುತ್ತಿರುವಾಗ ಪ್ರೀತಿ ಅರಳಿತ್ತು. ಪಿವಿವಿ ಲಕ್ಷ್ಮಿ ರಾಷ್ಟ್ರೀಯ ಚಾಂಪಿಯನ್​ ಕೂಡ ಆಗಿದ್ದರು. ಇವರ ಪುತ್ರಿ ಗಾಯತ್ರಿ ಕೂಡ ಈಗ ಬ್ಯಾಡ್ಮಿಂಟನ್​ ಆಟಗಾರ್ತಿಯಾಗಿದ್ದಾರೆ.

ವಿನೇಶ್​ ಪೋಗಟ್​-ಸೋಮ್​ವೀರ್​ ರಾಥಿ

ಕಾಮನ್ವೆಲ್ತ್ ಮತ್ತು ಏಷ್ಯನ್​ ಗೇಮ್ಸ್​ ಸ್ವರ್ಣ ಪದಕ ವಿಜೇತೆ ವಿನೇಶ್​ ಪೋಗಟ್​ ಅವರ ಪತಿ ಸೋಮ್​ವೀರ್​ ರಾಥಿ ಕೂಡ ಪೈಲ್ವಾನ್​ ಆಗಿದ್ದಾರೆ. 2018ರಲ್ಲಿ ಇವರ ವಿವಾಹ ನಡೆದಿತ್ತು.

ಗೀತಾ ಪೋಗಟ್​-ಪವನ್​ ಕುಮಾರ್



2010ರ ದೆಹಲಿ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ಜಯಿಸಿದ್ದ ಮತ್ತು ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆ ಹೊಂದಿರುವ ಗೀತಾ ಪೋಗಟ್​ ಅವರ ಪತಿ ಪವನ್​ ಕುಮಾರ್​ ಕೂಡ ಪೈಲ್ವಾನ್​ ಆಗಿದ್ದಾರೆ. 2016ರಲ್ಲಿ ವಿವಾಹವಾದ ದಂಪತಿಗೆ ಈ ವರ್ಷ ಮುದ್ದಾದ ಮಗುವೂ ಜನಿಸಿದೆ.


ಸಾಕ್ಷಿ ಮಲಿಕ್​-ಸತ್ಯವ್ರತ ಕದಿಯಾನ್​

ರಿಯೋ ಒಲಿಂಪಿಕ್ಸ್​ ಕಂಚು ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್​ ಸಹ-ಪೈಲ್ವಾನ್​ ಸತ್ಯವ್ರತ ಕದಿಯಾನ್​ ಅವರನ್ನು ವರಿಸಿದ್ದಾರೆ. 2016ರಲ್ಲಿ ಇವರಿಬ್ಬರ ವಿವಾಹ ನಡೆದಿತ್ತು. ಸತ್ಯವ್ರತ 2014ರ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ರಜತ ಪದಕ ಜಯಿಸಿದ್ದರು.

ಸಾನಿಯಾ ಮಿರ್ಜಾ-ಶೋಯಿಬ್​ ಮಲಿಕ್​

ಭಾರತದ ಟೆನಿಸ್​ ತಾರೆ ಸಾನಿಯಾ ಮಿರ್ಜಾ ಅವರ ಪತಿ ಶೋಯಿಬ್​ ಮಲಿಕ್​ ಪಾಕಿಸ್ತಾನದ ಕ್ರಿಕೆಟಿಗ. ದೇಶದ ಗಡಿಯನ್ನು ಮೀರಿ ಪ್ರೀತಿಸಿದ್ದ ಇವರಿಬ್ಬರು 2010ರಲ್ಲಿ ಭಾರಿ ವಿವಾದದ ನಡುವೆ ವಿವಾಹವಾಗಿದ್ದರು. ಇಬ್ಬರಿಗೆ ಈಗ ಇಜಾನ್​ ಎಂಬ ಪುತ್ರನೂ ಇದ್ದಾನೆ.

ಬಬಿತಾ ಪೋಗಟ್​-ವಿವೇಕ್​ ಸುಹಾಗ್​

ಪೋಗಟ್​ ಸಹೋದರಿಯರ ಪೈಕಿ ಹಿರಿಯ ಇಬ್ಬರಂತೆ ಬಬಿತಾ ಪೋಗಟ್​ ಕೂಡ ಕುಸ್ತಿಪಟುವನ್ನೇ ವಿವಾಹವಾಗಿದ್ದಾರೆ. ಕಾಮನ್ವೆಲ್ತ್​ ಗೇಮ್ಸ್ ಪದಕ ವಿಜೇತೆ ಬಬಿತಾ ಅವರ ಪತಿ ವಿವೇಕ್​ ಸುಹಾಗ್​ ಕೂಡ ಹಲವು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ್ದಾರೆ.

ಅಂಜು ಬಾಬಿ ಜಾರ್ಜ್​-ರಾಬರ್ಟ್ ಬಾಬಿ ಜಾರ್ಜ್​

ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ ಪದಕ ವಿಜೇತೆ ಲಾಂಗ್​ ಜಂಪ್​ ತಾರೆ ಅಂಜು ಬಾಬಿ ಜಾರ್ಜ್​ ಅವರ ಪತಿ ರಾಬರ್ಟ್​ ಬಾಬಿ ಜಾರ್ಜ್ ಕೂಡ ಮಾಜಿ ರಾಷ್ಟ್ರೀಯ ಟ್ರಿಪಲ್​ ಜಂಪ್​ ಪಟು. ವಿವಾಹದ ನಂತರ ಅವರು ಅಂಜುಗೆ ಕೋಚ್​ ಕೂಡ ಆಗಿದ್ದರು. ಇದಕ್ಕಾಗಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿಯೂ ಒಲಿದಿತ್ತು.

ಸಿಕ್ಕಿರೆಡ್ಡಿ-ಸುಮೀತ್ ರೆಡ್ಡಿ

ಬ್ಯಾಡ್ಮಿಂಟನ್​ನಲ್ಲಿ ಹಲವಾರು ಆಟಗಾರರು ಪರಸ್ಪರ ಪ್ರೀತಿ ಮದುವೆಯಾಗಿದ್ದಾರೆ. ಭಾರತದ ಡಬಲ್ಸ್​ ತಾರೆಯರಾದ ಸಿಕ್ಕಿ ರೆಡ್ಡಿ ಮತ್ತು ಸುಮೀತ್​ ರೆಡ್ಡಿ ದಂಪತಿ ಕೂಡ ಈ ಪಟ್ಟಿಯಲ್ಲಿದ್ದಾರೆ. 2019ರಲ್ಲಿ ಹೈದರಾಬಾದ್​ನಲ್ಲಿ ಸಿಕ್ಕಿ-ಸುಮೀತ್ ವಿವಾಹ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net