

ಬೆಂಗಳೂರು: ರಾಜ್ಯದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಪ್ಪತ್ತು ಎಕರೆ ವ್ಯಾಪ್ತಿಯ "ಸ್ಪೋರ್ಟ್ಸ್ ಸಿಟಿ' ನಿರ್ಮಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದ್ದು, ಮುಂಬರುವ ದಿನಗಳಲ್ಲಿ ಅದನ್ನು ಕಾರ್ಯಗತಗೊಳಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ರಾಜಭವನದ ಗಾಜಿನ ಮನೆಯಲ್ಲಿ ಮಂಗಳವಾರ ನಡೆದ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ (ಕೆಒಎ) 2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಯುವಕರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಯುವಕರಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಸಂಕಲ್ಪ ತೊಟ್ಟು ಶ್ರಮದಿಂದ ಕ್ರೀಡಾ ಅಭ್ಯಾಸ ನಡೆಸಿ, ರಾಜ್ಯಕ್ಕೆ ಮತ್ತು ದೇಶಕ್ಕೆ ಕೀರ್ತಿ ತಂದುಕೊಡಬೇಕು. ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದರು.
ಆಸ್ಟ್ರೆಲಿಯಾ, ಅಮೆರಿಕ, ಚೀನಾದಲ್ಲಿ ಕ್ರೀಡಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಅದೇ ಮಾದರಿಯ ಕ್ರೀಡಾ ವಿಶ್ವವಿದ್ಯಾಲಯವನ್ನು ರಾಜ್ಯದಲ್ಲಿ ಸ್ಥಾಪಿಸಿದರೆ, ಯುವಕರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದರು.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ರಾಜ್ಯದ 15 ಕ್ರೀಡಾಪಟುಗಳಿಗೆ ಕೆಒಎ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಜತೆಗೆ ಹಾಂಗ್ರೆೌ ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ 8 ಕ್ರೀಡಾಪಟುಗಳನ್ನೂ ಕೆಒಎ ವತಿಯಿಂದ ಸನ್ಮಾನಿಸಲಾಯಿತು. ಕ್ರೀಡಾ ಸಚಿವ ಬಿ. ನಾಗೇಂದ್ರ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ. ಗೋವಿಂದರಾಜು ಉಪಸ್ಥಿತರಿದ್ದರು.