

ಬೆಂಗಳೂರು: ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯವಾದ ವರ್ಷವಿದು. ಭಾರತ ಕ್ರೀಡಾಶಕ್ತಿಯಾಗಿ ಬೆಳೆಯುವ ನಿಟ್ಟಿನಲ್ಲಿ ಹೊಸ ಶಕ್ತಿ ತುಂಬಿತು. 2036ರ ಒಲಿಂಪಿಕ್ಸ್ ಆತಿಥ್ಯದ ನಿಟ್ಟಿನಲ್ಲಿ ಭಾರತ ಮೊದಲ ಹೆಜ್ಜೆಯನ್ನೂ ಇಟ್ಟಿದೆ. ಕ್ರಿಕೆಟ್ನಲ್ಲಿ ಭಾರತದ ಟಿ20 ವಿಶ್ವಕಪ್ ಗೆಲುವು ಮೇರು ಸಾಧನೆ ಎನಿಸಿದರೆ, ಚೆಸ್ನಲ್ಲಿ ಭಾರತ ಒಲಿಂಪಿಯಾಡ್, ವಿಶ್ವ ಚಾಂಪಿಯನ್ ಪಟ್ಟ ಗೆದ್ದು ಇತಿಹಾಸ ನಿರ್ಮಿಸಿತು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಸರ್ವಾಧಿಕ ಪದಕ ಗೆಲುವಿನ ಸಾಧನೆ ತೋರಿದರೆ, ಒಲಿಂಪಿಕ್ಸ್ನಲ್ಲಿ ಸ್ವರ್ಣ ಪದಕ ಗೆಲುವೊಂದೇ ಭಾರತಕ್ಕೆ ಕೊರತೆಯಾಗಿ ಕಾಡಿತು. ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಸತತ 2ನೇ ಒಲಿಂಪಿಕ್ಸ್ ಪದಕ ಒಲಿಯಿತು. ಹಲವು ಹೊಸ ಕ್ರೀಡಾತಾರೆಯರ ಉದಯದ ನಡುವೆ ಹಿರಿಯ-ಅನುಭವಿ ಕ್ರೀಡಾಪಟುಗಳ ವಿದಾಯಕ್ಕೂ ಸಾಯಾಯಿತು.
ಆಂಗ್ಲರಿಗೆ ತಿರುಗೇಟು, ಕಿವೀಸ್ಗೆ ಶರಣು!
ವರ್ಷಾರಂಭದಲ್ಲಿ ದಣ ಆಫ್ರಿಕಾದಲ್ಲಿ ಕೇಪ್ಟೌನ್ ಗೆದ್ದು ಶುಭಾರಂಭ ಕಂಡ ಭಾರತ 2 ಪಂದ್ಯಗಳ ಸರಣಿಯಲ್ಲಿ 1&1 ಸಮಬಲ ಸಾಧಿಸಿತು. ಬೆನ್ನಲ್ಲೇ ತವರಿನಲ್ಲಿ ಇಂಗ್ಲೆಂಡ್ ತಂಡದ ಬಾಜ್ಬಾಲ್ ಆಕ್ರಮಣದ ಎದುರು ಮೊದಲ ಟೆಸ್ಟ್ ಸೋತ ಭಾರತ ನಂತರ ಸತತ 4 ಟೆಸ್ಟ್ ಗೆಲ್ಲುವ ಮೂಲಕ ತಿರುಗೇಟು ನೀಡಿ 4-1ರಿಂದ ಸರಣಿ ವಶಪಡಿಸಿಕೊಂಡಿತು. ವರ್ಷದ ಕೊನೆಯಲ್ಲಿ ಬಾಂಗ್ಲಾ ಎದುರು ತವರಿನಲ್ಲಿ 2-0 ಸರಣಿ ಗೆದ್ದ ಭಾರತ, ಪ್ರವಾಸಿ ನ್ಯೂಜಿಲೆಂಡ್ ತಂಡದ ಎದುರು ತನ್ನ ಸ್ಪಿನ್ ಖೆಡ್ಡಾಗೆ ತಾನೇ ಬಿದ್ದು 0-3ರಿಂದ ವೈಟ್ವಾಷ್ ಮುಖಭಂಗ ಎದುರಿಸಿತು. ಇದರಿಂದ ತವರಿನಲ್ಲಿ ಸತತ 18 ಟೆಸ್ಟ್ ಸರಣಿ ಗೆಲುವಿನ ಓಟವೂ ಕೊನೆಗೊಂಡಿತು. ವರ್ಷಾಂತ್ಯದಲ್ಲಿ ಆಸೀಸ್ ನೆಲದ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಜಿದ್ದಾಜಿದ್ದಿನ ನಿರ್ವಹಣೆ ತೋರಿದರೂ 1-2 ಹಿನ್ನಡೆ ಅನುಭವಿಸಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶವೂ ಅನಿಶ್ಚಿತವೆನಿಸಿದೆ.
ದ್ರಾವಿಡ್ ನಿರ್ಗಮನ, ಗಂಭೀರ್ ಆಗಮನ
ಟಿ20 ವಿಶ್ವಕಪ್ ಗೆಲುವಿನೊಂದಿಗೆ ಕನ್ನಡಿಗ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಸಂಭ್ರಮದ ವಿದಾಯ ಪಡೆದರೆ, ಮೆಂಟರ್ ಆಗಿ ಕೆಕೆಆರ್ಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಜೋಶ್ನಲ್ಲಿ ಕೋಚ್ ಹುದ್ದೆಗೇರಿದ ಗೌತಮ್ ಗಂಭೀರ್ಗೆ ಕಠಿಣ ಸವಾಲು ಎದುರಾಗಿದೆ.
17 ವರ್ಷಗಳ ನಂತರ ಒಲಿದ ಟಿ20 ವಿಶ್ವಕಪ್
ಅಮೆರಿಕ&ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಜೂನ್ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ 17 ವರ್ಷಗಳ ಬಳಿಕ ಚಾಂಪಿಯನ್ ಪಟ್ಟವೇರಿ ಹೊಸ ಇತಿಹಾಸ ಬರೆಯಿತು. ಈ ಮೂಲಕ 11 ವರ್ಷಗಳ ಭಾರತ ಐಸಿಸಿ ಟ್ರೋಫಿ ಬರವನ್ನೂ ನೀಗಿಸಿಕೊಂಡಿತು. ಸತತ 8 ಜಯದೊಂದಿಗೆ ಭಾರತ ಅಜೇಯವಾಗಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡವೆನಿಸಿತು. ಫೈನಲ್ನಲ್ಲಿ ದ. ಆಫ್ರಿಕಾ ವಿರುದ್ಧ ಕೇವಲ 7 ರನ್ಗಳಿಂದ ರೋಚಕ ಗೆಲುವು ದಾಖಲಿಸಿತು. ಇದೇ ಸಂಭ್ರಮದ ನಡುವೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದರು. ತವರಿಗೆ ಮರಳಿದ ಭಾರತ ತಂಡಕ್ಕೆ ಮುಂಬೈನಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನರು ಅಭೂತಪೂರ್ವ ಸ್ವಾಗತ ನೀಡಿದರು. ಹಾಲಿ ವರ್ಷ ಆಡಿದ 26 ಟಿ20 ಪಂದ್ಯಗಳಲ್ಲಿ ಭಾರತ 24ರಲ್ಲಿ ಗೆದ್ದು (ಕೇವಲ 2 ಸೋಲು) ಪ್ರಾಬಲ್ಯ ಸಾಧಿಸಿತು.
ಪ್ಯಾರಿಸ್ನಲ್ಲಿ ಪದಕ ಪರಾಕ್ರಮ
ವಿನೂತನ ಆರಂಭೋತ್ಸವ ಕಂಡ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ 1 ಬೆಳ್ಳಿ, 5 ಕಂಚಿನ ಸಹಿತ 6 ಪದಕ ಗೆದ್ದುಕೊಂಡಿತು. ಇದು ಟೋಕಿಯೊಗಿಂತ 1 ಪದಕ ಕಡಿಮೆಯಾಗಿತ್ತು. ಪ್ರಮುಖವಾಗಿ ಚಿನ್ನ ತಪ್ಪಿದ ಬೇಸರ ಕಾಡಿತು. ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಟೋಕಿಯೊದಲ್ಲಿ ಗೆದ್ದ ಚಿನ್ನ ಉಳಿಸಿಕೊಳ್ಳಲು ವಿಲರಾಗಿ ರಜತಕ್ಕೆ ಸಮಾಧಾನ ಕಂಡರು. ಶೂಟರ್ ಮನು ಭಾಕರ್ ಅವಳಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದರೆ, ಕುಸ್ತಿಯಲ್ಲಿ ಅಮನ್ ಸೆಹ್ರಾವತ್ ಭಾರತೀಯ ಪೈಲ್ವಾನರ ಒಲಿಂಪಿಕ್ಸ್ ಪದಕ ಗೆಲುವಿನ ಓಟ ಕಾಯ್ದುಕೊಂಡರು. ಕೆಲ ಸ್ಪರ್ಧೆಗಳಲ್ಲಿ ಭಾರತೀಯರು 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಕಾರಣ ಮೊದಲ ಬಾರಿ ಎರಡಂಕಿ ಪದಕ ಗೆಲ್ಲುವ ಅವಕಾಶ ತಪ್ಪಿತು. ನಂತರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ, 13 ಕಂಚಿನ ಸಹಿತ ಒಟ್ಟು 29 ಪದಕದೊಂದಿಗೆ ತನ್ನ ಸರ್ವಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿತು. ಪ್ಯಾರಾ ಅಥ್ಲೆಟಿಕ್ಸ್ನಲ್ಲಿ 4 ಚಿನ್ನದ ಸಹಿತ ಒಟ್ಟು 17 ಪದಕ ಗೆದ್ದು ಇತಿಹಾಸ ನಿರ್ಮಿಸಿತು.
ವಿನೇಶ್ ಕೈತಪ್ಪಿದ ಪದಕ
ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ಅಮೋ ಗೆಲುವಿನೊಂದಿಗೆ ಓಫೈನಲ್ಗೇರಿದ ವಿನೇಶ್ ಪೋಗಟ್ ಮರುದಿನ ಅಧಿಕ ದೇಹತೂಕದಿಂದಾಗಿ ಅನರ್ಹಗೊಂಡರು. ಇದರಿಂದಾಗಿ ಭಾರತಕ್ಕೆ ಪದಕ ಕೈತಪ್ಪಿತು ಮತ್ತು ಕ್ರೀಡಾಪ್ರೇಮಿಗಳ ಹೃದಯ ಭಗ್ನಗೊಂಡಿತು. ಪದಕಕ್ಕಾಗಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೊರೆ ಹೋದರೂ ವಿನೇಶ್ಗೆ ಪದಕ ಒಲಿಯಲಿಲ್ಲ.
ಚೆಸ್ನಲ್ಲಿ ವಿಶ್ವ ವಿಕ್ರಮ
ಚದುರಂಗದಲ್ಲಿ ಭಾರತಕ್ಕೆ ಇದು ಸ್ಮರಣೀಯ ವರ್ಷ. ಚೆಸ್ ಒಲಿಂಪಿಯಾಡ್ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ಯುವ-ಅನುಭವಿಗಳ ತಂಡಗಳು ಮೊಟ್ಟಮೊದಲ ಬಾರಿಗೆ ಪ್ರಶಸ್ತಿ ಗೆದ್ದು ಇತಿಹಾಸ ಬರೆಯಿತು. ನಂತರ ಡಿ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಚೀನಾದ ಡಿಂಗ್ ಲಿರೆನ್ಗೆ ಸೋಲುಣಿಸಿ, ಈ ಸಾಧನೆ ಮಾಡಿದ ಅತಿಕಿರಿಯ ಮತ್ತು 2ನೇ ಭಾರತೀಯ ಎನಿಸಿದರು. ವರ್ಷಾಂತ್ಯಕ್ಕೆ ಮಹಿಳೆಯರ ವಿಶ್ವ ರಾಪಿಡ್ ಚೆಸ್ ಟೂರ್ನಿಯಲ್ಲಿ ಕೊನೆರು ಹಂಪಿ 2ನೇ ಬಾರಿ ಪ್ರಶಸ್ತಿ ಗೆದ್ದು ಬೀಗಿದರು.
ರಾಷ್ಟ್ರೀಯ ಕ್ರೀಡೆ ಹಾಕಿಗೆ ಮತ್ತೆ ಕಂಚಿನ ಕಿರೀಟ
ಟೋಕಿಯೊದಲ್ಲಿ 41 ವರ್ಷಗಳ ಪದಕ ಬರ ನೀಗಿಸಿದ್ದ ಭಾರತ ಹಾಕಿ ತಂಡ ಪ್ಯಾರಿಸ್ನಲ್ಲಿ ಸತತ 2ನೇ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದು ಗತವೈಭವ ನೆನಪಿಸಿತು. ನಾಯಕ ಹರ್ಮಾನ್ಪ್ರೀತ್ ಸಿಂಗ್ 10 ಗೋಲು ಬಾರಿಸಿ ಭಾರತದ ಗೆಲುವಿನ ರೂವಾರಿ ಎನಿಸಿದರೆ, ಗೋಲು ಕೀಪರ್ ಪಿಆರ್ ಶ್ರೀಜೇಶ್ಗೆ ಗೆಲುವಿನ ವಿದಾಯ ದೊರೆಯಿತು.
ಸ್ಪೇನ್ಗೆ ಯುರೋಕಪ್
ಸ್ಪೇನ್ನ ಯುವ ತಂಡ 12 ವರ್ಷಗಳ ಬಳಿಕ ಯುರೋಕಪ್ ಫುಟ್ಬಾಲ್ ಪ್ರಶಸ್ತಿ ಗೆದ್ದು ಇತಿಹಾಸ ಬರೆಯಿತು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 2-1 ಗೋಲುಗಳಿಂದ ಸ್ಪೇನ್ ಗೆಲುವು ಸಾಧಿಸಿತು. ಆಂಗ್ಲರಿಗೆ 58 ವರ್ಷಗಳಿಂದ ಪ್ರತಿಷ್ಠಿತ ಫುಟ್ಬಾಲ್ ಪ್ರಶಸ್ತಿ ಗೆಲ್ಲದ ನೋವು ಮುಂದುವರಿಯಿತು. ಅತ್ತ ಲಿಯೋನೆಲ್ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ 16ನೇ ಬಾರಿಗೆ ಕೋಪಾ ಅಮೆರಿಕ ಪ್ರಶಸ್ತಿ ಗೆದ್ದು ಪ್ರಾಬಲ್ಯ ಕಾಯ್ದುಕೊಂಡಿತು.
ಜಯ್ ಷಾ ಐಸಿಸಿ ಬಾಸ್
ಟೆಸ್ಟ್, ದೇಶೀಯ ಕ್ರಿಕೆಟಿಗರ ವೇತನ ಏರಿಕೆಯಂಥ ಕ್ರಮಗಳೊಂದಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಯಶಸ್ವಿ ಆಡಳಿತ ನಡೆಸಿದ ಜಯ್ ಷಾ ವರ್ಷಾಂತ್ಯದಲ್ಲಿ ಐಸಿಸಿ ಚೇರ್ಮನ್ ಆಗಿ ಅಧಿಕಾರ ಸ್ವೀಕರಿಸಿದರು.
ಬ್ಯಾಡ್ಮಿಂಟನ್ನಲ್ಲಿ ನಿರಾಸೆ
ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಇದು "ಗುಡ್ ಇಯರ್' ಆಗಲಿಲ್ಲ. ಪಿವಿ ಸಿಂಧು ವರ್ಷದುದ್ದಕ್ಕೂ ನಿರಾಸೆ ಕಂಡು ಕೊನೆಯಲ್ಲಿ 2 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡರು. ಒಲಿಂಪಿಕ್ಸ್ ಪದಕದ ನಿರೀಕ್ಷೆ ಮೂಡಿಸಿದ್ದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ ಪ್ಯಾರಿಸ್ನಲ್ಲಿ ನಿರಾಸೆ ಮೂಡಿಸಿದರೆ, ಲಕ್ಷ್ಯ ಸೇನ್ ಒಲಿಂಪಿಕ್ಸ್ ಕಂಚಿನ ಹೋರಾಟದಲ್ಲಿ ಸೋತರು.
*ಪ್ರಮುಖ ವಿದಾಯ
ಕ್ರಿಕೆಟ್: ಆರ್. ಅಶ್ವಿನ್, ಶಿಖರ್ ಧವನ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹ, ಮ್ಯಾಥ್ಯೂ ವೇಡ್, ಡೀನ್ ಎಲ್ಗರ್, ಕಾಲಿನ್ ಮನ್ರೋ, ಟಿಮ್ ಸೌಥಿ, ಜೇಮ್ಸ್ ಆಂಡರ್ಸನ್, ಮೊಯಿನ್ ಅಲಿ, ಡೇವಿಡ್ ಮಲಾನ್, ಮೊಹಮದ್ ಆಮೀರ್.
ಟಿ20: ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ರವೀಂದ್ರ ಜಡೇಜಾ, ಶಕೀಬ್ ಅಲ್ ಹಸನ್, ಟ್ರೆಂಟ್ ಬೌಲ್ಟ್.
*ಟೆನಿಸ್: ರಾಫೆಲ್ ನಡಾಲ್, ಆಂಡಿ ಮರ್ರೆ, ರೋಹನ್ ಬೋಪಣ್ಣ (ಭಾರತೀಯ ಟೆನಿಸ್).
*ಫುಟ್ಬಾಲ್: ಸುನೀಲ್ ಛೇಟ್ರಿ
*ಹಾಕಿ: ಪಿಆರ್ ಶ್ರೀಜೇಶ್, ರಾಣಿ ರಾಂಪಾಲ್
*ಕುಸ್ತಿ: ವಿನೇಶ್ ಪೋಗಟ್
*ಜಿಮ್ನಾಸ್ಟಿಕ್ಸ್: ದೀಪಾ ಕರ್ಮಾಕರ್
ನಿಧನ
ಅಂಶುಮಾನ್ ಗಾಯಕ್ವಾಡ್
ಡೇವಿಡ್ ಜಾನ್ಸನ್
*ವರ್ಷದ ವಿವಾಹ
ಪಿವಿ ಸಿಂಧು
ಟೆನಿಸ್ ಗ್ರಾಂಡ್ ಸ್ಲಾಂ ವಿಜೇತರು
ಆಸ್ಟ್ರೆಲಿಯನ್ ಓಪನ್: ಜನ್ನಿಕ್ ಸಿನ್ನರ್, ಅರಿನಾ ಸಬಲೆಂಕಾ.
ಫ್ರೆಂಚ್ ಓಪನ್: ಕಾಲೋರ್ಸ್ ಅಲ್ಕರಾಜ್, ಇಗಾ ಸ್ವಿಯಾಟೆಕ್.
ವಿಂಬಲ್ಡನ್: ಕಾಲೋರ್ಸ್ ಅಲ್ಕರಾಜ್, ಬಾರ್ಬೊರ ಕ್ರೆಜ್ಸಿಕೋವಾ.
ಯುಎಸ್ ಓಪನ್: ಜನ್ನಿಕ್ ಸಿನ್ನರ್, ಅರಿನಾ ಸಬಲೆಂಕಾ.
ಕ್ರೀಡಾತಾರೆಯರ ಬಾಳಲ್ಲಿ ವಿಚ್ಛೇದನ
ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕ್ ಕ್ರಿಕೆಟಿಗ ಶೋಯಿಬ್ ಮಲಿಕ್ ಜತೆಗಿನ 14 ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಿದ್ದು ವರ್ಷಾರಂಭದಲ್ಲಿ ಖಚಿತಗೊಂಡಿತು. ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ನತಾಶಾ ಸ್ಟಾಂಕೋವಿಕ್ ಜತೆಗಿನ 4 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನ ಪಡೆದುಕೊಂಡಿರುವುದನ್ನು ಜುಲೈನಲ್ಲಿ ಘೋಷಿಸಿದರು. ಕರ್ನಾಟಕದ ಕ್ರಿಕೆಟಿಗ ಮನೀಷ್ ಪಾಂಡೆ ಪತ್ನಿ ಆಶ್ರಿತಾ ಶೆಟ್ಟಿ ಅವರಿಂದ ದೂರವಾದರು.
ಕ್ರೀಡಾ ಲೀಗ್ ವಿಜೇತರು
ಐಪಿಎಲ್: ಕೋಲ್ಕತ ನೈಟ್ರೈಡರ್ಸ್
ಡಬ್ಲ್ಯುಪಿಎಲ್: ಆರ್ಸಿಬಿ
ಐಎಸ್ಎಲ್: ಮೋಹನ್ ಬಗಾನ್ ಎಸ್ಜಿ
ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್
ಪ್ರೊ ಕಬಡ್ಡಿ ಲೀಗ್: ಪುಣೇರಿ ಪಲ್ಟಾನ್
ಪ್ರಮುಖ ವಿವಾದಗಳು
*ದೇಶೀಯ ಕ್ರಿಕೆಟ್ನಲ್ಲಿ ಆಡದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ಔಟ್.
*ಐಪಿಎಲ್ ಪಂದ್ಯದ ಬಳಿಕ ಮೈದಾನದಲ್ಲೇ ಕೆಎಲ್ ರಾಹುಲ್ಗೆ ಕ್ಲಾಸ್ ತೆಗೆದುಕೊಂಡ ಲಖನೌ ಸೂಪರ್ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ; ಫ್ಯಾನ್ಸ್ ಆಕ್ರೋಶ.
*ಪ್ಯಾರಿಸ್ ಒಲಿಂಪಿಕ್ಸ್ ವೇಳೆ ಅಲ್ಜೀರಿಯಾ ಬಾಕ್ಸರ್ ಇಮಾನೆ ಖೆಲಿಫ್ ಹೆಣ್ಣಲ್ಲ ಗಂಡು ಎಂಬ ಆರೋಪ; ಲಿಂಗತ್ವ ವಿವಾದದ ನಡುವೆಯೂ ಸ್ವರ್ಣ ಪದಕ ಗೆಲುವು.
*ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಗ್ರಾಮಕ್ಕೆ ತನ್ನ ಗುರುತಿನ ಕಾರ್ಡ್ನಲ್ಲಿ ಸಹೋದರಿಯನ್ನು ಕಳುಹಿಸಿದ ಭಾರತದ ಕುಸ್ತಿಪಟು ಅಂತಿಮ್ ಪಾಂಗಲ್ ಗಡಿಪಾರು.
*ಪ್ಯಾರಿಸ್ ಒಲಿಂಪಿಕ್ಸ್ಗೆ ಮುನ್ನ ಆಯ್ಕೆ ಟ್ರಯಲ್ಸ್ ಬಗ್ಗೆ ಲಿಖಿತ ಭರವಸೆಗಾಗಿ ಮ್ಯಾಟ್ ಮೇಲೆ ಕುಳಿತು ಸ್ಪರ್ಧೆಗೆ ಅಡ್ಡಿಪಡಿಸಿದ ವಿನೇಶ್ ಪೋಗಟ್.
ಕಿರಿಯರ ಕ್ರಿಕೆಟ್ನಲ್ಲಿ ಕರ್ನಾಟಕಕ್ಕೆ ಕಿರೀಟ
ಸೀನಿಯರ್ ತಂಡ ದೇಶೀಯ ಕ್ರಿಕೆಟ್ನಲ್ಲಿ ನೀರಸ ನಿರ್ವಹಣೆ ಮುಂದುವರಿಸಿದ ನಡುವೆ ಕರ್ನಾಟಕದ ಕಿರಿಯರು ಅವಳಿ ಪ್ರಶಸ್ತಿ ಗೆಲುವಿನೊಂದಿಗೆ ಭವಿಷ್ಯ ಸುರತವಾಗಿದೆ ಎಂಬ ಸಂದೇಶ ರವಾನಿಸಿದರು. 19 ವಯೋಮಿತಿ ಕೂಚ್ ಬೆಹಾರ್ ಟ್ರೋಫಿ ಮತ್ತು 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿಯಲ್ಲಿ ಕರ್ನಾಟಕ ಮೊದಲ ಬಾರಿ ಪ್ರಶಸ್ತಿ ಜಯಿಸಿತು. ಕೂಚ್ ಬೆಹಾರ್ ಟ್ರೋಫಿ ಫೈನಲ್ನಲ್ಲಿ ರಾಜ್ಯದ ಯುವ ಬ್ಯಾಟರ್ ಪ್ರಖರ್ ಚತುರ್ವೇದಿ 400 ರನ್ ಸಿಡಿಸಿ ಇತಿಹಾಸ ಬರೆದರು.