ಪ್ಲೇಆಫ್ ಆಸೆ ಜೀವಂತವಿರಿಸಲು ಮುಂಬೈ ಹೋರಾಟ: ಜಯದ ಹಳಿಗೆ ಮರಳಲು ಪೈಪೋಟಿ

New-Project-1-1-2
Published on

ಲಖನೌ: ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಸ್ಥಾನದ ರೇಸ್‌ನಲ್ಲಿರುವ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್‌ಜೈಂಟ್ಸ್ ಐಪಿಎಲ್-17ರಲ್ಲಿ ಮಂಗಳವಾರ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಹಾರ್ದಿಕ್ ಪಾಂಡ್ಯ ಪಡೆಗೆ ಪ್ಲೇಆ್ ಆಸೆ ಜೀವಂತ ಉಳಿಸಿಕೊಳ್ಳಲು ಜಯದ ಅನಿವಾರ‌್ಯತೆಯಲ್ಲಿದ್ದರೆ, ಲಖನೌ ಕೂಡ ಗೆಲುವಿನ ಹಾದಿಗೆ ಮರಳುವ ತವಕದಲ್ಲಿದೆ.

ಏಕನಾ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿರುವ ಲಖನೌ ತಂಡ, ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸಿದೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 5 ಗೆಲುವು, 4 ಸೋಲಿನೊಂದಿಗೆ 10 ಅಂಕ ಕಲೆಹಾಕಿ ಸತತ ಮೂರನೇ ಬಾರಿ ಪ್ಲೇಆ್ನತ್ತ ಸಾಗಿದೆ. ಆದರೆ ನಾಯಕತ್ವದ ಬದಲಾವಣೆಯ ಬಳಿಕವೂ ಲಯ ಕಂಡುಕೊಳ್ಳದ ಮುಂಬೈ, ಆಡಿರುವ 9 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆದ್ದಿದ್ದು, ಉಳಿದ 5ರಲ್ಲಿ ಸೋತಿದೆ. ಸದ್ಯ ಆರು ಅಂಕ ಹೊಂದಿರುವ ಹಾರ್ದಿಕ್ ಪಾಂಡ್ಯ ಪಡೆ ತನ್ನ ಎಲ್ಲ ಲೀಗ್ ಪಂದ್ಯಗಳಲ್ಲಿ ಗೆದ್ದರಷ್ಟೇ ಮುಂದಿನ ಹಾದಿ ಸುಗಮವಾಗಲಿದೆ. ಬೌಲರ್‌ಗಳ ವೈಲ್ಯ ತಂಡಕ್ಕೆ ಮುಳುವಾಗಿ ಪರಿಣಮಿಸಿದೆ.

ಹಾರ್ದಿಕ್‌ಗೆ ಅಗ್ನಿಪರೀಕ್ಷೆ: ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕರಾಗಿ ಮತ್ತು ಆಟಗಾರನಾಗಿ ವೈಫಲ್ಯ ಅನುಭವಿಸಿದ್ದಾರೆ. 9 ಪಂದ್ಯಗಳಲ್ಲಿ 197 ರನ್‌ಗಳಿಸಿದ್ದು, ಬೌಲಿಂಗ್‌ನಲ್ಲಿ 4 ವಿಕೆಟ್ ಪಡೆದಿದ್ದಾರೆ. ತಂಡವನ್ನು ಪ್ಲೇಆ್ಗೇರಿಸುವಲ್ಲಿ ಹಾರ್ದಿಕ್‌ಗೆ ಅಗ್ನಿಪರೀಕ್ಷೆ ಎದುರಾಗಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವ ಬಗ್ಗೆ ಖಚಿತತೆ ಇಲ್ಲ. ಮುಂಬೈ ತಂಡ ಸರ್ವಾಂಗೀಣ ನಿರ್ವಹಣೆಯೊಂದಿಗೆ ಕಂಬ್ಯಾಕ್ ಮಾಡಿದರೆ 6ನೇ ಪ್ರಶಸ್ತಿ ಆಸೆ ಜೀವಂತವಿರಲಿದೆ. ತಿಲಕ್ ವರ್ಮ 9 ಪಂದ್ಯಗಳಲ್ಲಿ 3 ಅರ್ಧಶತಕಗಳ ನೆರವಿನಿಂದ 336 ರನ್‌ಗಳಿಸಿದರೆ, ರೋಹಿತ್ 311 ರನ್ ಪೇರಿಸಿದ್ದಾರೆ. ಸೂರ್ಯಕುಮಾರ್ ಕೂಡ ಲಯದಲ್ಲಿದ್ದು, ಭಾರತ ತಂಡದಿಂದ ಹೊರಬಿದ್ದ ಬಳಿಕ ಇಶಾನ್ ಕಿಶನ್ ರನ್‌ಗಳಿಸಲು ಪರದಾಡುತ್ತಿದ್ದಾರೆ. ಮುಂಬೈ ಪರ ಹಾಲಿ ಆವೃತ್ತಿಯಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ ಪ್ರದರ್ಶನ ಮಾತ್ರ ಪ್ಲಸ್ ಪಾಯಿಂಟ್ ಎನಿಸಿದೆ. ತಿಲಕ್ ವರ್ಮ ಸಿಕ್ಕ ಅವಕಾಶಗಳಲ್ಲಿ ತಕ್ಕ ಮಟ್ಟಿಗೆ ನೆರವಾಗಿದ್ದಾರೆ. ಬೌಲಿಂಗ್‌ನಲ್ಲಿ ಗೆರಾಲ್ಟ್ ಕೋಟ್‌ಜೀ ಗಾಯದ ಸಮಸ್ಯೆಗೆ ತುತ್ತಾಗಿರುವುದು ಹಿನ್ನಡೆ ತಂದಿದೆ.

ಮಯಾಂಕ್ ಆಡುವ ನಿರೀಕ್ಷೆ!: ಹಾಲಿ ಆವೃತ್ತಿಯಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿ ಉರಿ ವೇಗದ ಎಸೆತಗಳ ಮೂಲಕ ಗಮನಸೆಳೆದಿರುವ ಯುವ ವೇಗಿ ಮಯಾಂಕ್ ಯಾದವ್ ಮುಂಬೈ ವಿರುದ್ಧ ಕಣಕ್ಕಿಳಿಯುವ ನಿರೀಕ್ಷೆ ಇದೆ. ಎಲ್ಲ ರೀತಿಯ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ಮಯಾಂಕ್ ಆಡಲು ಫಿಟ್ ಆಗಿದ್ದಾರೆ ಎಂದು ಲಖನೌ ಬೌಲಿಂಗ್ ಕೋಚ್ ಮಾರ್ನ್ ಮಾರ್ಕೆಲ್ ತಿಳಿಸಿದ್ದಾರೆ. ಗಂಟೆಗೆ 150 ಕಿ.ಮೀ ವೇಗದಲ್ಲಿ ಸತತವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ 21 ವರ್ಷದ ಮಯಾಂಕ್, ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 6 ವಿಕೆಟ್ ಕಬಳಿಸಿದ್ದಾರೆ. ಆಡಿದ ಆರಂಭಿಕ ಎರಡೂ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಆದರೆ 3ನೇ ಪಂದ್ಯದ ವೇಳೆ ಗಾಯಗೊಂಡಿದ್ದರಿಂದ ಕೇವಲ 1 ಓವರ್ ಎಸೆದು ಮೈದಾನದಿಂದ ನಿರ್ಗಮಿಸಿದ್ದರು.

ಮುಖಾಮುಖಿ: 4

ಲಖನೌ: 3

ಮುಂಬೈ: 1

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net