ಪುಣೆಯಲ್ಲಿ ಕಿವೀಸ್​ಗೆ ಸ್ಪಿನ್​ ಖೆಡ್ಡಾ? ಸರಣಿ ಸಮಬಲ ಸಾಧಿಸಲು ಟೀಮ್​ ಇಂಡಿಯಾ ಯೋಜನೆ

web pitch
Published on

ಪುಣೆ: ಆಸ್ಟ್ರೆಲಿಯಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಭಾರತ ತಂಡ ವೇಗದ ಬೌಲಿಂಗ್​ ಸ್ನೇಹಿ ಪಿಚ್​ಗಳಲ್ಲಿ ಆಡಲು ಬಯಸಿತ್ತು. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಸರಣಿಯ ಬಳಿಕ ಬೆಂಗಳೂರಿನಲ್ಲೂ ವೇಗದ ಬೌಲರ್​ಗಳಿಗೆ ಸಹಕರಿಸುವಂಥ ಪಿಚ್​ ರೂಪಿಸಲಾಗಿತ್ತು. ಆದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 19 ವರ್ಷಗಳ ಬಳಿಕ ಸೋಲು ಅನುಭವಿಸಿದ ಬಳಿಕ ಭಾರತ ತಂಡ ತನ್ನ ಎಂದಿನ ತವರಿನ ಅಸ್ತ್ರವಾದ ಸ್ಪಿನ್​ ಬೌಲಿಂಗ್​ ಮೊರೆ ಹೋಗಲು ನಿರ್ಧರಿಸಿದೆ. ಸರಣಿ ಸಮಬಲ ಸಾಧಿಸಲು ಈಗ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಭಾರತ ತಂಡ ಎರಡನೇ ಟೆಸ್ಟ್​ ಪಂದ್ಯ ನಡೆಯಲಿರುವ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಸಂಪೂರ್ಣವಾಗಿ ಸ್ಪಿನ್​ ಸ್ನೇಹಿಯಾದ ಪಿಚ್​ ನಿರ್ಮಿಸುವ ನಿರೀಕ್ಷೆ ಇದೆ. ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ವಾಷಿಂಗ್ಟನ್​ ಸುಂದರ್​ ಸೇರ್ಪಡೆಯೂ ಇದರ ಸೂಚನೆಯೇ ಆಗಿದೆ ಎನ್ನಲಾಗಿದೆ.

ಗುರುವಾರದಿಂದ ನಡೆಯಲಿರುವ ಪುಣೆ ಟೆಸ್ಟ್​ಗೆ ಕಪ್ಪು ಮಣ್ಣಿನ ಲೋ ಬೌನ್ಸ್​ ಹೊಂದಿರುವ ಪಿಚ್​ ನಿರ್ಮಾಣಗೊಳ್ಳಲಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಕೇವಲ 46 ರನ್​ಗಳಿಗೆ ಆಲೌಟ್​ ಆಗಿ ನಂತರ ಚೇತರಿಸಿಕೊಳ್ಳಲಾಗದೆ ಭಾರತ 8 ವಿಕೆಟ್​ಗಳಿಂದ ಸೋಲು ಅನುಭವಿಸಿತು. ಇದರೊಂದಿಗೆ ಕಿವೀಸ್​ ಎದುರು 36 ವರ್ಷಗಳ ಬಳಿಕ ತವರಿನಲ್ಲಿ ಸೋಲುಂಡಿತು. ಇದು ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಸತತ 3ನೇ ಬಾರಿ ೈನಲ್​ಗೇರುವ ಭಾರತದ ಆಸೆಗೂ ಹಿನ್ನಡೆ ತಂದಿದೆ. ಹೀಗಾಗಿ ಪುಣೆ ಮಾತ್ರವಲ್ಲದೆ ನವೆಂಬರ್​ 1ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್​ನಲ್ಲೂ ಸಂಪೂರ್ಣ ಸ್ಪಿನ್​ ಸ್ನೇಹಿಯಾದ ಪಿಚ್​ನಲ್ಲಿ ಆಡಲು ಭಾರತ ಮುಂದಾಗಿದೆ. ಈ ಮೂಲಕ ಕಿವೀಸ್​ಗೆ ತನ್ನ ಪ್ರಬಲ ಅಸ್ತ್ರವಾದ ಸ್ಪಿನ್​ ಬೌಲಿಂಗ್​ ಮೂಲಕವೇ ತಿರುಗೇಟು ನೀಡಲು ಭಾರತ ಬಯಸಿದೆ.

ಬೆಂಗಳೂರಿನಲ್ಲಿ ಮೂವರು ಸ್ಪಿನ್ನರ್​ಗಳೊಂದಿಗೆ ಆಡಿದರೂ ಭಾರತಕ್ಕೆ ಹೆಚ್ಚಿನ ಲಾಭವಾಗಿರಲಿಲ್ಲ. ಆದರೆ ಪುಣೆಯ ಸ್ಪಿನ್​ ಸ್ನೇಹಿ ಪಿಚ್​ನಲ್ಲೂ ಭಾರತ ಇದೇ ತಂತ್ರ ಮುಂದುವರಿಸಿದರೆ ಹೆಚ್ಚಿನ ಯಶ ಕಾಣಬಹುದಾಗಿದೆ. ಆದರೆ ವಾಷಿಂಗ್ಟನ್​ ಸುಂದರ್​ ಸೇರ್ಪಡೆಯಿಂದಾಗಿ ಈಗ 3ನೇ ಸ್ಪಿನ್ನರ್​ ಯಾರಾಗುವರು ಎಂಬ ಬಗ್ಗೆ ಸ್ವಲ್ಪ ಗೊಂದಲ ಮೂಡಿದೆ.

ಪುಣೆಯಲ್ಲಿ ಈ ಮುನ್ನ 2 ಟೆಸ್ಟ್​ಗಳಷ್ಟೇ ನಡೆದಿದ್ದು, 2016-17ರಲ್ಲಿ ಆಸೀಸ್​ ಇಲ್ಲಿ 333 ರನ್​ಗಳಿಂದ ಭಾರತವನ್ನು ಮಣಿಸಿತ್ತು. ಆಗ ಆಸೀಸ್​ ಎಡಗೈ ಸ್ಪಿನ್ನರ್​ ಸ್ಟೀವ್​ ಓಕೀಫ್​ 12 ವಿಕೆಟ್​ ಕಬಳಿಸಿದ್ದರು. ಆಗ 40 ವಿಕೆಟ್​ಗಳಲ್ಲಿ 31 ವಿಕೆಟ್​ ಸ್ಪಿನ್ನರ್​ಗಳ ಪಾಲಾಗಿತ್ತು. 2019ರಲ್ಲಿ ದಣ ಆಫ್ರಿಕಾ ವಿರುದ್ಧ ಟೆಸ್ಟ್​ ಆಡಿದಾಗ ಭಾರತ ಇನಿಂಗ್ಸ್​ ಗೆಲುವು ಸಾಧಿಸಿತ್ತು. ವಿರಾಟ್​ ಕೊಹ್ಲಿ ಅಜೇಯ 254 ರನ್​ ಸಿಡಿಸಿದ್ದ ಆ ಪಂದ್ಯದಲ್ಲಿ ಭಾರತದ ಸ್ಪಿನ್ನರ್​ಗಳು ಮತ್ತು ವೇಗಿಗಳು ತಲಾ 10 ವಿಕೆಟ್​ ಹಂಚಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net