

ಚೆನ್ನೈ: ಕರೊನಾ ಕಾಲದಲ್ಲಿ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಮೊಟ್ಟಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನು ವೀಕ್ಷಿಸಲು ವೇದಿಕೆ ಸಜ್ಜಾಗಿದೆ. ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವೆ ಶನಿವಾರದಿಂದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಶೇ. 50 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಬಿಸಿಸಿಐನ ಈ ನಡೆ, ಮೊದಲ ಟೆಸ್ಟ್ ಸೋತು ಕುಗ್ಗಿರುವ ವಿರಾಟ್ ಕೊಹ್ಲಿ ಬಳಗಕ್ಕೆ ಹೆಚ್ಚಿನ ಬಲ ತಂದುಕೊಡಲಿದೆ. ಪ್ರೇಕ್ಷಕರ ಪ್ರೋತ್ಸಾಹದ ಬಲದಿಂದ ಪ್ರವಾಸಿ ತಂಡದ ಮೇಲೆ ಒತ್ತಡ ಹೇರಿ ಸೇಡು ತೀರಿಸಿಕೊಳ್ಳುವ ಅವಕಾಶ ಈಗ ಭಾರತ ತಂಡದ ಮುಂದಿದೆ.
ಕರೊನಾ ಕಾಲದಲ್ಲಿ ಬಿಸಿಸಿಐ ಆಯೋಜಿಸುತ್ತಿರುವ ಕ್ರಿಕೆಟ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ. ಈ ಮುನ್ನ ಯುಎಇಗೆ ಸ್ಥಳಾಂತರಗೊಂಡಿದ್ದ ಐಪಿಎಲ್ 13ನೇ ಆವೃತ್ತಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿರಲಿಲ್ಲ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಗೂ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿರಲಿಲ್ಲ. ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಕೂಡ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆದಿತ್ತು.
ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರುವ ದೃಷ್ಟಿಯಿಂದ ಸರಣಿಯ ಉಳಿದ ಮೂರೂ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಬೇಕಾಗಿರುವ ಭಾರತ ತಂಡ ತವರು ಪ್ರೇಕ್ಷಕರ ಉಪಸ್ಥಿತಿಯಿಂದ ಮನೋಬಲ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ. 2019ರ ಅಕ್ಟೋಬರ್ ಬಳಿಕ ಭಾರತ ತಂಡ ತವರು ಪ್ರೇಕ್ಷಕರ ಎದುರು ಆಡುತ್ತಿರುವ ಮೊದಲ ಪಂದ್ಯ ಇದಾಗಿರಲಿದೆ. ಭಾರತಕ್ಕೆ ಈಗ ವಿದೇಶಿ ಪ್ರವಾಸಿಗರಿಗೆ ಪ್ರವೇಶ ನೀಡಲಾಗುತ್ತಿಲ್ಲ. ಹೀಗಾಗಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡಕ್ಕೆ ಯಾವುದೇ ಬೆಂಬಲ ಸಿಗಲಾರದು.
ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ
2ನೇ ಟೆಸ್ಟ್ ವೀಕ್ಷಿಸಲು ಚೆಪಾಕ್ ಕ್ರೀಡಾಂಗಣಕ್ಕೆ ತೆರಳುವ ಪ್ರೇಕ್ಷಕರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಜತೆಗೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಇದಕ್ಕಾಗಿ ಪ್ರೇಕ್ಷಕರ ಪ್ರತಿ ಸೀಟಿನ ನಡುವೆ ಅಂತರ ಇಡಲಾಗಿದೆ. ಪ್ರೇಕ್ಷಕರ ಮೇಲೆ ಸಿಸಿಟಿವಿ ಕಣ್ಗಾವಲು ಇಡಲಾಗುತ್ತಿದ್ದು, ಮಾರ್ಗಸೂಚಿಗಳನ್ನು ಉಲ್ಲಂಸಿದಾಗ ಎಚ್ಚರಿಕೆ ನೀಡಲಾಗುವುದು. ಪದೇ ಪದೇ ಉಲ್ಲಂಘನೆ ಮಾಡಿದರೆ ಕ್ರೀಡಾಂಗಣದಿಂದಲೇ ಹೊರ ಕಳುಹಿಸಲಾಗುವುದು.
ಸಿಕ್ಸರ್ ಸಿಡಿದಾಗ ಚೆಂಡು ಸ್ಯಾನಿಟೈಸ್!
ಸರಣಿಗಾಗಿ ಜೈವಿಕ-ಸುರಕ್ಷಾ ವಲಯವನ್ನು ನಿರ್ಮಿಸಿಕೊಳ್ಳಲಾಗಿದೆ. ಪ್ರೇಕ್ಷಕರು ಬಯೋ-ಬಬಲ್‌ನಿಂದ ಹೊರಗಿನ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ ಸಿಕ್ಸರ್ ಸಿಡಿದಾಗ ಚೆಂಡು ಪ್ರೇಕ್ಷಕರ ಗ್ಯಾಲರಿಗೆ ಹೋಗಿ ಬಿದ್ದರೆ, ಚೆಂಡು ಮರಳಿ ಆಟಗಾರರ ಕೈಸೇರುವ ಮುನ್ನ ಅದನ್ನು ಸ್ಯಾನಿಟೈಸ್ ಮಾಡಲಾಗುವುದು.
ಕರೊನಾ ಲಕ್ಷಣವಿದ್ದರೆ ಪ್ರವೇಶವಿಲ್ಲ
ಕ್ರೀಡಾಂಗಣ ಪ್ರವೇಶಕ್ಕೆ ಮುನ್ನ ಎಲ್ಲ ಪ್ರೇಕ್ಷಕರ ತಾಪಮಾನ ಪರೀಕ್ಷಿಸಲಾಗುವುದು. ಪ್ರತಿ ಪ್ರವೇಶ ದ್ವಾರದ ಬಳಿ ಹ್ಯಾಂಡ್ ಸ್ಯಾನಿಟೈಸ್ ಇಡಲಾಗಿರುತ್ತದೆ. ಕರೊನಾ ಲಕ್ಷಣಗಳು (ಜ್ವರ, ಕೆಮ್ಮು, ನೆಗಡಿ) ಕಂಡು ಬಂದರೆ ಅಂಥವರಿಗೆ ಪ್ರವೇಶ ನಿರಾಕರಿಸುವ ಹಕ್ಕನ್ನು ಟಿಎನ್‌ಸಿಎ ಕಾಯ್ದಿರಿಸಿದೆ. ಕ್ರೀಡಾಂಗಣದ ಬಳಿಕ 4 ಆ್ಯಂಬ್ಯುಲೆನ್ಸ್, ವೈದ್ಯರನ್ನು ಒಳಗೊಂಡ ಮೆಡಿಕಲ್ ರೂಂ, ಐಸೋಲೇಷನ್ ರೂಂ ವ್ಯವಸ್ಥೆಗಳನ್ನೂ ಮಾಡಲಾಗಿದೆ.
ಪ್ರೇಕ್ಷಕರ ದುರ್ವರ್ತನೆಗೆ ನಿರ್ಬಂಧ
ಇತ್ತೀಚೆಗೆ ಆಸೀಸ್ ಪ್ರವಾಸದ ವೇಳೆ ಭಾರತ ತಂಡದ ಆಟಗಾರರು ಜನಾಂಗೀಯ ನಿಂದನೆಗಳನ್ನು ಎದುರಿಸಿದ್ದರು. ತವರಿನ ಸರಣಿಯಲ್ಲಿ ಅಂಥ ದುರ್ವರ್ತನೆಗಳು ಎದುರಾಗದಿರುವಂತೆ ಬಿಸಿಸಿಐ ಎಚ್ಚರಿಕೆ ವಹಿಸಿದೆ. ಇದಕ್ಕಾಗಿ ಪ್ರೇಕ್ಷಕರಿಗೆ ಕ್ರೀಡಾಂಗಣದೊಳಗೆ ಜನಾಂಗೀಯ ನಿಂದನೆ, ಧಾರ್ಮಿಕ ಅಥವಾ ರಾಜಕೀಯ ಚಟುವಟಿಕೆ, ಅಸಭ್ಯ ಭಾಷೆ ಬಳಸದಂತೆ ನಿರ್ಬಂಧ ಹೇರಲಾಗಿದೆ. ಇದನ್ನು ಮೀರಿದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ.
ಒಂದೇ ಗಂಟೆಯಲ್ಲಿ 15 ಸಾವಿರ ಟಿಕೆಟ್ ಸೋಲ್ಡ್‌ಔಟ್!
2ನೇ ಟೆಸ್ಟ್ ಪಂದ್ಯದ ಒಟ್ಟು 15 ಸಾವಿರ ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟಕ್ಕೆ ಇಡಲಾಗಿತ್ತು. ಸೋಮವಾರ ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭಗೊಂಡ 60 ನಿಮಿಷಗಳಲ್ಲೇ ಎಲ್ಲ 15 ಸಾವಿರ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ತಿಳಿಸಿದೆ. ಕರೊನಾ ಭೀತಿಯಿಂದಾಗಿ ಈ ಬಾರಿ ಆನ್‌ಲೈನ್‌ನಲ್ಲಿ ಮಾತ್ರ ಟಿಕೆಟ್ ಮಾರಾಟ ಮಾಡಲಾಗುತ್ತಿದ್ದು, ಕೌಂಟರ್/ಬಾಕ್ಸ್ ಆಫೀಸ್ ಟಿಕೆಟ್ ಮಾರಾಟ ಮಾಡಲಾಗುತ್ತಿಲ್ಲ. ಪ್ರತಿದಿನಕ್ಕೆ 100, 150 ಮತ್ತು 200 ರೂ. ಮೌಲ್ಯದ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಸ್ಥಳೀಯಾಡಳಿತದ ಜತೆಗಿನ ಬಿಕ್ಕಟ್ಟಿನಿಂದಾಗಿ 2012ರಿಂದ ಬಂದ್ ಆಗಿದ್ದ 3 ಗ್ಯಾಲರಿಗಳ ಸಹಿತ ಕ್ರೀಡಾಂಗಣದ ಎಲ್ಲ ಸ್ಟಾೃಂಡ್‌ಗಳಿಗೆ ಈ ಬಾರಿ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ. ಕ್ರೀಡಾಂಗಣದ ಒಟ್ಟು ಪ್ರೇಕ್ಷಕರ ಸಾಮರ್ಥ್ಯ 38 ಸಾವಿರ ಆಗಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪ್ರತಿದಿನ ಗರಿಷ್ಠ 15 ಸಾವಿರ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ.
ಸಾಮಾಜಿಕ ಅಂತರವನ್ನು ಮರೆತ ಕ್ರಿಕೆಟ್ ಪ್ರೇಮಿಗಳು!
ಆನ್‌ಲೈನ್ ಮೂಲಕ ಬುಕ್ ಮಾಡಿದ್ದ ಟಿಕೆಟ್‌ನ ಮೂಲಪ್ರತಿಯನ್ನು ಪಡೆಯಲು ಗುರುವಾರ ಎಂಎ ಚಿದಂಬರಂ ಕ್ರೀಡಾಂಗಣದ ಎದುರು ಮುಗಿಬಿದ್ದ ಕ್ರಿಕೆಟ್ ಪ್ರೇಮಿಗಳು, ಸಾಮಾಜಿಕ ಅಂತರವನ್ನು ಸಂಪೂರ್ಣವನ್ನು ಮರೆತಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರೂ ಪರದಾಡಿದರು.
ಭಾರತ ತಂಡದಲ್ಲಿ 3 ಬದಲಾವಣೆ?
ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡ ಭಾರತ ತಂಡದಲ್ಲಿ ಒಟ್ಟು 3 ಬದಲಾವಣೆಯ ನಿರೀಕ್ಷೆ ಇದೆ. ಶಾಬಾಜ್ ನದೀಂ ಬದಲಿಗೆ ಅಕ್ಷರ್ ಪಟೇಲ್ ಸ್ಥಾನ ಪಡೆಯುವುದು ಈಗಾಗಲೆ ಬಹುತೇಕ ಖಚಿತವೆನಿಸಿದೆ. ಅಕ್ಷರ್ ಈಗ ಫಿಟ್ ಆಗಿ ತಂಡಕ್ಕೆ ಮರಳಿದ್ದರಿಂದ ನದೀಂ ಮತ್ತು ರಾಹುಲ್ ಚಹರ್ ಮತ್ತೆ ಮೀಸಲು ಆಟಗಾರರ ಪಟ್ಟಿಗೆ ಮರಳಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಮೊಹಮದ್ ಸಿರಾಜ್ ಕೂಡ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸ್ಥಾನವನ್ನು ವೇಗದ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತುಂಬುವ ಸಾಧ್ಯತೆ ಇದ್ದರೆ, ಅಹರ್ನಿಶಿ ಟೆಸ್ಟ್‌ಗೆ ಪೂರ್ವಭಾವಿಯಾಗಿ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ನಿರೀಕ್ಷೆ ಇದೆ. ಆಗ ಅವರ ಸ್ಥಾನವನ್ನು ಸಿರಾಜ್ ತುಂಬಲಿದ್ದಾರೆ.
ಕೊನೇ 2 ಟೆಸ್ಟ್‌ಗೂ ಜಡೇಜಾ ಡೌಟ್
ಆಸ್ಟ್ರೇಲಿಯಾ ಪ್ರವಾಸ ಸಿಡ್ನಿ ಟೆಸ್ಟ್‌ನಲ್ಲಿ ಎಡಗೈ ಹೆಬ್ಬೆರಳು ಕೀಲು ತಪ್ಪಿದ್ದ ಕಾರಣ, ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ, ಸರಣಿಯ ಕೊನೇ 2 ಟೆಸ್ಟ್ ಪಂದ್ಯಗಳಿಗೂ ಫಿಟ್ ಆಗುವುದು ಅನುಮಾನವೆನಿಸಿದೆ. ಮೊದಲ ಟೆಸ್ಟ್‌ನಲ್ಲಿ ಸೋತು ಒತ್ತಡಕ್ಕೆ ಸಿಲುಕಿರುವ ಭಾರತ ತಂಡಕ್ಕೆ ಇದು ಮತ್ತಷ್ಟು ಹಿನ್ನಡೆಯ ವಿಚಾರವಾಗಿದೆ. ತವರಿಗೆ ಮರಳುವ ಮುನ್ನ ಆಸ್ಟ್ರೇಲಿಯಾದಲ್ಲೇ ಶಸಚಿಕಿತ್ಸೆಗೆ ಒಳಗಾಗಿದ್ದ 32 ವರ್ಷದ ಜಡೇಜಾ, ಸದ್ಯ ಬೆಂಗಳೂರಿನ ಎನ್‌ಸಿಎಯಲ್ಲಿ ಗಾಯದಿಂದ ಚೇತರಿಕೆಯ ಬಗ್ಗೆ ಪರಿಶೀಲನೆಗೆ ಒಳಗಾಗುತ್ತಿದ್ದಾರೆ.
ಬಟ್ಲರ್ ನಿರ್ಗಮನ, ಆಂಡರ್‌ಸನ್‌ಗೆ ರೆಸ್ಟ್?
ಗೆಲುವಿನ ನಡುವೆಯೂ ಇಂಗ್ಲೆಂಡ್ ತಂಡ 2ನೇ ಟೆಸ್ಟ್ ಪಂದ್ಯಕ್ಕೆ ಕೆಲ ಬದಲಾವಣೆಗಳನ್ನು ಕಾಣಲಿದೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಮೊದಲ ಟೆಸ್ಟ್ ಮುಗಿದ ಬೆನ್ನಲ್ಲೇ ತವರಿಗೆ ನಿರ್ಗಮಿಸಿದ್ದಾರೆ. ಇಂಗ್ಲೆಂಡ್ ತಂಡದ ಆವರ್ತನ ವಿಶ್ರಾಂತಿ ಪದ್ಧತಿ ಇದಕ್ಕೆ ಕಾರಣವಾಗಿದೆ. 2ನೇ ಟೆಸ್ಟ್‌ನಲ್ಲಿ ಬೆನ್ ೆಕ್ಸ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಇನ್ನು ಮೊದಲ ಟೆಸ್ಟ್‌ನಲ್ಲಿ ರಿವರ್ಸ್ ಸ್ವಿಂಗ್ ದಾಳಿಯ ಮೂಲಕ ಭಾರತ ತಂಡವನ್ನು ಕಾಡಿದ ನಡುವೆಯೂ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ 2ನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆಯುವ ನಿರೀಕ್ಷೆ ಇದೆ. 38 ವರ್ಷದ ಆಂಡರ್‌ಸನ್‌ಗೆ ಹೆಚ್ಚಿನ ಕಾರ್ಯದೊತ್ತಡ ಎದುರಾಗುವುದನ್ನು ತಪ್ಪಿಸಲು ಆವರ್ತನ ಪದ್ಧತಿಯನ್ವಯ ಈ ಬಾರಿ ಮತ್ತೋರ್ವ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಕಣಕ್ಕಿಳಿಯುವ ನಿರೀಕ್ಷೆ ಇದೆ. ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಈಗಾಗಲೆ ಈ ಬಗ್ಗೆ ಸುಳಿವು ಕೂಡ ಬಿಟ್ಟುಕೊಟ್ಟಿದ್ದಾರೆ. ಶ್ರೀಲಂಕಾದಲ್ಲೂ ಆಂಡರ್‌ಸನ್ ಮತ್ತು ಬ್ರಾಡ್ ಆವರ್ತನ ಪದ್ಧತಿಯನ್ವಯ ತಲಾ 1 ಟೆಸ್ಟ್ ಆಡಿದ್ದರು.
ಇಂಗ್ಲೆಂಡ್ ಟಿ20 ತಂಡ ಪ್ರಕಟ
ಅಹಮದಾಬಾದ್‌ನಲ್ಲಿ ಮಾರ್ಚ್ 12ರಿಂದ 20ರವರೆಗೆ ಆತಿಥೇಯ ಭಾರತ ತಂಡದ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳಾದ ಜೋಸ್ ಬಟ್ಲರ್ ಮತ್ತು ಜಾನಿ ಬೇರ್‌ಸ್ಟೋ ತಂಡಕ್ಕೆ ಮರಳಿದ್ದಾರೆ. ಬಟ್ಲರ್ ಮೊದಲ ಟೆಸ್ಟ್ ಮುಗಿದ ಬೆನ್ನಲ್ಲೇ ತವರಿಗೆ ಮರಳಿದ್ದರೆ, ಬೇರ್‌ಸ್ಟೋಗೆ ಮೊದಲ 2 ಟೆಸ್ಟ್‌ಗಳಿಂದ ವಿಶ್ರಾಂತಿ ನೀಡಲಾಗಿದೆ. ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದಿರುವ ಸ್ಯಾಮ್ ಕರ‌್ರನ್ ಕೂಡ ಚುಟುಕು ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ.
ಟಿ20 ತಂಡ: ಇವೊಯಿನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಜ್ರೋಾ ಆರ್ಚರ್, ಜಾನಿ ಬೇರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ‌್ರನ್, ಟಾಮ್ ಕರ‌್ರನ್, ಕ್ರಿಸ್ ಜೋರ್ಡನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಮಾರ್ಕ್ ವುಡ್.