ಪ್ಯಾರಿಸ್​ ಒಲಿಂಪಿಕ್ಸ್​ ಸಮಾರೋಪ ಸಮಾರಂಭದಲ್ಲಿ ಅವಳಿ ಕಂಚಿನ ತಾರೆ ಮನು ಭಾಕರ್​ಗೆ ವಿಶೇಷ ಗೌರವ

web manu
Published on

ಪ್ಯಾರಿಸ್: ಅವಳಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದ ಶೂಟರ್​ ಮನು ಭಾಕರ್​ ಮುಂದಿನ ಭಾನುವಾರ ನಡೆಯಲಿರುವ ಪ್ಯಾರಿಸ್​ ಒಲಿಂಪಿಕ್ಸ್​ ಸಮಾರೋಪ ಸಮಾರಂಭಕ್ಕೆ ಭಾರತ ತಂಡದ ಧ್ವಜಧಾರಿಯಾಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಅವರು ತನ್ನ ಎಲ್ಲ 3 ಸ್ಪರ್ಧೆಗಳು ಈಗಾಗಲೆ ಮುಗಿದಿದ್ದರೂ, ಭಾನುವಾರದವರೆಗೂ ಕ್ರೀಡಾಗ್ರಾಮದಲ್ಲೇ ಉಳಿದುಕೊಳ್ಳಬೇಕಾಗಿದೆ. ಮನು 10 ಮೀ. ಏರ್​ಪಿಸ್ತೂಲ್​ನಲ್ಲಿ ಕಂಚು ಜಯಿಸುವ ಮೂಲಕ ಪ್ಯಾರಿಸ್​ನಲ್ಲಿ ಭಾರತದ ಪದಕ ಖಾತೆ ತೆರೆದಿದ್ದರು. ಬಳಿಕ ಭಾರತಕ್ಕೆ 2ನೇ ಪದಕವನ್ನೂ ಅವರೇ ಗೆದ್ದುಕೊಟ್ಟಿದ್ದರು. ಸರಬ್ಜೋತ್​ ಸಿಂಗ್​ ಜತೆಗೂಡಿ ಮಿಶ್ರ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದರು.

"ಮನು ಅವರನ್ನು ಧ್ವಜಧಾರಿಯನ್ನಾಗಿ ಆರಿಸಲಾಗಿದೆ. ಅವರ ಅಸಾಧಾರಣ ನಿರ್ವಹಣೆ ತೋರಿದ್ದಾರೆ ಮತ್ತು ಇದಕ್ಕೆ ಅರ್ಹರಾಗಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್​ ಸಂಸ್ಥೆಯ (ಐಒಎ) ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಸಮಾರೋಪ ಸಮಾರಂಭದ ಕ್ರೀಡಾಪಟುಗಳ ಪಥ ಸಂಚಲನಕ್ಕೆ ಭಾರತ ತಂಡ ಪುರುಷರ ಧ್ವಜಧಾರಿಯೊಬ್ಬರನ್ನೂ ಆರಿಸಬೇಕಾಗಿದ್ದು, ಅದು ಇನ್ನೂ ನಿರ್ಧಾರವಾಗಿಲ್ಲ. ಭಾರತದ ಪುರುಷ ಪದಕ ವಿಜೇತರು ಈ ಅವಕಾಶಕ್ಕಾಗಿ ಸ್ಪರ್ಧಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net