

ಜೈಪುರ: ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-17ರಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ತಂಡದ ವಿರುದ್ಧ ತನ್ನ ಎಂದಿನ ತಿಳಿ ನಸುಗೆಂಪು ಬಣ್ಣಕ್ಕೆ ಬದಲಾಗಿ ಕಡು ನಸುಗೆಂಪು ಬಣ್ಣದ ವಿಶೇಷ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ರಾಜಸ್ಥಾನದ ಮಹಿಳೆಯರ ಸಬಲೀಕರಣಕ್ಕೆ ನೆರವಾಗುವುದೇ ಇದರ ಹಿಂದಿನ ಉದ್ದೇಶವಾಗಿದೆ.
ರಾಜಸ್ಥಾನ ರಾಯಲ್ಸ್ ತಂಡ ಈ ಪಂದ್ಯವನ್ನು ಮಹಿಳೆಯರಿಗೆ ಅರ್ಪಿಸುತ್ತಿದ್ದು, ವಿಶೇಷ ಪಿಂಕ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. "ಪಿಂಕ್ ಪ್ರಾಮಿಸ್' ಅಭಿಯಾನದ ಅಂಗವಾಗಿ ರಾಜಸ್ಥಾನ ರಾಯಲ್ಸ್ ತಂಡ ರಾಜಸ್ಥಾನದ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ಬೆಂಬಲ ಸೂಚಿಸಲಿದೆ.
ಪಂದ್ಯದ ಪ್ರತಿ ಟಿಕೆಟ್ನಲ್ಲಿ 100 ರೂ.ಗಳನ್ನು ಇದಕ್ಕೆ ಸಮರ್ಪಿಸಲಿದೆ. ಜತೆಗೆ "ಆಲ್ ಪಿಂಕ್ ರಾಯಲ್ಸ್' ಜೆರ್ಸಿ ಮಾರಾಟದ ಮೊತ್ತವನ್ನೂ ಇದಕ್ಕೆ ವಿನಿಯೋಗಿಸಲಿದೆ. ರಾಜಸ್ಥಾನ-ಆರ್ಸಿಬಿ ತಂಡಗಳು ಪಂದ್ಯದಲ್ಲಿ ಸಿಡಿಸುವ ಪ್ರತಿ ಸಿಕ್ಸರ್ಗೆ ಜೈಪುರ ಜಿಲ್ಲೆಯ ಸಂಭರ್ ಗ್ರಾಮದ ಪ್ರತಿ 6 ಮನೆಗಳಿಗೆ ಸೌರಶಕ್ತಿಯನ್ನು ಒದಗಿಸಲಿದೆ.